- ಹಿರೇಗೊಣಿಗೆರೆಯಲ್ಲಿ ಗ್ರಾಮೀಣ ಶಾಲಾ ಮಕ್ಕಳಿಗೆ ಬೇಸಿಗೆ ಶಿಬಿರದಲ್ಲಿ ವೈ.ಸುರೇಶ್
ಕನ್ನಡಪ್ರಭ ವಾರ್ತೆ ಹೊನ್ನಾಳಿ
ತಾಲೂಕಿನ ಹಿರೇಗೋಣಿಗೆರೆ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ, ಗ್ರಾಪಂ ಗ್ರಂಥಾಲಯ ಹಾಗೂ ಗ್ರಾಮೀಣ ಮಾಹಿತಿ ಕೇಂದ್ರ ಆಶ್ರಯದಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಉಚಿತವಾಗಿ ಏ.29ರಿಂದ ಮೇ 15ರವರೆಗೆ ಒಟ್ಟು 17 ದಿನಗಳ ಕಾಲ ಬೇಸಿಗೆ ಶಿಬಿರ ನಡೆಸಲಾಗುತ್ತಿದೆ ಎಂದು ಗ್ರಾಮೀಣ ಗ್ರಂಥಾಲಯದ ಗ್ರಂಥಪಾಲಕ ವೈ.ಸುರೇಶ್ ತಿಳಿಸಿದರು.ಶನಿವಾರ ಗ್ರಾಮೀಣ ಮಕ್ಕಳ 11ನೇ ದಿನದ ಬೇಸಿಗೆ ಶಿಬಿರ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ನಗರ ಪ್ರದೇಶಗಳಲ್ಲಿ ಸಾವಿರಾರು ರು. ಶುಲ್ಕ ಪಡೆದು ಇಂತಹ ಬೇಸಿಗೆ ಶಿಬಿರಗಳನ್ನು ನಡೆಸಲಾಗುತ್ತದೆ. ಆದರೆ, ಹಿರೇಗೋಣಿಗೆರೆಯಲ್ಲಿ ಉಚಿತವಾಗಿ ಸರ್ಕಾರಿ ಪ್ರಾಥಮಿಕ ಶಾಲೆಗಳ ಬಡಮಕ್ಕಳಿಗೆ ಸ್ಥಳೀಯ ಗ್ರಾಮ ಪಂಚಾಯಿತಿ ಕಚೇರಿ ಅವರಣದಲ್ಲಿ ಬೇಸಿಗೆ ಶಿಬಿರ ನಡೆಸಲಾಗುತ್ತಿದೆ. ಶಿಬಿರದಲ್ಲಿ 50ಕ್ಕೂ ಹೆಚ್ಚು ಮಕ್ಕಳು ಅತ್ಯಂತ ಉತ್ಸಾಹದಿಂದ ಭಾಗವಹಿಸಿ, ಪತಿದಿನವೂ ತಪ್ಪದೇ ಶಿಬಿರಕ್ಕೆ ಹಾಜರಾಗಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷ ಎಂದರು.
ಶಿಬಿರಕ್ಕೆ ಪ್ರತಿದಿನ ವಿವಿಧ ಕ್ಷೇತ್ರಗಳಲ್ಲಿನ ಸಂಪನ್ಮೂನ ವ್ಯಕ್ತಿಗಳನ್ನು ಕರೆಯಿಸಿ, ಆ ಕ್ಷೇತ್ರಗಳ ಬಗ್ಗೆ ಅವರಿಗೆ ಮಾಹಿತಿ ಕೊಡಿಸಲಾಗುತ್ತಿದೆ. ಪಶುವೈದ್ಯ ಇಲಾಖೆ, ನೀರಾವರಿ, ಶಿಕ್ಷಣ, ಗ್ರಾಮೀಣಾಭಿವೃದ್ಧಿ, ಕೃಷಿ ಇಲಾಖೆ ಈ ರೀತಿ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಸಂಪನ್ಮೂಲ ವ್ಯಕ್ತಿಯಾಗಿ ಕರೆಯಿಸಿ, ಮಕ್ಕಳಿಗೆ ಮಾಹಿತಿ ಕೊಡಿಸಲಾಗುತ್ತಿದೆ. ಇದರ ಜೊತೆಗೆ ಪಕ್ಷಿಗಳು, ಪರಿಸರ ವೀಕ್ಷಣೆ ಮೂಲಕ ಮಕ್ಕಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಪ್ರತಿದಿನ ಪ್ರಾಥಮಿಕ ಶಾಲಾ ಶಿಕ್ಷಕರಾದ ಕೃಷ್ಣಮೂರ್ತಿ, ಪ್ರಕಾಶ್ ಮುಂತಾದವರು ಶಿಬಿರಕ್ಕೆ ಕರೆಯಿಸಿ ಪಠ್ಯ ವಿಷಯಗಳ ಬಗ್ಗೆ ಕೂಡ ಮಾಹಿತಿಗಳನ್ನು ಕೊಡಿಸಲಾಗುತ್ತಿದೆ ಎಂದರು.
- - -
ಹಿರೇಗೋಣಿಗೆರೆಯ ಗ್ರಾಪಂ ಕಚೇರಿ ಆವರಣದಲ್ಲಿ ಪ್ರಾಥಮಿಕ ಶಾಲಾ ಬಡಮಕ್ಕಳ ಬೇಸಿಗೆ ಶಿಬಿರದಲ್ಲಿ ಮಕ್ಕಳು ಪಾಲ್ಗೊಂಡರು.