‘ಭೂಮಿಯಿಂದ ಮೊಳೆತು ಬಂದ ಪಾಟ್ ಕಥೆಗಳು’ ಕೃತಿ ಬಿಡುಗಡೆ

KannadaprabhaNewsNetwork |  
Published : Oct 22, 2024, 12:22 AM IST
ಚಿತ್ರ: 21ಎಂಡಿಕೆ1 : ಭೂಮಿಯಿಂದ ಮೊಳೆತು ಬಂದ ಪಾಟ್ ಕಥೆಗಳು ಕೃತಿ ಬಿಡುಗಡೆ ಕಾರ್ಯಕ್ರಮ ನಡೆಯಿತು.  | Kannada Prabha

ಸಾರಾಂಶ

ಅರವತ್ತೊಕ್ಲು ಲಕ್ಷ್ಮೇಶ್ವರ ಎಸ್ಟೇಟ್‌ನ ಬೆಳದಿಂಗಳಿನಲ್ಲಿ ಆಯೋಜಿಸಲಾದ ಸಾಹಿತಿ, ನಿವೃತ್ತ ಪ್ರಾಂಶುಪಾಲ ಡಾ. ಕಮಲಾಕ್ಷ ಕೆ. ಅವರ ಕೃತಿ ‘ಭೂಮಿಯಿಂದ ಮೊಳೆತು ಬಂದ ಪಾಟ್ ಕಥೆಗಳು’ ಬಿಡುಗಡೆ ಸಮಾರಂಭ ನಡೆಯಿತು.

ಜನಪದ ಬದುಕಿನ ಅಧ್ಯಯನದಿಂದ ಮಹತ್ವದ ವಿಚಾರಗಳು ಅರಿವಿಗೆ: ಕೇಶವ ಕಾಮತ್

ಕನ್ನಡಪ್ರಭ ವಾರ್ತೆ ಗೋಣಿಕೊಪ್ಪ

ಜನಪದ ಕಲೆ ಸಂಸ್ಕೃತಿ ತುಂಬಾ ಅನನ್ಯವಾದದ್ದು. ಪ್ರಾಚೀನ ಜನಪದ ಬದುಕಿನ ಆಳಕ್ಕಿಳಿದು ಅಧ್ಯಯನ ಮಾಡಿದರೆ ಅನೇಕ ಮಹತ್ವದ ವಿಚಾರಗಳು ನಮ್ಮ ಅರಿವಿಗೆ ದಕ್ಕುತ್ತದೆ. ವಿವಿಧ ಪ್ರದೇಶಗಳ ಜಾನಪದೀಯ ಅಂಶಗಳನ್ನು ಕಲೆಹಾಕಿ ಪ್ರಸ್ತುತ ಕಾಲಘಟ್ಟಕ್ಕೆ ಇವನ್ನು ಸಮನ್ವಯ ಮಾಡಿಕೊಳ್ಳಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಡಾ. ಕೆ. ಕಮಲಾಕ್ಷ ಅವರ ಕಾರ್ಯ ಅಭಿನಂದನೀಯ ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಎಂ.ಪಿ‌. ಕೇಶವ ಕಾಮತ್ ಹೇಳಿದರು.ಗೋಣಿಕೊಪ್ಪ ಬಳಿಯ ಅರವತ್ತೊಕ್ಲು ಲಕ್ಷ್ಮೇಶ್ವರ ಎಸ್ಟೇಟ್‌ನ ಬೆಳದಿಂಗಳಿನಲ್ಲಿ ಆಯೋಜಿಸಲಾದ ಸಾಹಿತಿ, ನಿವೃತ್ತ ಪ್ರಾಂಶುಪಾಲ ಡಾ. ಕಮಲಾಕ್ಷ ಕೆ. ಅವರ ಕೃತಿ ‘ಭೂಮಿಯಿಂದ ಮೊಳೆತು ಬಂದ ಪಾಟ್ ಕಥೆಗಳು’ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಡಾ. ಕಮಲಾಕ್ಷ ಕೆ. ಅವರು ಈ ಹಿಂದೆ ಬರೆದ ‘ಕೇರಳದ ಜನಪದ ವೀರ ತಚ್ಚೋಳಿ ಒದೆನನ್’ ಹಾಗೂ ‘ಅಂಕ ಕಲಿಗಳ ವೀರಗಾಥೆ’ ಅನುವಾದಿತ ಕಲಾಕೃತಿಗಳು ಸಹ ಸಂಗ್ರಹ ಯೋಗ್ಯ ಪುಸ್ತಕಗಳಾಗಿವೆ. ಸಾಹಿತ್ಯ ಕೃತಿಗಳ ಅನುವಾದ ಸುಲಭ ಸಾಧುವಲ್ಲ. ಎರಡು ಭಾಷೆಗಳ ಹಿಡಿತದ ಜೊತೆಗೆ ಮೂಲ ಕೃತಿ ರಚನಕಾರರ ರಚನೆ ಕುರಿತ ಮನಸ್ಥಿತಿ ಇವೆಲ್ಲದರ ಮೇಲೆ ಹಿಡಿತ ಬೇಕಿದ್ದು, ಡಾ.ಕೆ. ಕಮಲಾಕ್ಷ ಅವರು ಈ ಬಗ್ಗೆ ನುರಿತರಿದ್ದು ಕೃತಿ ರಚನೆ ಮಾಡಿದ್ದಾರೆ ಎಂದು ಹೇಳಿದರು.ಬಿಡುಗಡೆ ಸಮಾರಂಭದ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಬೆಂಗಳೂರಿನ ‘ದೃಶ್ಯ’ ರಂಗತಂಡದ ಸಂಸ್ಥಾಪಕಿ ಹಾಗೂ ನಿರ್ದೇಶಕಿ ಡಾ. ದಾಕ್ಷಾಯಿಣಿ ಭಟ್ ಅವರು ಕೃತಿಯ ಕುರಿತು ಒಳನೋಟ ಬೀರಿದರು. ರಂಗಕಲೆಯಲ್ಲಿ ಜನಪದ ಕಥೆಗಳನ್ನು ಬಳಸಿಕೊಳ್ಳುವಲ್ಲಿನ ಅಗತ್ಯತೆಗಳನ್ನು ವಿವರಿಸಿದರು.

ಕೇಂದ್ರ ಸಾಹಿತ್ಯ ಅಕಾಡೆಮಿಯ ಬೆಂಗಳೂರು ವಲಯ ನಿವೃತ್ತ ಕಾರ್ಯದರ್ಶಿ ಮಹಾಲಿಂಗೇಶ್ವರ ಎಸ್.ಪಿ. ಅವರು ಲೇಖಕರ ಬರವಣಿಗೆಗಳ ಕುರಿತು ಮಾತನಾಡಿ ಶುಭ ಹಾರೈಸಿದರು.

ಸುಳ್ಯದ ಉಪನ್ಯಾಸಕ ಲೇಖಕ ಡಾ.ಸುಂದರ ಕೆನಾಜೆ ಅವರು ಜಾನಪದ ವೈವಿಧ್ಯ, ಭಾಷಾ ವೈವಿಧ್ಯ, ವಿವಿಧ ಸಾಂಸ್ಕೃತಿಕ ಮಜಲುಗಳು ಎಲ್ಲವೂ ಸೇರಿ ಹೇಗೆ ನಮ್ಮ ಸಮಾಜವನ್ನು ಆರೋಗ್ಯವಂತವಾಗಿಡಲು ಸಾಧ್ಯ ಎಂಬುದರ ಕುರಿತು ಸವಿವರವಾಗಿ ತಿಳಿಸಿದರು. ಲಕ್ಷ್ಮೇಶ್ವರ ಎಸ್ಟೇಟ್ ಮಾಲೀಕ ಹಾಗೂ ಹಾಗೂ ಕೃತಿಗೆ ಆರ್ಥಿಕ ಸಹಾಯ ನೀಡಿದ್ದ ಪಿ.ಆರ್. ಗಾಂಧಿರಾವ್ ಕೃತಿ ಬಿಡುಗಡೆ ಮಾಡಿದರು. ಬಂಧು ಮಿತ್ರರು, ಸಾಹಿತಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಪ್ರಶಸ್ತಿ ಪುರಸ್ಕೃತ ಕನ್ನಡ ಚಲನಚಿತ್ರ ‘ಡೇರ್ ಡೆವಿಲ್ ಮುಸ್ತಫಾ’ ಚಿತ್ರ ತಂಡದ ನಾಯಕ, ನಟ, ನಿರ್ದೇಶಕ ಮತ್ತು ಇತರ ಕಲಾವಿದರು ಕಾರ್ಯಕ್ರಮಕ್ಕೆ ವಿಶೇಷ ಕಳೆ ನೀಡಿದರು. ಜಯಶ್ರೀ ಗಣೇಶ ಕಾರ್ಯಕ್ರಮ ನಿರ್ವಹಿಸಿದರು. ಚಲನಚಿತ್ರ ಸಂಗೀತ ಶಬ್ದ ಸಂಯೋಜಕ ಸ್ವಸ್ತಿಕ್ ಕಾರೆಕಾಡು ಮತ್ತು ಬಳಗದವರಿಂದ ಸಂಗೀತ ಸಂಭ್ರಮ ನಡೆಯಿತು.

ಸುಭಾಷ್ ಕಾರೆಕಾಡ್ ಆತಿಥ್ಯ ನಿರ್ವಹಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ