ಹುಬ್ಬಳ್ಳಿ: ಅಪಾರ ಭಕ್ತಗಣ ಹೊಂದಿರುವ, ಉತ್ತರ ಕರ್ನಾಟಕ ಭಾಗದ ಐತಿಹಾಸಿಕ ಮಠಗಳಲ್ಲಿ ಒಂದಾಗಿರುವ ಇಲ್ಲಿಯ ಮೂರುಸಾವಿರಮಠದ ಶ್ರೀ ಗುರುಸಿದ್ದೇಶ್ವರ ಶ್ರೀಗಳ ಮಹಾರಥೋತ್ಸವ ಸೋಮವಾರ ಸಂಜೆ ಅಪಾರ ಜನಸ್ತೋಮದ ನಡುವೆ ಸಂಭ್ರಮದಿಂದ ನೆರವೇರಿತು.
ಸಂಜೆ ಮೂರುಸಾವಿರ ಮಠದಿಂದ ಸಕಲ ವಾದ್ಯ ಮೇಳದೊಂದಿಗೆ ಆರಂಭವಾದ ಪಲ್ಲಕ್ಕಿ ಮೆರವಣಿಗೆಯು ಬಮ್ಮಾಪುರ ಓಣಿಯ ಗುರುಸಿದ್ದೇಶ್ವರ ಕಲ್ಯಾಣ ಮಂಟಪ (ಓಲಿ ಮಠ)ಕ್ಕೆ ತೆರಳಿತು. ಅಲ್ಲಿ ಪೂಜೆ ಸಲ್ಲಿಸಿದ ಬಳಿಕ ಪಲ್ಲಕ್ಕಿಯು ಮರಳಿ ಶ್ರೀಮಠಕ್ಕೆ ಆಗಮಿಸಿತು. ಆನಂತರ ಶ್ರೀಮಠದ ಆವರಣದಲ್ಲಿ ಗುರುಸಿದ್ದ ರಾಜಯೋಗೀಂದ್ರ ಶ್ರೀಗಳ ನೇತೃತ್ವದಲ್ಲಿ ಅಪಾರ ಭಕ್ತರವೃಂದ ಸೇರಿದಂತೆ ಅನೇಕ ಗಣ್ಯರು ರಥೋತ್ಸವಕ್ಕೆ ಚಾಲನೆ ನೀಡಿದರು.
ಸಂಜೆ ಶ್ರೀಮಠದ ಆವರಣದಿಂದ ಪ್ರಾರಂಭಗೊಂಡ ರಥೋತ್ಸವ ಕೊಪ್ಪಿಕರ ರಸ್ತೆಯ ಬಳಿ ಸೊಬರದಮಠ ಗಲ್ಲಿಯ ವರೆಗೂ ನಡೆಯಿತು. ಬಳಿಕ ಅಲ್ಲಿಂದ ಮರಳಿದ ರಥೋತ್ಸವ ಶ್ರೀಮಠಕ್ಕೆ ಬಂದು ಸಂಪನ್ನಗೊಂಡಿತು. ರಥೋತ್ಸವ ವೇಳೆ ಭಕ್ತರು ಗುರುಸಿದ್ದೇಶ್ವರ ಮಹಾರಾಜಕೀ ಜೈ, ಹರ ಹರ ಮಹಾದೇವ ಎಂದು ಘೋಷಣೆ ಮೊಳಗಿಸಿ ಸಂಭ್ರಮಿಸಿದರು.ರಥೋತ್ಸವದ ಮಾರ್ಗದುದ್ದಕ್ಕೂ ಡೊಳ್ಳು, ಜಾಂಝ ಮೇಳ, ಕೋಲಾಟ ಸೇರಿದಂತೆ ವಿವಿಧ ಕಲಾತಂಡಗಳು ಪಾಲ್ಗೊಂಡು ಮೆರಗು ತಂದವು. ಅಲ್ಲದೇ, ರಥೋತ್ಸವದ ದಾರಿಯುದ್ದಕ್ಕೂ ಭಕ್ತರು ಉತ್ತತ್ತಿ, ನಿಂಬೆಹಣ್ಣು, ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು.
ರಥೋತ್ಸವದಲ್ಲಿ ಶಾಸಕ ಮಹೇಶ ಟೆಂಗಿನಕಾಯಿ, ಗಣ್ಯರಾದ ಅರವಿಂದ ಕುಬಸದ, ವಿಜಯ ಶೆಟ್ಟರ, ವೀರೇಶ ಸಂಗಳದ, ಮಂಜುನಾಥ ಮುನವಳ್ಳಿ, ಅಮರೇಶ ಹಿಪ್ಪರಗಿ ಸೇರಿದಂತೆ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.