ಹೊಸಪೇಟೆ: ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಮುರಿದ ಪ್ರಕರಣದಲ್ಲಿ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ನಾವು ಇದರಲ್ಲಿ ರಾಜಕಾರಣ ಮಾಡುತ್ತಿಲ್ಲ. ಸರ್ಕಾರ ನೀರು ಉಳಿಸಲು ಕಾರ್ಯಪ್ರವೃತ್ತರಾಗಬೇಕು ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹೇಳಿದರು.
ಇಲ್ಲಿನ ತುಂಗಭದ್ರಾ ಜಲಾಶಯದ ಗೇಟ್ ಮುರಿದ ಹಿನ್ನೆಲೆಯಲ್ಲಿ ಸೋಮವಾರ ಭೇಟಿ ನೀಡಿ ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಮಹಾರಾಷ್ಟ್ರಕ್ಕೆ ಒಂದು ಟಿಎಂಸಿ ನೀರು ಬಿಡುಗಡೆ ಮಾಡಲು ₹8 ಕೋಟಿ ನೀಡುತ್ತಿದ್ದೇವೆ. ಈಗ 60ರಿಂದ 70 ಟಿಎಂಸಿ ನೀರು ಹರಿದು ಹೋಗುತ್ತಿದೆ. ಇದನ್ನು ತಡೆಯಲು ಸರ್ಕಾರ ಕ್ರಮ ಕೈಗೊಳ್ಳಬೇಕು. ನೀರು ಸಂಗ್ರಹಕ್ಕೆ ಮುಂದಾಗಬೇಕು. ಎರಡನೇ ಬೆಳೆಗೆ ಸಂಬಂಧಿಸಿದಂತೆ ರೈತರ ನಷ್ಟದ ಶೇ. 100ರಷ್ಟು ಪರಿಹಾರವನ್ನು ಸರ್ಕಾರ ನೀಡಬೇಕು ಎಂದರು.ತಪ್ಪಿತಸ್ಥರ ವಿರುದ್ಧ ಕ್ರಮ ಆಗಲಿ: ನಮ್ಮ ಅನ್ನದ ಬಟ್ಟಲಿಗೆ ಕನ್ನ ಬಿದ್ದಿದೆ. ಇದು ನೋವಿನ ಸಂಗತಿ. ಇಲ್ಲಿ ಯಾರ ತಪ್ಪಾಗಿದೆಯೋ ಅವರ ವಿರುದ್ಧವೂ ಕ್ರಮವಾಗಬೇಕು. ಡ್ಯಾಂ ನಮ್ಮ ರಾಜ್ಯದಲ್ಲಿರುವುದರಿಂದ ಕೇಂದ್ರ ಮತ್ತು ಆಂಧ್ರಪ್ರದೇಶದ ಮೇಲೆ ಗೂಬೆ ಹೊರಿಸುವುದು ಬೇಡ. ನಾವೇ ಹೆಚ್ಚು ಕಾಳಜಿ ವಹಿಸಬೇಕು. ಕೂಡಲೇ ಪರಿಹಾರ ಕ್ರಮ ಕೈಗೊಳ್ಳಬೇಕು. ಮೇಲ್ನೋಟಕ್ಕೆ ಅಧಿಕಾರಿಗಳ ನಿರ್ಲಕ್ಷ್ಯದಂತೆಯೇ ಕಂಡು ಬರುತ್ತಿದೆ. ಈ ಪ್ರಕರಣದ ಕುರಿತು ತನಿಖೆ ನಡೆಸಬೇಕು ಎಂದರು.
ಈ ಘಟನೆಯಿಂದ ಒಂದು ಬೆಳೆಗೆ ನೀರು ಕೊಡಲು ಸಮಸ್ಯೆಯಾಗಲಿದೆ. ಮುಂದೆ ಉತ್ತಮ ಮಳೆ ಬಂದರೆ ಮಾತ್ರ ಅವಕಾಶವಿದೆ ಅಂತ ಅಧಿಕಾರಿಗಳು ಹೇಳಿದ್ದಾರೆ. ಜಲಾಶಯ ನಂಬಿರುವ ರೈತರು ಸಂಕಷ್ಟದಲ್ಲಿದ್ದಾರೆ. ಕಳೆದ ವರ್ಷ ಮಳೆ ಇಲ್ಲದೆ ಭೀಕರ ಬರಗಾಲ ಆವರಿಸಿತ್ತು. ಈಗ ನೀರಿದ್ದರೂ ಉಳಿಸಲು ಆಗುತ್ತಿಲ್ಲ. ಮುಂಗಾರು ವೇಳೆಯೇ ಪರಿಶೀಲನೆ ಮಾಡಿರಬೇಕಿತ್ತು. ಯಾರೋ ಸರ್ಟಿಫೈ ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ. ಈಗ ಏನಾಗಿದೆ ನೋಡಿ. ರೈತರಿಗೆ ಬೆಳೆ ನಷ್ಟ ಆಗಲಿದೆ. ಹಾಗಾಗಿ ಪ್ರತಿ ಹೆಕ್ಟೇರ್‌ಗೆ ₹50 ಸಾವಿರ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಚಿವರಾದ ಆನಂದ್ ಸಿಂಗ್, ಹಾಲಪ್ಪ ಆಚಾರ್, ಶಾಸಕ ಕೃಷ್ಣನಾಯ್ಕ, ಮುಖಂಡ ಸಿದ್ಧಾರ್ಥ ಸಿಂಗ್ ಮತ್ತಿತರರಿದ್ದರು.