ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲೆಯ ಭೇಟಿ ಕುರಿತು ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.
ಸರ್ಕಾರದ 14 ಇಲಾಖೆಗಳ ವ್ಯಾಪ್ತಿಗೆ ಬರುವ ಆಹಾರ ವಿತರಣೆ ಹಾಗೂ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಆಯೋಗ ಮೇಲ್ವಿಚಾರಣೆ ನಡೆಸಿ ಸಮಸ್ಯೆಗಳನ್ನು ಪರಿಹರಿಸುತ್ತಿದೆ. ದುರ್ಬಲವರ್ಗದ ಜನರಿಗೆ ದೊರಕಬೇಕಾದ ಆಹಾರದ ಹಕ್ಕನ್ನು ಸಂರಕ್ಷಿಸಲಾಗುತ್ತಿದೆ. ಸಾರ್ವಜನಿಕರಿಂದ ಕೇಳಿ ಬಂದ ದೂರುಗಳ ಆಧಾರದಲ್ಲಿ ರಾಜ್ಯದ 31 ಜಿಲ್ಲೆಗಳಲ್ಲಿ ಆಯೋಗದಿಂದ ಪ್ರವಾಸ ಕೈಗೊಳ್ಳಲಾಗುತ್ತಿದೆ. ಆಯೋಗ ಭೇಟಿ ನೀಡುವ ಜಿಲ್ಲೆಯ ಬಗ್ಗೆ ಮೊದಲೇ ಮಾಹಿತಿ ನೀಡಿದರೆ ಅಧಿಕಾರಿಗಳು ತಾತ್ಕಾಲಿಕವಾಗಿ ಸಮಸ್ಯೆಗಳನ್ನು ಮುಚ್ಚಿಡುವ ಸಂಭವವಿರುತ್ತದೆ. ಈ ಹಿನ್ನೆಲೆಯಲ್ಲಿ ಅಧಿಕೃತವಾಗಿ ಮಾಹಿತಿ ನೀಡದೆ ಪ್ರವಾಸ ಕೈಗೊಂಡು ಸಮಸ್ಯೆಗಳನ್ನು ಗುರುತಿಸಿ ಲೋಪ, ಭ್ರಷ್ಟಾಚಾರ ಕಂಡುಬಂದರೆ ಸಂಬಂದಪಟ್ಟ ಅಧಿಕಾರಿಗಳ ವಿರುದ್ದ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಡಾ.ಹೆಚ್.ಕೃಷ್ಣ ತಿಳಿಸಿದರು.ಡಿ.29 ರಿಂದ ಡಿ.31 ವರೆಗೆ ಆಯೋಗದಿಂದ ಚಿತ್ರದುರ್ಗ ಜಿಲ್ಲೆ ಪ್ರವಾಸ ಕೈಗೊಳ್ಳಲಾಗಿದ್ದು ಮೊದಲ ದಿನ ಆಹಾರ ಗೋದಾಮು, ಅಂಗನವಾಡಿ, ಇಂದಿರಾ ಗಾಂಧಿ ವಸತಿ ಶಾಲೆ, ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗ, ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತರ ವಿದ್ಯಾರ್ಥಿನಿಲಯಗಳು ಸೇರಿದಂತೆ ಹಲವು ಪಡಿತರ ವಿತರಣಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಈ ವೇಳೆ ಹಲವಾರು ಸಮಸ್ಯೆಗಳು ಆಯೋಗಕ್ಕೆ ಕಂಡುಬಂದಿವೆ. ಈ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಸ್ಪಷ್ಟನೆ ಕೋರಲಾಗಿದೆ ಎಂದು ಅವರು ಹೇಳಿದರು.
ಸೀಬಾರ ಸಮೀಪದ ಮೇದಾರ ಕೇತೇಶ್ವರ ಮಠದಲ್ಲಿ ಬಾಡಿಗೆ ಪಡೆದು ನಡೆಸುತ್ತಿರುವ ಇಂದಿರಾಗಾಂಧಿ ವಸತಿ ಶಾಲೆಗೆ ಆಯೋಗ ಭೇಟಿ ನೀಡಿತ್ತು. ಕನಿಷ್ಠ ಮೂಲಭೂತ ಸೌಕರ್ಯಗಳು ಇಲ್ಲದೆ 350ಕ್ಕೂ ಹೆಚ್ಚು ಮಕ್ಕಳು ನೆಲದ ಮೇಲೆ ಕುಳಿತು ಪಾಠ ಕೇಳುತ್ತಿದ್ದಾರೆ. ಅಡುಗೆ ಮನೆಯಲ್ಲಿ ಯಾವುದೇ ಶುಚ್ಚಿತ್ವ ಕಾಪಾಡಿಕೊಂಡಿಲ್ಲ. ಗ್ರಂಥಾಲಯ ಹಾಗೂ ಕಂಪ್ಯೂಟರ್ ಸೌಲಭ್ಯ ಸಹ ಇಲ್ಲ. ಸರ್ಕಾರದಿಂದ ತಿಂಗಳಿಗೆ ಲಕ್ಷಾಂತರ ರು. ಬಾಡಿಗೆ ನೀಡಲಾಗುತ್ತಿದೆ. ಆದರೆ ಅದಕ್ಕೆ ತಕ್ಕಂತೆ ಸೌಲಭ್ಯಗಳು ಇಲ್ಲ. ಇದನ್ನು ಗಮನಿಸಿದ ಆಯೋಗ ಕ್ರೈಸ್ ಕಾರ್ಯನಿರ್ವಾಹಕ ನಿರ್ದೇಶಕರಿಂದ ಸ್ಪಷ್ಟನೆ ಕೋರಿದೆ. ಒಂದು ವೇಳೆ ಅಧಿಕಾರಿಗಳ ತಪ್ಪು ಕಂಡುಬಂದರೆ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.ನ್ಯಾಯಬೆಲೆ ಅಂಗಡಿಯಲ್ಲಿ ಭ್ರಷ್ಟಾಚಾರ ತಡೆಗಟ್ಟಲು ಹಾಗೂ ಸುಗಮವಾಗಿ ಆಹಾರ ಧಾನ್ಯಗಳ ವಿತರಣೆಗೆ ಆಯೋಗ ಕ್ರಮ ಕೈಗೊಳ್ಳುತ್ತಿದೆ. ಇದಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಆಯೋಗದ ಅಧ್ಯಕ್ಷರು, ಸದಸ್ಯರು ಸೇರಿದಂತೆ ಆಹಾರ ಇಲಾಖೆ ಅಧಿಕಾರಿಗಳ ಹೆಸರು ಹಾಗೂ ಮೊಬೈಲ್ ನಂಬರುಳ್ಳ ಫಲಕಗಳ ಅಳವಡಿಕೆಗೆ ಸೂಚನೆ ನೀಡಲಾಗಿದೆ ಎಂದರು.ಕೆಲವು ಶಾಲೆಗಳಲ್ಲಿ ಬಿಸಿಯೂಟದ ಸಂದರ್ಭದಲ್ಲಿ ಮೊಟ್ಟೆ ವಿತರಣೆ ಮಾಡದಿರುವುದು ಆಯೋಗದ ಗಮನಕ್ಕೆ ಬಂದಿದೆ. ಪೌಷ್ಠಿಕ ಆಹಾರವಾದ ಮೊಟ್ಟೆ, ಮಕ್ಕಳ ದೈಹಿಕ ಬೆಳವಣಿಗೆಗೆ ಅಗತ್ಯವಾಗಿದೆ. ಶಾಲೆಗಳಲ್ಲಿ ತಾರತಮ್ಯ ಮಾಡದೆ ಕಡ್ಡಾಯವಾಗಿ ಮೊಟ್ಟೆ ವಿತರಣೆಗೆ ಆಯೋಗದಿಂದ ಸೂಚನೆ ನೀಡಲಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಗರ್ಭಿಣಿಯರು ಹಾಗೂ 3 ವರ್ಷದ ಒಳಗಿನ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡಲಾಗುತ್ತಿದೆ. ಈ ಆಹಾರದ ಗುಣಮಟ್ಟ ಕಾಪಾಡುವಂತೆ ನಿರ್ದೇಶನ ನೀಡಲಾಗಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಆಯೋಗದ ಸದಸ್ಯರಾದ ಲಿಂಗರಾಜ ಕೋಟೆ, ಮಾರುತಿ ಎಂ. ದೊಡ್ಡಲಿಂಗಣ್ಣನವರ, ಕೆ.ಎಸ್.ವಿಜಯಲಕ್ಷ್ಮಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವಿಜಯಕುಮಾರ್, ಕೆ.ಎಸ್.ಸಿ.ಎಸ್.ಇ ಜಿಲ್ಲಾ ವ್ಯವಸ್ಥಾಪಕ ಎಸ್.ಕೆ.ಮಲ್ಲಿಕಾರ್ಜುನ ಉಪಸ್ಥಿತರಿದ್ದರು.