ಕನ್ನಡಪ್ರಭ ವಾರ್ತೆ ಕಾರಟಗಿ
ಯಾದಗಿರಿ ಪಿಎಸ್‌ಐ ಪರಶುರಾಮ ಸಾವಿಗೆ ಕಾಂಗ್ರೆಸ್ ದುರಾಡಳಿತವೇ ಕಾರಣ ಎಂದು ಮಾಜಿ ಸಿಎಂ, ಸಂಸದ ಜಗದೀಶ ಶೆಟ್ಟರ್ ಆರೋಪಿಸಿದರು.ತಾಲೂಕಿನ ಸೋಮನಾಳ ಗ್ರಾಮದ ಪರಶುರಾಮ ಅವರ ನಿವಾಸಕ್ಕೆ ಭಾನುವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಸರ್ಕಾರದ ನಡೆಯಿಂದಾಗಿ ಪ್ರಾಮಾಣಿಕ ಅಧಿಕಾರಿಗಳ ಸಾಯುತ್ತಿದ್ದಾರೆ. ಪ್ರಾಮಾಣಿಕತೆಯ ನೆಪದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಸಂಪೂರ್ಣ ಮುಳುಗಿದೆ. ಪಿಎಸ್‌ಐ ಸಾವಿನ ಪ್ರಕರಣವನ್ನು ಸರ್ಕಾರ ಗಂಭಿರವಾಗಿ ಪರಿಗಣಿಸಬೇಕು. ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಮಾಜಿ ಪರಣ್ಣ ಮುನವಳ್ಳಿ, ಬಸವರಾಜ ದಢೇಸೂಗೂರು, ಪ್ರಮುಖರಾದ ಶಿವಶರಣೇಗೌಡ ಯರಡೋಣಾ, ನಾಗರಾಜ ಬಿಲ್ಗಾರ್, ಮಂಜುನಾಥ ಮಸ್ಕಿ ಇದ್ದರು.
ಬಂಡೆ ಸಿಎಂ ಮೇಲೆ ಯಾವಾಗ ಉರುಳುತ್ತೋ:ಅಹಿಂದ ಹೆಸರಿನಲ್ಲಿ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ಕನಕಪುರದ ಬಂಡೆ ಇದೆ ಎಂದು ಡಿ.ಕೆ. ಶಿವಕುಮಾರ ಹೇಳುತ್ತಿದ್ದಾರೆ. ಈ ಬಂಡೆ ಸಿಎಂ ಮೇಲೆ ಯಾವಾಗ ಉರುಳುತ್ತೋ ಕಾದು ನೋಡಬೇಕಿದೆ ಎಂದು ಸಂಸದ ಜಗದೀಶ ಶೆಟ್ಟರ್ ವ್ಯಂಗ್ಯವಾಡಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರ್ಕಾವತಿ, ಮುಡಾ, ಅಕ್ರಮ ಹಣ ವರ್ಗಾವಣೆ, ವ್ಯಾಪಕ ಭ್ರಷ್ಟಾಚಾರ ಸಹಿತ ಮತ್ತಿತರ ಅವ್ಯವಹಾರಗಳ ಬಗ್ಗೆ ಸಿಬಿಐ ತನಿಖೆಗೆ ಒಪ್ಪಿಸಲು ರಾಜ್ಯ ಸರ್ಕಾರ ಮುಂದಾಗಬೇಕು. ಮುಡಾ ಹಗರಣದಲ್ಲಿ ನಿವೇಶನ ಪಡೆದಿರುವುದು ಹಾಗೂ ವಾಲ್ಮೀಕಿ ಅಭಿವೃದ್ಧಿಯಲ್ಲಿ ಹಣ ಅಕ್ರಮ ವರ್ಗಾವಣೆ ಆಗಿರುವುದರಲ್ಲಿ ಮುಖ್ಯಮಂತ್ರಿ ಕೈವಾಡ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮೊಂಡಾಟಕ್ಕಿಳಿಯದೇ ನೇರ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.ಬಿಜೆಪಿ ಸರ್ಕಾರದಲ್ಲಿ ನಿವೇಶನ ಹಂಚಿಕೆ ನಡೆದಿದೆಯಾದರೂ, ಇವೆಲ್ಲ ಕಮಿಷನರ್ ಮಟ್ಟದಲ್ಲೇ ಮುಗಿದಿವೆ. ಈಗ ವಾಸ್ತವಾಂಶ ಬಯಲಿಗೆ ಬಂದು, ಸಿಎಂ ಸಿದ್ದರಾಮಯ್ಯ ಅವರನ್ನು ಅವರನ್ನು ಸುತ್ತಿಕೊಂಡಿದೆ. ಪ್ರಾಸಿಕ್ಯೂಷನ್ ನಿರ್ಧಾರದ ಬಗ್ಗೆ ರಾಜ್ಯಪಾಲರ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.