ಕನ್ನಡಪ್ರಭ ವಾರ್ತೆ ಮಲೇಬೆನ್ನೂರು
ಪಟ್ಟಣದ ಪುರಸಭಾ ವ್ಯಾಪ್ತಿಯ ಬೀದಿ ಬದಿ ವ್ಯಾಪಾರಿಗಳ ಕುರಿತು ಶಾಸಕ ಬಿ.ಪಿ.ಹರೀಶ್ ಮುಖ್ಯಾಧಿಕಾರಿ ಸುರೇಶ್ ಜತೆ ಕಚೇರಿಯಲ್ಲಿ ಕೆಲ ಗಂಟೆ ಜತೆ ಚರ್ಚೆ ನಡೆಸಿದರು.ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಶಿವಮೂರ್ತಿ ಮಾತನಾಡಿ, ಹೊನ್ನಾಳಿ-ಹರಿಹರ ಮುಖ್ಯ ರಸ್ತೆಯಿಂದ ನಂದಿಗುಡಿ ರಸ್ತೆಯಲ್ಲಿ ಬೀದಿಬದಿಯ ಶೆಡ್‌ಗಳನ್ನು ತೆರವುಗೊಳಿಸಿ ನಗರೋತ್ಥಾನದಡಿ ೯೦ ಲಕ್ಷ ರು. ವೆಚ್ಚದಲ್ಲಿ ಚರಂಡಿ ಕಾಮಗಾರಿ ನಡೆಯುತ್ತಿದೆ. ಹಿಂದೆಯೇ ಸದರಿ ರಸ್ತೆಯನ್ನು ಏಳು ಮೀ. ವಿಸ್ತರಿಸಿ ಟಾರ್ ರಸ್ತೆ ಹಾಗೂ ಪಾದಚಾರಿ ಮಾರ್ಗ ಅಭಿವೃದ್ಧಿಪಡಿಸಲು, ಜಿಗಳಿ ವೃತ್ತದಲ್ಲಿ ಹೈಮಾಸ್ಕ್ ದೀಪ ಮತ್ತು ಧ್ವಜಸ್ತಂಭವನ್ನು ತೆರವು ಮಾಡಿಕೊಡಲು ಮುಖ್ಯಾಧಿಕಾರಿಗಳಿಗೆ ತಿಳಿಸಿದರು.
ಇದೇ ವೇಳೆ ಬೀದಿ ಬದಿ ವ್ಯಾಪಾರಿಗಳಾದ ನಾಗಣ್ಣ ಬೀಡಾ, ಮೆಹಬೂಬ್ ಅಲಿ, ಪ್ರಕಾಶ್, ವೀರಭದ್ರಪ್ಪ, ಚಂದ್ರು, ನಾಗಣ್ಣ, ಮಂಜು, ಶೇಖರ್, ಬೀರಪ್ಪ, ರೋಷನ್,ಸಿದ್ದೇಶ್, ಗಣೇಶ್ ಜಾವಿದ್ ಮತ್ತಿತರರು ಬೇಗ ಕಾಮಗಾರಿ ಮುಗಿಸಿ ಶೆಡ್ ಹಾಕಿಕೊಳ್ಳಲು ಅವಕಾಶ ಕೊಡಿ ಎಂದು ಕೋರಿದರು. ಜಿಗಳಿ ವೃತ್ತದಲ್ಲಿ ಜನನಿಬಿಡ ಪ್ರದೇಶ ವಾಗಿದ್ದು, ನಿವಾಸಿಗಳು ಸಾರ್ವಜನಿಕ ಶೌಚಾಲಯ ನಿರ್ಮಿಸುವುದು ಅಗತ್ಯವಾಗಿದೆ ಎಂದು ಸ್ಥಳೀಯರು ಮನವಿ ಮಾಡಿದರು.ಶಾಸಕ ಬಿ.ಪಿ.ಹರೀಶ್ ಮಾತನಾಡಿ, ಒಂದು ತಿಂಗಳಲ್ಲಿ ರಸ್ತೆ ಕಾಮಗಾರಿಯನ್ನು ಮುಕ್ತಾಯಗೊಳಿಸಿ ನಂತರ ಮತ್ತೆ ಸಲಹೆ, ಸಭೆ ನಡೆಸಿ ಚರ್ಚಿಸೋಣ. ಅಲ್ಲಿಯವರೆಗೂ ಶೆಡ್ ಹಾಕುವುದು ಬೇಡ ಎಂದು ವ್ಯಾಪಾರಿಗಳಿಗೆ ತಿಳಿಸಿದರು.
ಮುಖ್ಯಾಧಿಕಾರಿ ಸುರೇಶ್ ಮಾತನಾಡಿ, ಪಶು ಆಸ್ಪತ್ರೆ ಬಳಿ ಶೌಚಾಲಯ ನಿರ್ಮಿಸಲು ಇಲಾಖೆಗೆ ಅನುಮತಿ ಕೋರಿ ಪತ್ರ ಬರೆಯಲಾಗಿದೆ. ಲೋಕೋಪಯೋಗಿ ರಸ್ತೆಯಾದ್ದರಿಂದ ಯಾವುದೇ ವ್ಯಾಪಾರಿಗಳಿಗೆ ಅಧಿಕೃತ ಅನುಮತಿ ನೀಡಲು ಅಸಾಧ್ಯ ಎಂದರು. ಈ ವೇಳೆ ಪುರಸಭಾ ಇಂಜಿನಿಯರ್ ಮಂಜುನಾಥ್, ಪುರಸಭಾ ಸದಸ್ಯರು, ವ್ಯಾಪಾರಿಗಳು ಇದ್ದರು.