ಕನ್ನಡಪ್ರಭ ವಾರ್ತೆ ವಿಜಯಪುರ
ಯುಜಿಡಿ ಮಲೀನ ನೀರು ಸಂಸ್ಕರಣಾ ಘಟಕದಲ್ಲಿ ಖುದ್ದು ಪರೀಶೀಲನೆ ನಡೆಸಿದ ಆಯೋಗದ ಸದಸ್ಯ ಕೋಸಂಬೆ ಹಾಗೂ ರಾಮತನಾಳ ಅವರು, ಮುಖ್ಯರಸ್ತೆಗೆ ಹೊಂದಿಕೊಂಡಿರುವ ಘಟಕದ ಸುತ್ತಲ್ಲೂ ಯಾವುದೇ ತಂತಿಬೇಲಿ, ತಡೆಗೋಡೆ ನಿರ್ಮಿಸದಿರುವುದು, ಕನಿಷ್ಠ ಸುರಕ್ಷತಾ ಕ್ರಮಗಳನ್ನು ಪಾಲಿಸದಿರುವುದು ಹಾಗೂ ಸೂಕ್ತ ಸಿಬ್ಬಂದಿ ನಿಯೋಜಿಸದ ಮಹಾನಗರ ಪಾಲಿಕೆ ಅಧಿಕಾರಿಗಳ ನಿರ್ಲಕ್ಷಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಮೂರು ಮಕ್ಕಳ ಸಾವಿಗೆ ಪಾಲಿಕೆ ಅಧಿಕಾರಿಗಳ ನಿರ್ಲಕ್ಷವೇ ಕಾರಣ ಎಂದು ಅವರು ದೂರಿದರು.
ಇದೇ ಸಂದರ್ಭದಲ್ಲಿ ಆಯೋಗದ ಸದಸ್ಯರಾದ ಶಶಿಧರ ಕೋಸುಂಬೆ ಹಾಗೂ ಶೇಖರಗೌಡ ರಾಮತನಾಳ ಸ್ಥಳದಲ್ಲಿದ್ದ ಮೃತ ಮಿಹಿರ್ ಮಗುವಿನ ತಂದೆ ಶ್ರೀಕಾಂತ್ ಜನಗೌಳಿ ಹಾಗೂ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ಮೂವರು ಮಕ್ಕಳ ಸಾವು ಪ್ರಕರಣ ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂತಹದು. ಪಾಲಿಕೆ ವತಿಯಿಂದ ಗರಿಷ್ಠಮಟ್ಟದ ಆರ್ಥಿಕ ಪರಿಹಾರ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಆಯೋಗವು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದು, ಆಯೋಗ ಸದಾ ನಿಮ್ಮೊಂದಿಗಿರುತ್ತದೆ ಎಂದು ಕುಟುಂಬ ಸದಸ್ಯರಿಗೆ ಸೂಕ್ತ ನ್ಯಾಯ ಕೊಡಿಸುವ ಭರವಸೆ ವ್ಯಕ್ತಪಡಿಸಿದರು.ನಂತರ ಸುದ್ದಿಗಾರರೊಂದಿಗೆ ಆಯೋಗದ ಸದಸ್ಯ ಶಶಿಧರ್ ಕೋಸಂಬೆ ಮಾತನಾಡಿ, ಒಂದು ವಾರದಲ್ಲಿ ಸಂಸ್ಕರಣಾ ಘಟಕದ ಸುತ್ತಲೂ ತಂತಿ ಬೇಲಿ ಹಾಗೂ ಗೇಟ್ ಹಾಕಿ ಸಿಸಿ ಕ್ಯಾಮೆರಾ ಅಳವಡಿಸಬೇಕು. ಸೂಕ್ತ ಸಿಬ್ಬಂದಿ ನಿಯೋಜಿಬೇಕು. ಮೃತ ಮಕ್ಕಳ ಕುಟುಂಬಕ್ಕೆ ಪಾಲಿಕೆಯಿಂದ ತ್ವರಿತ ಹಾಗೂ ಗರಿಷ್ಠ ಆರ್ಥಿಕ ಪರಿಹಾರ ನೀಡಬೇಕೆಂದು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಒಂದು ವಾರದ ಒಳಗೆ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಪಾಲಿಕೆ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಆಯೋಗ ಶಿಘಾರಸ್ಸು ಮಾಡಲಿದೆ. ಅಲ್ಲದೇ ಈ ಕುರಿತು ಸರ್ಕಾರಕ್ಕೂ ವರದಿ ಸಲ್ಲಿಸಲಾಗುತ್ತದೆ. ಅಲ್ಲದೇ ಪ್ರಕರಣ ಕುರಿತು ಮಕ್ಕಳ ಆಯೋಗದಿಂದ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದೇವೆ. ಸಂತ್ರಸ್ತ ಕುಟುಂಬಕ್ಕೆ ಸೂಕ್ತ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಆಯೋಗ ಬದ್ಧವಾಗಿದೆ ಎಂದರು.
ಈ ವೇಳೆ ವಿಜಯಪುರ ಮಹಾನಗರ ಪಾಲಿಕೆ ಆಯುಕ್ತರು, ಪಾಲಿಕೆ, ಆರೋಗ್ಯ, ಪೊಲೀಸ್ ಇಲಾಖೆಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸೇರಿದಂತೆ ವಿವಿಧ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.---
ಕೋಟ್ಸ್ಥಳೀಯರ ಒತ್ತಾಯ ಹಾಗೂ ಮಕ್ಕಳ ಸಾವಿನ ಘಟನೆ ಗಮನಿಸಿದರೆ ನಗರದ ಮಧ್ಯಭಾಗದಲ್ಲಿರುವ ಈ ಯುಜಿಡಿ ತ್ಯಾಜ್ಯ ನೀರು ಸಂಸ್ಕರಣಾ ಘಟಕವನ್ನು ಬೇರೆಡೆ ಸ್ಥಳಾಂತರ ಮಾಡುವುದು ಸೂಕ್ತ. ಈ ಬಗ್ಗೆ ಪಾಲಿಕೆ ಅಧಿಕಾರಿಗಳಿಗೆ ಚರ್ಚಿಸಲು ಸೂಚಿಸುತ್ತೇವೆ.
-ಶೇಖರಗೌಡ ರಾಮತನಾಳ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯ