ಚಳ್ಳಕೆರೆ: ವಯೋವೃದ್ಧರಿಗೆ ಆಶ್ರಯ ನೀಡಿ ಉತ್ತಮ ಸೌಲಭ್ಯಗಳನ್ನು ಕಲ್ಪಿಸುತ್ತಿರುವ ಎಸ್.ಮಂಜುಳಮ್ಮ ಅವರ ಕಾರ್ಯ ಪ್ರಶಂಸನೀಯ ಎಂದು ನಗರಸಭೆ ಅಧ್ಯಕ್ಷೆ ಆರ್.ಮಂಜುಳಾ ಪ್ರಸನ್ನಕುಮಾರ್ ಹೇಳಿದರು.
ಬೆಂಗಳೂರು ರಸ್ತೆಯ ಬನಶ್ರೀ ವೃದ್ಧಾಶ್ರಮದ ದಶಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕಳೆದ ೧೦ ವರ್ಷಗಳಿಂದ ತಾಲೂಕು ಸೇರಿದಂತೆ ರಾಜ್ಯದವಿವಿಧ ಭಾಗಗಳಿಂದ ಬಂದ ವೃದ್ಧರಿಗೆ ಆಶ್ರಮದಲ್ಲಿ ಎಲ್ಲಾ ಸೌಲಭ್ಯ ನೀಡುತ್ತಿದ್ದಾರೆ. ಆಶ್ರಮವನ್ನು ಯಶಸ್ವಿಯಾಗಿ ನಡೆಸುವ ದೃಷ್ಟಿಯಿಂದ ಅನೇಕ ಆರ್ಥಿಕ ನೆರವು ನೀಡಿದ್ದಾರೆ. ಬನಶ್ರೀ ವೃದ್ಧಾಶ್ರಮ ಇನ್ನೂ ಉತ್ತಮವಾಗಿ ಬೆಳೆದು ಆಶ್ರಯ ಬಯಸಿಬಂದವರಿಗೆ ಸೌಲಭ್ಯ ನೀಡಿ ನೆರವಾಗಲಿ ಎಂದರು.
ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ತಿಪ್ಪೇಸ್ವಾಮಿ ಮಾತನಾಡಿ, ವಯೋವೃದ್ಧರಿಗೆ ಈ ವೃದ್ಧಾಶ್ರಮ ಉತ್ತಮ ನೆಲೆ ಕಲ್ಪಿಸಿದೆ. ವೃದ್ಧಾಶ್ರಮದಲ್ಲಿರುವ ಎಲ್ಲರೂ ಆರೋಗ್ಯವಾಗಿ ಯಾವುದೇ ಸಮಸ್ಯೆ ಇಲ್ಲದೆ ನೆಮ್ಮದಿ ಜೀವನ ನಡೆಸುತ್ತಿದ್ದಾರೆ. ಹಲವಾರು ಬಾರಿ ಆಶ್ರಮಕ್ಕೆ ಭೇಟಿ ನೀಡಿದ್ದೇನೆ. ಆಶ್ರಮ ಸಂಸ್ಥಾಪಕಿ ಮಂಜುಳಮ್ಮ ಬಹಳ ಶ್ರಮವಹಿಸಿ ಈ ಆಶ್ರಮ ನಡೆಸುತ್ತಾ ಬಂದಿದ್ದಾರೆ. ಅನೇಕ ದಾನಿಗಳು ನೆರವು ನೀಡಿರುವುದಾಗಿ ತಿಳಿದುಬಂತು. ಮುಂದಿನ ದಿನಗಳಲ್ಲಿ ಬನಶ್ರೀ ವೃದ್ಧಾಶ್ರಮ ನಿರಾಶ್ರಿತರಿಗೆ ಆಶ್ರಯತಾಣವಾಗಲಿ ಎಂದು ಆಶಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವೃದ್ಧಾಶ್ರಮದ ಸಂಸ್ಥಾಪಕಿ ಎಸ್.ಮಂಜುಳಮ್ಮ ಮಾತನಾಡಿ, ಪ್ರಾರಂಭದ ಹಂತದಲ್ಲಿ ವೃದ್ಧಾಶ್ರಮ ಆರಂಭಿಸುವ ಬಗ್ಗೆ ಚರ್ಚೆ ನಡೆಸಿದಾಗ ಸೂಕ್ತ ಸ್ಪಂದನೆ ಸಿಗಲಿಲ್ಲ. ಆದರೂ ದೇವರನ್ನು ನಂಬಿ ನಾನು ಈ ಕೆಲಸವನ್ನು ಪ್ರಾರಂಭಿಸಿದೆ. ಹಂತ, ಹಂತವಾಗಿ ಆಶ್ರಮಕ್ಕೆ ಅಗತ್ಯವಿರುವ ನೆರವು ಪಡೆಯಲು ಅನೇಕರನ್ನು ಸಂಪರ್ಕಿಸಿದೆ. ಎಲ್ಲರೂ ನಾವು ಮಾಡುವ ಉತ್ತಮ ಕಾರ್ಯವನ್ನು ಪ್ರೋತ್ಸಾಹಿಸಿ, ಪ್ರಶಂಸಿಸಿ ನೆರವು ನೀಡಿದ್ದಾರೆ. ವೃದ್ಧಾಶ್ರಮ ಮುನ್ನಡೆಯಲು ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಗದ್ದಿಗೆತಿಪ್ಪೇಸ್ವಾಮಿ, ನಗರಸಭಾ ಸದಸ್ಯ ಕೆ.ವೀರಭದ್ರಪ್ಪ, ಗ್ರಾಪಂ ಸದಸ್ಯರಾದ ಎಂ.ಕುಮಾರಸ್ವಾಮಿ, ಎನ್.ಮಂಜುನಾಥ, ಕಾಂಗ್ರೆಸ್ ಮುಖಂಡರಾದ ಜಿ.ಟಿ.ಶಶಿಧರ, ಆರ್.ಪ್ರಸನ್ನಕುಮಾರ್, ಮಾಜಿ ಗ್ರಾಪಂ ಅಧ್ಯಕ್ಷೆ ಶೈಲಜಾಮಂಜುನಾಥ, ಡಿ.ಶ್ರೀನಿವಾಸ್, ಯತೀಶ್ ಮುಂತಾದವರು ಉಪಸ್ಥಿತರಿದ್ದರು.