ನಿಜವಾದ ದಶರಥರಾಮೇಶ್ವರ ಸ್ವಾಮಿ ರಾಮಮಂದಿರ ಭವಿಷ್ಯ

KannadaprabhaNewsNetwork | Updated : Jan 22 2024, 02:21 AM IST

ಸಾರಾಂಶ

ಅಯೋಧ್ಯೆಯ ಶ್ರೀರಾಮ ಸಂಸ್ಕೃತಿ ಶೋಧ ಸಂಸ್ಥಾನ ನ್ಯಾಸ ತಂಡದ ಸದಸ್ಯರು 2017ರಲ್ಲಿ ದಶರಥ ರಾಮೇಶ್ವರ ವಜ್ರಕ್ಕೆ ಭೇಟಿ ನೀಡಿ ಅಲ್ಲಿನ ಐತಿಹ್ಯ ಹಾಗೂ ಶ್ರವಣ ಕುಮಾರ ಕಥೆ ಕೇಳಿದ್ದರು. ರಾಮಾಯಣಕ್ಕೆ ಸಂಬಂಧಪಟ್ಟ ಪವಿತ್ರ ತಾಣಗಳಲ್ಲಿ ಇದು ಒಂದು ಎಂದು ಗುರುತಿಸಿದ್ದರು. ಆ ಸಂದರ್ಭದಲ್ಲಿ ಭಕ್ತರ ಬಳಿ ಭವಿಷ್ಯ ನುಡಿಯುತ್ತಿದ್ದ ಗುಡ್ಡದ ನೇರಲಕೆರೆ ಗ್ರಾಮದ ದಶರಥರಾಮೇಶ್ವರ ಉತ್ಸವ ಮೂರ್ತಿಯ ಬಳಿ ನ್ಯಾಸ ತಂಡದವರು ಭವಿಷ್ಯ ಕೇಳಿದ್ದರು.

ಹೊಸದುರ್ಗ: ಅಯೋಧ್ಯೆಯ ವಿವಾದಿತ ಜಾಗದಲ್ಲಿ ಶ್ರೀರಾಮಮಂದಿರ ನಿರ್ಮಾಣವಾಗಲಿದೆಯೆಂದು 2017ರಲ್ಲಿ ತಾಲೂಕಿನ ದಶರಥರಾಮೇಶ್ವರ ಸ್ವಾಮಿ ನುಡಿದಿದ್ದ ಭವಿಷ್ಯ ನಿಜವಾಗಿದೆ. ಜ.22ರಂದು ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ನಡೆಯಲಿದ್ದು, ಇದರ ಅಂಗವಾಗಿ ಸೋಮವಾರ ಕ್ಷೇತ್ರದಲ್ಲಿ ವಿಶೇಷ ಪೂಜೆ ನಡೆಯಲಿದೆ.

ಅಯೋಧ್ಯೆಯ ಶ್ರೀರಾಮ ಸಂಸ್ಕೃತಿ ಶೋಧ ಸಂಸ್ಥಾನ ನ್ಯಾಸ ತಂಡದ ಸದಸ್ಯರು 2017ರಲ್ಲಿ ದಶರಥ ರಾಮೇಶ್ವರ ವಜ್ರಕ್ಕೆ ಭೇಟಿ ನೀಡಿ ಅಲ್ಲಿನ ಐತಿಹ್ಯ ಹಾಗೂ ಶ್ರವಣ ಕುಮಾರ ಕಥೆ ಕೇಳಿದ್ದರು. ರಾಮಾಯಣಕ್ಕೆ ಸಂಬಂಧಪಟ್ಟ ಪವಿತ್ರ ತಾಣಗಳಲ್ಲಿ ಇದು ಒಂದು ಎಂದು ಗುರುತಿಸಿದ್ದರು. ಆ ಸಂದರ್ಭದಲ್ಲಿ ಭಕ್ತರ ಬಳಿ ಭವಿಷ್ಯ ನುಡಿಯುತ್ತಿದ್ದ ಗುಡ್ಡದ ನೇರಲಕೆರೆ ಗ್ರಾಮದ ದಶರಥರಾಮೇಶ್ವರ ಉತ್ಸವ ಮೂರ್ತಿಯ ಬಳಿ ನ್ಯಾಸ ತಂಡದವರು ಭವಿಷ್ಯ ಕೇಳಿದ್ದರು.

2018ರ ಬಳಿಕ ರಾಮಮಂದಿರ ನಿರ್ಮಾಣಕ್ಕೆ ಶುಭ ಸೂಚನೆ ದೊರೆಯಲಿದೆ. ಅಯೋಧ್ಯೆಯ ವಿವಾದಿತ ಜಾಗದಲ್ಲೇ ರಾಮಮಂದಿರ ದೇಗಲ ನಿರ್ಮಾಣವಾಗಲಿದೆ ಎಂದು ತಿಳಿಸಲಾಗಿತ್ತು. ಭವಿಷ್ಯ ವಾಣಿಯಂತೆಯೇ ರಾಮಜನ್ಮಭೂಮಿ-ಬಾಬ್ರಿ ಮಸೀದಿ ವಿವಾದ ಬಗೆಹರಿದು ರಾಮಮಂದಿರ ನಿರ್ಮಾಣ ಕಾರ್ಯ ನಡೆಯುತ್ತಿದೆ.

ರಾಮಾಯಣಕ್ಕೆ ಸಂಬಂಧಪಟ್ಟ ಪವಿತ್ರ ಸ್ಥಳಗಳಲ್ಲಿ ದಶರಥರಾಮೇಶ್ವರ ಕ್ಷೇತ್ರವೂ ಒಂದು ಎಂದು ನ್ಯಾಸ ತಂಡ ಗುರುತಿಸಿದ್ದರು. ಈ ಹಿನ್ನೆಲೆಯಲ್ಲಿ 2 ವರ್ಷಗಳ ಹಿಂದೆ ಭಜರಂಗದಳದ ಪ್ರಮುಖ ಪ್ರಭಂಜನ್‌ ಅವರು ಕ್ಷೇತ್ರಕ್ಕೆ ಭೇಟಿ ನೀಡಿ ಪವಿತ್ರ ಮೃತಿಕೆ ಹಾಗೂ ಗಂಗಾ ಜಲವನ್ನು ಸಂಗ್ರಹಣೆ ಮಾಡಿದ್ದರು. ಶ್ರೀರಾಮನ ಪ್ರತಿಷ್ಠಾಪನೆಯ ಜಾಗದ ಪೀಠದ ಕೆಳಗೆ ಸಂಗ್ರಹಿಸಿದ ಮೃತಿಕೆ ಹಾಗೂ ಗಂಗಾ ಜಲ ಹಾಕಲಾಗಿತ್ತು.

ಇತಿಹಾಸ: ರಾಮಾಯಣ ಕಾಲದ ಕೆಲವೇ ಪುಣ್ಯಕ್ಷೇತ್ರಗಳಲ್ಲಿ ದಶರಥರಾಮೇಶ್ವರವೂ (ದೊಡ್ಡವಜ್ರ) ಒಂದು. ತ್ರೇತಾಯುಗದಲ್ಲಿ ಅಯೋಧ್ಯೆಯನ್ನು ಆಳುತ್ತಿದ್ದ ದಶರಥ ಮಹಾರಾಜ ತನ್ನ ಸೇನೆಯೊಂದಿಗೆ ಗೋಡಾರಣ್ಯಗಳಲ್ಲಿ ಬೇಟೆಗಾಗಿ ತಿರುಗಾಡುತ್ತಾ ಇಲ್ಲಿನ ವಜ್ರಗಿರಿಗೆ ಬಂದು ತಲುಪಿದನು. ವಜ್ರಗಿರಿ ಅಂದಿನ ಸಂದರ್ಭದಲ್ಲಿ ದೊಡ್ಡ ಕಾನನ ಮತ್ತು ಕಾಡು ಪ್ರಾಣಿಗಳ ವಾಸಸ್ಥಳವೂ ಆಗಿತ್ತು. ಶ್ರವಣ ಕುಮಾರ ತನ್ನ ತಂದೆ-ತಾಯಿಗೆ ಪುಣ್ಯಕ್ಷೇತ್ರ ದರ್ಶನ ಮಾಡಿಸಲು ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಕೆರೆಯೊಂದರಲ್ಲಿ ನೀರು ಸೇವನೆಗೆ ಕೆರೆಗೆ ತೆರಳಿದ್ದಾಗ ಪ್ರಾಣಿ ಅಂದುಕೊಂಡು ಬಾಣ ಬಿಟ್ಟಾಗ ಬಾಣ ಶ್ರವಣನಿಗೆ ತಾಕುತ್ತದೆ. ಶ್ರವಣನ ಕೂಗು ಕೇಳಿ ಆತನ ತಂದೆ ತಾಯಿ ದಶರಥನಿಗೆ ಪುತ್ರ ವಿಯೋಗ ಶಾಪ ನೀಡುತ್ತಾರೆ.

ಶಾಪವಿಮೋಚನೆಯಿಂದ ಮುಕ್ತಿ ಪಡೆಯಲು ದಶರಥನು ಶಿವಲಿಂಗವನ್ನು ಸ್ಥಾಪಿಸುತ್ತಾನೆ. ದಶರಥನು ಸ್ಥಾಪಿಸಿದ ಶಿವಲಿಂಗಕ್ಕೆ ಶ್ರೀರಾಮನು ಪೂಜಿಸಿದ್ದರಿಂದ ಇದನ್ನು ದಶರಥರಾಮೇಶ್ವರ ಎಂದು ಕರೆಯಲಾಗುತ್ತದೆ ಎನ್ನುವ ಇತಿಹಾಸ ಇದೆ.

ದಶರಥ ಮಹಾರಾಜ ಹಾಗೂ ಶ್ರೀರಾಮಚಂದ್ರನು ಬಂದು ಹೋಗಿರುವ ಪುಣ್ಯ ಕ್ಷೇತ್ರವಿದು. ಸಾಧು ಸಂತರು ಇಲ್ಲಿಗೆ ಬಂದು ಹೋಗುತ್ತಾರೆ. ಇಲ್ಲಿಗೆ ಬಂದು ಹೋಗುವ ಭಕ್ತರಿಗೆ ಅತಿಥಿ ಗೃಹ, ಶೌಚಾಲಯ, ಕಲ್ಯಾಣ ಮಂಟಪ, ಅಡುಗೆ ಕೋಣೆಗಳು, ಪ್ರಕೃತಿ ವನದಂತ ಅಭಿವೃದ್ದಿ ಕಾರ್ಯಗಳು ನಡೆಯಬೇಕು ಎಂದು ಸ್ಥಳೀಯ ಶಿವಪ್ರಸಾದ್‌ ಹೇಳಿದರು.

Share this article