ಗದಗ: ಗದಗ- ಬೆಟಗೇರಿಯಲ್ಲಿರುವ ವಕಾರಗಳ (ಖಾಲಿ ಜಾಗೆ) ಲೀಜ್ ವಿಸ್ತರಣೆಯಲ್ಲಿ ನಕಲಿ ಠರಾವು ವಿಷಯವಾಗಿ ಮೂವರು ಬಿಜೆಪಿ ಸದಸ್ಯರ ಸದಸ್ಯತ್ವ ಅಮಾನತು ವಿಚಾರ ಕುರಿತಂತೆ ಗುರುವಾರ ಸಂಜೆಯಿಂದಲೇ ತೀವ್ರ ಹೈಡ್ರಾಮಾ ನಡೆದಿದೆ. ಹೈಕೋರ್ಟ್ ಮೊರೆ ಹೋಗಿದ್ದ ಬಿಜೆಪಿ ಮೂವರು ಸದಸ್ಯರು (ಪ್ರಾದೇಶಿಕ ಆಯುಕ್ತರಿಂದ ಸದಸ್ಯತ್ವ ಅಮಾನತುಗೊಂಡು ಬಳಿಕ ಹೈಕೋರ್ಟ್‌ನಿಂದ ಅದು ರದ್ದುಗೊಂಡಿತ್ತು) ಫೆ.28 ರಂದು ನಡೆಯಲಿರುವ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಗೆ ಮತದಾನದ ಅಧಿಕಾರ ಪಡೆದುಕೊಂಡು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು, ಆದರೆ ಸಂಜೆಯ ಹೊತ್ತಿಗೆ ಪ್ರಾದೇಶಿಕ ಆಯುಕ್ತರು ಮೂವರು ಸದಸ್ಯರನ್ನು ಕೌನ್ಸಿಲರ್, ಅಧ್ಯಕ್ಷ ಪದದಿಂದ ತೆಗೆದು ಹಾಕುವ ಮೂಲಕ ರಾಜಕೀಯ ಮೇಲಾಟಕ್ಕೆ ಕಾರಣವಾಗಿತ್ತು. ಬಿಕ್ಕಟ್ಟು ಮತ್ತೊಂದು ಮಜಲು ತಲುಪಿದೆ.
ವಕಾರ ಲೀಸ್ ವಿಸ್ತರಣೆ ನಕಲಿ ಠರಾವ್ ಹಿನ್ನೆಲೆಯಲ್ಲಿ ಪ್ರಾದೇಶಿಕ ಆಯುಕ್ತರು ಈ ಮೂವರರು ಸದಸ್ಯರನ್ನು ಸದಸ್ಯತ್ವದಿಂದ ಅಮಾನತುಗೊಳಿಸಿದ್ದರು. ಬಳಿಕ ಹೈಕೋರ್ಟ್ ಮೆಟ್ಟಿಲೇರಿದ್ದ ಸದಸ್ಯರು ಅಮಾನತು ಆದೇಶ ರದ್ದುಪಡಿಸಿಕೊಂಡಿದ್ದರಲ್ಲದೇ, ಮತ್ತೊಮ್ಮೆ ಪ್ರಾದೇಶಿಕ ಆಯುಕ್ತರ ಕಚೇರಿ ನ್ಯಾಯಾಲಯದ ಮುಂದೆ ಹೋಗುವಂತೆ ಸದಸ್ಯರಿಗೆ ಹೈಕೋರ್ಟ್ ಸೂಚಿಸತ್ತು. ಈ ಮಧ್ಯೆ ಫೆ.28 ರಂದು ನಗರಸಭೆ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆ ಸಹ ನಿಗದಿಯಾಗಿತ್ತು.ನಗರಸಭೆ 2ನೇ ಅವಧಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸುವಂತೆ ಬಿಜೆಪಿ ಸದಸ್ಯರು ಈ ಹಿಂದೆ ಪಟ್ಟು ಹಿಡಿದಿದ್ದರು. ಇತ್ತ ವಿರೋಧ ಪಕ್ಷ ಕಾಂಗ್ರೆಸ್ ನಗರಸಭೆ ಆಡಳಿತ ಚುಕ್ಕಾಣಿಯನ್ನ ಹೇಗಾದರೂ ಮಾಡಿ ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಶತಾಯಗತಾಯ ಪ್ರಯತ್ನ ನಡೆಸಿತ್ತು. ನಗರಸಭೆಯ ಆಸ್ತಿಯಾಗಿರುವ ವಕಾರಗಳ ಲೀಜ್ ನಲ್ಲಿ ನಡೆದಿದೆ ಎನ್ನಲಾದ ನಕಲಿ ಠರಾವು ಮುಂದಿಟ್ಟುಕೊಂಡು, ಠರಾವಿಗೆ ಸಹಿ ಮಾಡಿದ್ದ 3 ಜನ ಸದಸ್ಯರ ಸದಸ್ಯತ್ವವನ್ನೇ ಅಮಾನತ್ತಾಗುವಂತೆ ಮಾಡಿ ಕಾಂಗ್ರೆಸ್ ಅನಾಯಾಸವಾಗಿ ಅಧಿಕಾರಕ್ಕೆ ಬರುವ ಕನಸು ಕಂಡಿತ್ತು.
35 ಸದಸ್ಯ ಬಲದ ಗದಗ ಬೆಟಗೇರಿ ನಗರಸಭೆಯಲ್ಲಿ 18 ಜನ ಬಿಜೆಪಿ ಸದಸ್ಯರಿದ್ದು, 17 ಸ್ಥಾನ ಪಡೆದಿರುವ ಕಾಂಗ್ರೆಸ್ ವಿರೋಧ ಪಕ್ಷದಲ್ಲಿದೆ. ಹಾಗಾಗಿ 3 ಜನ ಬಿಜೆಪಿ ಸದಸ್ಯರ ಸದಸ್ಯತ್ವ ಅಮಾನತ್ತಾದಲ್ಲಿ ಕಾಂಗ್ರೆಸ್ ಅನುಕೂಲವಾಗಲಿದೆ ಎನ್ನುವ ಲೆಕ್ಕಾಚಾರ ನಡೆದಿತ್ತು.ತಮ್ಮ ಸದಸ್ಯತ್ವದ ಅಮಾನತ್ತನ್ನು ಪ್ರಶ್ನಿಸಿ ಬಿಜೆಪಿ ಸದಸ್ಯರು ಈಗಾಗಲೇ ಧಾರವಾಡ ಹೈಕೋರ್ಟನಲ್ಲಿ ಪ್ರಕರಣ ದಾಖಲಿಸಿ, ಸುದೀರ್ಘ ವಿಚಾರಣೆ ನಡೆಸಿದ್ದ ಕೋರ್ಟ್ ಮೂವರು ಸದಸ್ಯರ ಸದಸ್ಯತ್ವವನ್ನ ಅಮಾನತು ಮಾಡಿದ್ದ ಪ್ರಾದೇಶಿಕ ಆದೇಶವನ್ನು ರದ್ದು ಮಾಡಿತ್ತು. ಆದರೆ ಅಂದಿನ ತೀರ್ಪಿನಲ್ಲಿ ಸದಸ್ವತ್ವ ಮರಳಿ ಸಿಕ್ಕರೂ ಫೆ. 28ರಂದು ನಡೆಯುವ ಚುನಾವಣೆಯಲ್ಲಿ ಮೂವರೂ ಸದಸ್ಯರು ಮತದಾನ ಮಾಡುವಂತೆ ಯಾವುದೇ ಸ್ಪಷ್ಟ ಆದೇಶಿಸಿದ್ದಿಲ್ಲ.
ಮತದಾನ ಮಾಡುವ ಹಕ್ಕಿನ ಕುರಿತು ಬಿಜೆಪಿ ಸದಸ್ಯರು ಪುನಃ ಗುರುವಾರ ಹೈಕೋರ್ಟ್ ಮೊರೆ ಹೋಗಿದ್ದರು. ಈ ವಿಷಯವಾಗಿ ವಾದ ವಿವಾದ ಆಲಿಸಿದ ನ್ಯಾಯಾಲಯ ಗುರುವಾರ ಸಂಜೆ ತೀರ್ಪು ನೀಡಿದ್ದು, ತೀರ್ಪಿನಲ್ಲಿ, ಫೆ 28 ರಂದು ನಡೆಯುವ ಚುನಾವಣೆಯಲ್ಲಿ 3 ಜನ ಮತದಾನ ಮಾಡುವ ಹಕ್ಕನ್ನು ನ್ಯಾಯಾಲಯ ನೀಡಿತ್ತು. ಇದರೊಟ್ಟಿಗೆ ಪ್ರಾದೇಶಿಕ ಆಯುಕ್ತರಿಗೆ ನಿರ್ದೇಶನವನ್ನು ನೀಡಿತ್ತು. ನಿರ್ದೇಶನದಲ್ಲಿ ಪ್ರಾದೇಶಿಕ ಆಯುಕ್ತರು ತೀರ್ಮಾನ ತೆಗೆದುಕೊಳ್ಳಬಹುದು ಎಂದು ಉಲ್ಲೇಖಿಸಲಾಗಿತ್ತು. ಸಂಜೆ ಬಿಜೆಪಿ ಸದಸ್ಯರು ನಮಗೆ ಫೆ. 28ರಂದು ನಡೆಯುವ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಲ್ಲಿ ಮತದಾನದ ಹಕ್ಕು ಸಿಕ್ಕಿರುವುದು ಸಂತಸ ಪಟ್ಟಿದ್ದರು. ಆದರೆ ತಡರಾತ್ರಿ ಬಂದಿರುವ ಪ್ರಾದೇಶಿಕ ಆಯುಕ್ತರ ಆದೇಶದಲ್ಲಿ ಮತ್ತೆ ಮೂರು ಜನ ಸದಸ್ಯರನ್ನು ಅಧ್ಯಕ್ಷ, ಕೌನ್ಸಿಲರ್ ಪದದಿಂದ ತೆಗೆದು ಹಾಕಿ ಆದೇಶಿಸಿದ ಹಿನ್ನೆಲೆಯಲ್ಲಿ ಶುಕ್ರವಾರ ನಡೆಯುವ ಮತದಾನದಲ್ಲಿ ಮತ್ತೊಮ್ಮೆ ಅವಕಾಶ ಕಳೆದುಕೊಳ್ಳಲಿದ್ದಾರೆ. 3 ಜನ ಸದಸ್ಯರ ಸದಸ್ಯತ್ವ ಹಾವು ಏಣಿ ಆಟ ಮುಂದುವರಿದಂತಾಗಿದೆ.ಪ್ರಾದೇಶಿಕ ಆಯುಕ್ತರ ಆದೇಶ: ಗುರುವಾರ ರಾತ್ರಿ ಪ್ರಾದೇಶಿಕ ಆಯುಕ್ತ ಎಸ್.ಬಿ. ಶೆಟ್ಟಣ್ಣವರ ಹೊರಡಿಸಿರುವ ಆದೇಶದಲ್ಲಿ ಮೇಲೆ ತಿಳಿಸಿದ ಪ್ರಸ್ತಾವನೆಯಲ್ಲಿ ವಿವರಿಸಿದ ಅಂಶಗಳ ಆಧಾರದ ಮೇಲೆ, ಪ್ರಕರಣದಲ್ಲಿನ ಆಪಾದಿತರಾದ 1] ಮಾಜಿ ಅಧ್ಯಕ್ಷೆ ಉಷಾ ದಾಸರ, 2] ಸದಸ್ಯ/ಕೌನ್ಸಿಲರ್ ಅನಿಲ್ ಎಂ.ಅಬ್ಬಿಗೇರಿ ಹಾಗೂ ಸದಸ್ಯ/ಕೌನ್ಸಿಲರ್ ಗುಳ್ಳಪ್ಪ ಎಸ್.ಮುಷಿಗೇರಿ, ಗದಗ-ಬೆಟಗೇರಿ ನಗರಸಭೆ ಇವರ ವಿರುದ್ಧ ಮಾಡಲಾದ ಆಪಾದನೆಗಳ ಮೇಲಿಂದ ಅಪಮಾನಕರ ವರ್ತನೆಯ ಬಗ್ಗೆ ತಪ್ಪಿತಸ್ಥನಾಗಿದ್ದರಿಂದ ಕರ್ನಾಟಕ ಪೌರಸಭೆಗಳ ಅಧಿನಿಯಮ 1964 ರ ಕಲಂ 41(1) & (2) ರಂತೆ ಹಾಗೂ ಸರ್ಕಾರದ ಅಧಿಸೂಚನೆ ಸಂಖ್ಯೆ: UDD/104/TMC 2014, 2:09-01-2015 ರ ಅನ್ವಯ ಅವರನ್ನು ಅಧ್ಯಕ್ಷ, ಕೌನ್ಸಿಲರ್ ಪದದಿಂದ ತೆಗೆದುಹಾಕಿ ಆದೇಶಿಸಲಾಗಿದೆ.