ಕೊಪ್ಪಳ: ಸಚಿವ ಸ್ಥಾನ ತಪ್ಪಿದ್ದಕ್ಕೆ ನಾನು ರಾಜೀನಾಮೆ ನೀಡುತ್ತೇನೆ ಎಂದು ಹೇಳಿಯೇ ಇಲ್ಲ. ಅದೆಲ್ಲವೂ ಮಾಧ್ಯಮಗಳ ಸೃಷ್ಟಿ. ನಾನು ಪಕ್ಷದ ಶಿಸ್ತಿನ ಸಿಪಾಯಿ ಆಗಿದ್ದು, ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದ್ದಾರೆ.
ಅಭಿವೃದ್ಧಿ ಕಾಮಗಾರಿಗಳ ಅಡಿಗಲ್ಲು ಸಮಾರಂಭದ ಪ್ಲೆಕ್ಸ್‌ನಲ್ಲಿ ಸಿದ್ದರಾಮಯ್ಯ ಅವರ ಫೋಟೋ ಕೈಬಿಟ್ಟು ಹೋಗಿದ್ದರೆ ಅದು ನಮ್ಮ ಕಾರ್ಯಕರ್ತರಿಂದ ಆಗಿರುವ ತಪ್ಪಾಗಿದೆ ಎಂದರು.
ಗೆದ್ದಿರುವ ಎಲ್ಲರೂ ಸಚಿವರಾಗಲು ಅರ್ಹರು. ಹಾಗೆ ನೋಡಿದರೆ 70ಕ್ಕೂ ಹೆಚ್ಚು ಶಾಸಕರಿಗೆ ಸಚಿವ ಸ್ಥಾನ ನೀಡಬೇಕಾಗುತ್ತದೆ. ಅದರಲ್ಲಿ 50ಕ್ಕೂ ಹೆಚ್ಚು ಶಾಸಕರು ನನ್ನಂತೆ ಮೂರು ಬಾರಿಗಿಂತ ಹೆಚ್ಚು ಬಾರಿ ಗೆಲವು ಸಾಧಿಸಿದ್ದಾರೆ. ಎಲ್ಲರಿಗೂ ಸಚಿವ ಸ್ಥಾನ ನೀಡಲು ಸಾಧ್ಯವಿಲ್ಲ. ಸಚಿವ ಸ್ಥಾನ ಸಿಗದಿದ್ದಕ್ಕೆ ನೋವಾಗಿದೆಯೇ ಹೊರತು ಅದು ಪಕ್ಷದ ವಿರುದ್ಧದ ಅಸಮಾಧಾನವಲ್ಲ. ನನಗೆ ಸೂಕ್ತ ಸಮಯದಲ್ಲಿ ಪಕ್ಷ ಸೂಕ್ತ ಸ್ಥಾನಮಾನ ನೀಡಿಯೇ ನೀಡುತ್ತದೆ ಎನ್ನುವ ವಿಶ್ವಾಸವಿದೆ. ಹೀಗಾಗಿ, ನಾನು ರಾಜೀನಾಮೆ ನೀಡುತ್ತೇನೆ ಎನ್ನುವುದೆಲ್ಲ ಸುಳ್ಳು, ಉಳಿದ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.ಕೊಪ್ಪಳ ಜಿಲ್ಲೆಗೆ 2 ಸಚಿವ ಸ್ಥಾನ ಸಿಕ್ಕಿದೆ. ನನಗೆ ಯಾರ ಬಗ್ಗೆಯೂ ಮುನಿಸು ಇಲ್ಲ. ಇಬ್ಬರು ಸಚಿವರು ಜಿಲ್ಲೆಯವರೇ ಇರುವುದರಿಂದ ಇನ್ನಷ್ಟು ಅಭಿವೃದ್ಧಿಗೆ ಅವಕಾಶ ಆಗಲಿದೆ ಎಂದರು.
ಡಾ. ಯತೀಂದ್ರ ಸಿದ್ದರಾಮಯ್ಯ ಭವಿಷ್ಯದ ನಾಯಕರು. ಈ ವಿಷಯದಲ್ಲಿ ಮಾಧ್ಯಮದವರು ಅನಗತ್ಯ ಟ್ವಿಸ್ಟ್ ನೀಡಬೇಡಿ ಎಂದು ಮನವಿ ಮಾಡಿದರು.