- ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಓ ನನ್ನ ಚೇತನ ಕನ್ನಡ ಸಂಘ ಉದ್ಘಾಟನ
ಭಾರತ ದೇಶದಲ್ಲಿ ಕೆಲವು ಭಾಷೆಗಳು ಕಾರಣಾಂತರಗಳಿಂದ ನಶಿಸುತ್ತಿರುವ ಈ ಸಂದರ್ಭದಲ್ಲಿ ಮಾತೃಭಾಷೆ ಕನ್ನಡವನ್ನು ನಶಿಸದಂತೆ ಉಳಿಸಿ ಬೆಳೆಸುವ ಜವಾಬ್ದಾರಿ ಉಪನ್ಯಾಸಕರು ಮತ್ತು ಎಲ್ಲರ ಮೇಲಿದೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.
ಕಾಲೇಜು ಶಿಕ್ಷಣ ಇಲಾಖೆಯಿಂದ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗ ಬುಧವಾರ ಏರ್ಪಡಿಸಿದ್ದ ಓ ನನ್ನ ಚೇತನ ಕನ್ನಡ ಸಂಘ ಉದ್ಘಾಟಿಸಿ ಅವರು ಮಾತನಾಡಿದರು. ದೇಶ ಸುತ್ತು ಕೋಶ ಓದು ಎಂಬ ಗಾದೆ ಕುರಿತು ವಿಶ್ಲೇಷಿಸಿದ ಶಾಸಕರು, ಮಾನವನ ಜೀವನದಲ್ಲಿ ಭಾಷೆ ಬಹಳ ಪ್ರಮುಖ ಸ್ಥಾನ ವಹಿಸುತ್ತದೆ. ಭಾರತದಲ್ಲಿ ಇರುವ 30 ರಾಜ್ಯ ಗಳಲ್ಲಿ ಅವರದೇ ಆದ ಪ್ರಾದೇಶಿಕ ಭಾಷೆಗಳಿವೆ. ಈ ಎಲ್ಲಾ ಭಾಷೆಗಳಲ್ಲಿ ಶ್ರೇಷ್ಠವಾದದ್ದು ಕನ್ನಡ ಭಾಷೆ ಎಂದು ಶ್ಲಾಘಿಸಿದರು.ವಿದೇಶ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಕರ್ನಾಟಕ ರಾಜ್ಯದ ಸಂಸ್ಕೃತಿ, ಕಲೆ, ಸಾಹಿತ್ಯ, ಭಾಷೆ, ಸುಭಿಕ್ಷ ಮತ್ತು ಕ್ಷೇಮ ವಾಗಿ ಸಂಪದ್ಭರಿತ ದೇವಾಲಯಗಳು ಇದ್ದು, ಕನ್ನಡ ನಾಡನ್ನು ಹೊರತುಪಡಿಸಿ ಬೇರೆಲ್ಲೂ ಈ ರೀತಿ ಕಾಣಲು ಸಾಧ್ಯವಿಲ್ಲ ಎಂದು ಹೇಳಿದರು.
ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದರೆ ಮುಂದೆ ಕನ್ನಡ ಐಚ್ಚಿಕ ವಿಷಯದಲ್ಲಿ ಎಂಎ ಪದವಿ ಪಡೆಯಲು ಅನುಕೂಲವಾಗಲಿದೆ ಎಂದು ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಹಿಳಾ ಸಬಲೀಕರಣಕ್ಕೆ ಉತ್ತೇಜನ ನೀಡುತ್ತಿದ್ದು, ಈ ಹಿನ್ನೆಲೆಯಲ್ಲಿ ಪ್ರಸ್ತಾವನೆ ಸಲ್ಲಿಸಿರುವುದನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರದಿಂದ ಅನುದಾನ ತಂದು ಕಾಲೇಜು ಅಭಿವೃದ್ಧಿಪಡಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ದಾಮೋದರ ಗೌಡ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಐಡಿಎಸ್‌ಜಿ ಕಾಲೇಜಿನ ಕನ್ನಡ ಸಹ ಪ್ರಾಧ್ಯಾಪಕರಾದ ಸುಧಾ ಭಾಗವಹಿಸಿ ಅಕ್ಕ ಮಹಾದೇವಿಯವರ ವಚನಗಳ ಸ್ತ್ರೀವಾದಿ ನೆಲೆಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.