ಅರಹತೊಳಲು ಕೆ.ರಂಗನಾಥ್
ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರುಶಿವಮೊಗ್ಗವನ್ನು ಮಲೆನಾಡಿನ ಹೆಬ್ಬಾಗಿಲು ಎಂದು ಕರೆಯಲಾಗುತ್ತದೆ. ಅಡಕೆ ಇಲ್ಲಿನ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಆದ್ದರಿಂದಲೇ ಜಿಲ್ಲೆಯಾದ್ಯಂತ ಸಾವಿರಾರು ಹೆಕ್ಟೇರ್ ಅಡಕೆ ತೋಟಗಳ ಕಾಣಬಹುದು. ಬಹುಪಾಲು ಕೃಷಿ ಜಲಾಶಯದ ನೀರನ್ನು ಅವಲಂಬಿಸಿದೆ. ಜೊತೆಗೆ ಕೆಲವೊಂದಿಷ್ಟು ಭಾಗದಲ್ಲಿ ಮಳೆಯಾಶ್ರಿತ ಕೃಷಿಭೂಮಿ ಇದೆ.
ಕಳೆದ ವರ್ಷ ಮಳೆಯ ಅಭಾವದಿಂದ ಕಂಗಾಲಾಗಿದ್ದ ರೈತರ ಮೊಗದಲ್ಲಿ ಮುಂಗಾರು ಪೂರ್ವ ಮಳೆ ಮಂದಹಾಸ ತಂದಿದೆ. ಮಳೆ ಆರಂಭವಾಗುತ್ತಿದ್ದಂತೆ ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ. ಹಿಂದಿನ ವರ್ಷ ಭೀಕರ ಬರಗಾಲದ ಪರಿಸ್ಥಿತಿ ಎದುರಿಸಿದ್ದ ರೈತರು ಬಹಳಷ್ಟು ತೋಟದ ಬೆಳೆಗಳ ಕಳೆದುಕೊಂಡಿದ್ದಾರೆ. ಉತ್ಸಾಹದಿಂದ ಬೆಳೆಸಿದ್ದ ಅಡಕೆ ತೋಟ ಬಿಸಿಲಿಗೆ ಒಣಗಿದವು. ಇದರಿಂದ ಅಡಕೆ ಸಸಿಗಳ ನರ್ಸರಿ ಮಾಡಿಕೊಂಡಿದ್ದವರು ಸಸಿಗಳು ಮಾರಾಟವಾಗದೇ ಭಾರಿ ನಷ್ಟ ಅನುಭವಿಸಿದ್ದರು. ನರ್ಸರಿ ಮಾಲೀಕರಿಗೆ ನೆಮ್ಮದಿಯ ನಿಟ್ಟುಸಿರು:ಆದರೆ ಈ ಬಾರಿ ಪರಿಸ್ಥಿತಿ ಸುಧಾರಿಸುವ ಲಕ್ಷಣ ಕಂಡು ಬರುತ್ತಿದೆ. ಈ ವರ್ಷ ಮಳೆ ಉತ್ತಮ ಆರಂಭ ಕಂಡಿದ್ದು, ಅಡಕೆ ಬೆಳೆಗಾರರು ತಮ್ಮ ತೋಟಗಳನ್ನು ವಿಸ್ತರಿಸಲು ಉತ್ಸುಕರಾಗುತ್ತಿದ್ದಾರೆ. ಹಳೆಯ ತೋಟದಲ್ಲಿ ಒಣಗಿದ್ದ ಅಡಕೆ ಸಸಿಗಳ ಜಾಗಕ್ಕೆ ಹೊಸ ಗಿಡಗಳ ನೆಡುತ್ತಿದ್ದಾರೆ. ಇನ್ನೂ ಕೆಲವರು ಹೊಸ ತೋಟಗಳನ್ನು ಮಾಡುತ್ತಿದ್ದಾರೆ. ಇದರಿಂದ ಅಡಕೆ ಸಸಿಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಇದರಿಂದಾಗಿ ನರ್ಸರಿಯ ಮಾಲೀಕರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಹೊಸ ಗಿಡಗಳ ಮಾರಾಟಕ್ಕೆ ಸಿದ್ಧತೆ:ಲಕ್ಷಾಂತರ ರುಪಾಯಿ ಬಂಡವಾಳ ಹಾಕಿ ನರ್ಸರಿ ಮಾಡಿದ ರೈತರು ಕಳೆದ ವರ್ಷ ಮಳೆಯ ಕೊರತೆಯಿಂದ ಸಾವಿರಾರು ಅಡಕೆ ಸಸಿಗಳು ಮಾರಾಟವಾಗದೇ ನಷ್ಟ ಅನುಭವಿಸಿದ್ದರು. ಜೊತೆಗೆ ಬೇಸಿಗೆಯಲ್ಲಿ ಭಾರಿ ಬಿಸಿಲಿನ ಹೊಡೆತಕ್ಕೆ ಸಸಿಗಳ ನಿರ್ವಹಣೆ ಮಾಡಲಾಗದೇ ಲಕ್ಷಾಂತರ ಸಸಿಗಳು ಒಣಗಿ ಹೋಗಿದ್ದವು. ಆದರೂ ಕೆಲ ರೈತರು ಈ ಬಾರಿ ಮತ್ತೆ ಹೊಸ ಅಡಕೆ ಗಿಡಗಳನ್ನು ಬೆಳೆಸಿ ಮಾರಾಟಕ್ಕೆ ಸಿದ್ಧ ಮಾಡಿದ್ದಾರೆ. ಕೆಲ ದಿನಗಳಿಂದ ಉತ್ತಮ ಮಳೆಯಾಗುತ್ತಿರುವುದರಿಂದ ಅಡಕೆ ಸಸಿ ಕೊಳ್ಳುವವರೂ ಕೂಡ ಉತ್ತಮ ಗುಣಮಟ್ಟದ ಸಸಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಅಡಕೆ ಸಸಿ ಗ್ರಾಹಕರು ನಾಲ್ಕಾರು ಜನರಲ್ಲಿ ವಿಚಾರಿಸಿ ಉತ್ತಮ ಬೀಜದ, ಗುಣಮಟ್ಟದ ಗಿಡಗಳು ಎಂದು ಖಾತ್ರಿಪಡಿಸಿಕೊಂಡು ಸಸಿಗಳ ಖರೀದಿಸುತ್ತಿದ್ದಾರೆ.ಕಳೆದ ವರ್ಷ ಮಳೆ ಬಾರದಿದ್ದ ಕಾರಣದಿಂದ ಸುಮಾರು 30 ಸಾವಿರ ಸಸಿಗಳು ಮಾರಾಟವಾಗದೇ ಒಣಗಿ ಹೋದವು. ಆದರೆ ಈ ಬಾರಿ ಪರಿಸ್ಥಿತಿ ಬದಲಾಗಿದೆ. ಮುಂಗಾರು ಪೂರ್ವ ಮಳೆಯಿಂದ ಸಸಿಗಳಿಗೆ ಬೇಡಿಕೆ ಹೆಚ್ಚಿದೆ.
- ಎಂ.ಸಿ.ಶಶಿಕುಮಾರ್, ಅರಹತೊಳಲು ಗ್ರಾಮದ ಅಡಕೆ ಸಸಿ ಬೆಳೆಗಾರ.