ಬಿಬಿಎಂಪಿಯಿಂದ ಟೆಲಿಕಾಂ ಶುಲ್ಕ ವಸೂಲಿ ಶುರು

KannadaprabhaNewsNetwork |  
Published : Sep 01, 2024, 01:56 AM IST
ಟೆಲಿಕಾಂ ಶುಲ್ಕ | Kannada Prabha

ಸಾರಾಂಶ

ರಾಜಧಾನಿ ಬೆಂಗಳೂರಿನಲ್ಲಿರುವ ಟೆಲಿಕಾಂ ಟವರ್‌ಗಳಿಗೆ ವಾರ್ಷಿಕ 12 ಸಾವಿರ ರು. ಶುಲ್ಕ ವಿಧಿಸಿ ವಸೂಲಿಗೆ ಬಿಬಿಎಂಪಿ ಕಂದಾಯ ವಿಭಾಗ ಮುಂದಾಗಿದೆ.

ವಿಶ್ವನಾಥ ಮಲೇಬೆನ್ನೂರು

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜಧಾನಿ ಬೆಂಗಳೂರಿನಲ್ಲಿರುವ ಟೆಲಿಕಾಂ ಟವರ್‌ಗಳಿಗೆ ವಾರ್ಷಿಕ 12 ಸಾವಿರ ರು. ಶುಲ್ಕ ವಿಧಿಸಿ ವಸೂಲಿಗೆ ಬಿಬಿಎಂಪಿ ಕಂದಾಯ ವಿಭಾಗ ಮುಂದಾಗಿದೆ. ಕಳೆದ ಒಂದೂವರೆ ದಶಕದಿಂದ ಬಿಬಿಎಂಪಿಯು ನಗರದಲ್ಲಿರುವ ಟವರ್‌ ಗಳಿಗೆ ಶುಲ್ಕ ವಿಧಿಸುವುದಕ್ಕೆ ಪ್ರಯತ್ನ ಮಾಡುತ್ತಿದೆ. ಆದರೆ, ಈ ವರೆಗೆ ಶುಲ್ಕ ವಿಧಿಸುವುದಕ್ಕೆ ಸಾಧ್ಯವಾಗಿರಲಿಲ್ಲ. ಇದೀಗ ಬಿಬಿಎಂಪಿಯು ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಕಂದಾಯ ವಿಭಾಗವೂ ಈಗಾಗಲೇ ಬೆಂಗಳೂರಿನ ವಿವಿಧ ಭಾಗದಲ್ಲಿ ಟವರ್‌ ಸ್ಥಾಪಿಸಿರುವ ಟೆಲಿಕಾಂ ಸಂಸ್ಥೆಗಳ ಪ್ರತಿ ನಿಧಿಗಳೊಂದಿಗೆ ಸಭೆ ನಡೆಸಿದೆ.

ಸಭೆಯಲ್ಲಿ ತಮ್ಮ ಸಂಸ್ಥೆಗಳಿಂದ ನಗರದಲ್ಲಿ ಒಟ್ಟು ಎಷ್ಟು ಟವರ್‌ ಸ್ಥಾಪಿಸಲಾಗಿದೆ. ಸ್ಥಾಪಿಸಲಾದ ಸ್ಥಳದ ಮಾಲೀಕರು ಯಾರು, ಎಷ್ಟು ವರ್ಷದಿಂದ ಸ್ಥಾಪಿಸಲಾಗಿದೆ ಎಂಬ ವಿವರವನ್ನು ನೀಡುವಂತೆ ಸೂಚಿಸಲಾಗಿದೆ. 2018ರ ಮಾಹಿತಿ ಪ್ರಕಾರ ನಗರದಲ್ಲಿ 6,766 ಟವರ್‌ ಗಳಿವೆ ಎಂಬ ಮಾಹಿತಿ ಇದೆ. ಆದರೆ, ಇತ್ತೀಚಿನ ದಿನಗಳಲ್ಲಿ ಒಂದೇ ಟವರ್‌ ನಲ್ಲಿ ಮೂರ್ನಾಲ್ಕು ಸಂಸ್ಥೆಗಳ ಸಿಗ್ನಲ್‌ಗಳನ್ನು ಅಳವಡಿಕೆ ಮಾಡುತ್ತಿದ್ದಾರೆ. ಈ ಹಿಂದೆ ಪ್ರತಿ ಸಂಸ್ಥೆಯು ಪ್ರತ್ಯೇಕವಾಗಿ ಟವರ್ ಅಳವಡಿಕೆ ಮಾಡಿ ಸೇವೆ ನೀಡುತ್ತಿದ್ದವು.

2015ರಿಂದ ಶುಲ್ಕ ವಸೂಲಿ:

ಬಿಬಿಎಂಪಿಯು 2008ರಲ್ಲಿ ಟವರ್ ಗಳಿಗೆ ಶುಲ್ಕ ವಿಧಿಸುವುದಕ್ಕೆ ಮುಂದಾಗಿತ್ತು. ಈ ಕ್ರಮವನ್ನು ಪ್ರಶ್ನಿಸಿ ಟೆಲಿಕಾಂ ಸಂಸ್ಥೆಗಳು ನ್ಯಾಯಾಲಯದ ಮೊರೆ ಹೋಗಿದ್ದವು. ಆಗ ರಾಜ್ಯ ಸರ್ಕಾರವೂ 2015ರಲ್ಲಿ ಕರ್ನಾಟಕ ಹೊಸ ದೂರಸಂಪರ್ಕ ಮೂಲಸೌಕರ್ಯ ಟವರ್‌ಗಳ ನಿಯಮಾವಳಿ ರೂಪಿಸಿ ಆದೇಶಿಸಿತ್ತು. ಇತ್ತೀಚಿಗೆ ಈ ಪ್ರಕರಣ ಮುಕ್ತಾಯಗೊಂಡಿದೆ. ನ್ಯಾಯಾಲಯವು ನಿಯಮ ರೂಪಿಸಿದ ಆದೇಶಿಸಿದ ನಂತರ ಶುಲ್ಕ ಸಂಗ್ರಹಿಸಬಹುದು ಎಂದು ಆದೇಶಿಸಿದೆ. ರಾಜ್ಯ ಸರ್ಕಾರದ ನಿಯಮಾವಳಿಯ ಪ್ರಕಾರ ಪ್ರತಿ ಟವರ್‌ಗೆ ವಾರ್ಷಿಕ 12 ಸಾವಿರ ರು. ಶುಲ್ಕ ವಿಧಿಸಬಹುದಾಗಿದೆ. ಆ ಪ್ರಕಾರ ಬಿಬಿಎಂಪಿ ವಸೂಲಿಗೆ ಮುಂದಾಗಿದೆ. 2015ರಿಂದ ಪ್ರತಿ ಟವರ್‌ಗೆ ವರ್ಷಕ್ಕೆ 12 ಸಾವಿರ ರು. ಶುಲ್ಕ ವಿಧಿಸಲಾಗುತ್ತದೆ. ಈ ಪ್ರಕಾರ 350 ರಿಂದ 500 ಕೋಟಿ ರು. ವರೆಗೆ ಬಿಬಿಎಂಪಿ ಆದಾಯ ಬರುವ ನಿರೀಕ್ಷೆ ಇದೆ.

ಸ್ಥಳದ ಮಾಲೀಕರಿಂದ ವಸೂಲಿ:

ಟೆಲಿಕಾಂ ಸಂಸ್ಥೆಗಳು ಟವರ್ ಸ್ಥಾಪಿಸಿರುವ ಜಾಗದ ಮಾಲೀಕರಿಗೆ ಮಾಸಿಕ ಅಥವಾ ವಾರ್ಷಿಕ ಮೊತ್ತವನ್ನು ಸಂದಾಯ ಮಾಡುತ್ತಿವೆ. ಹಾಗಾಗಿ, ಬಿಬಿಎಂಪಿಯು ಸ್ಥಳದ ಮಾಲೀಕರಿಂದ ಶುಲ್ಕ ವಸೂಲಿಗೆ ಮುಂದಾಗಿದೆ. ಟವರ್‌ ಅಳತೆ, ಎತ್ತರ ಹಾಗೂ ಎಷ್ಟು ಸಂಖ್ಯೆಯ ಸರ್ವೀಸ್ ಪ್ರೊವೈಡರ್ ಟವರ್‌ನಲ್ಲಿ ಇವೆ ಎಂಬುದನ್ನು ಪರಿಗಣನೆಗೆ ತೆಗೆದುಕೊಳ್ಳದೇ ಟವರ್‌ ಲೆಕ್ಕಾಚಾರದಲ್ಲಿ ಶುಲ್ಕ ವಸೂಲಿಗೆ ತೀರ್ಮಾನಿಸಿದೆ.

ವಸೂಲಿಗೆ ಹೇಗೆ?: ಟೆಲಿಕಾಂ ಸಂಸ್ಥೆಯ ಪ್ರತಿನಿಧಿಗಳು ನಗರದಲ್ಲಿ ಎಲ್ಲೆಲ್ಲಿ ಟವರ್ ಸ್ಥಾಪಿಸಲಾಗಿವೆ ಎಂಬ ಮಾಹಿತಿ ನೀಡಲಿದ್ದಾರೆ. ಆದರ ಮಾಲೀಕರ ವಿವರನ್ನು ನೀಡಲಿದ್ದಾರೆ. ಸಂಬಂಧಪಟ್ಟ ಕಂದಾಯ ಅಧಿಕಾರಿಗಳು ಆಯಾ ಮಾಲೀಕರಿಗೆ ನೋಟಿಸ್‌ ನೀಡಿ ವಸೂಲಿಗೆ ಕ್ರಮ ವಹಿಸಲಿದ್ದಾರೆ ಎಂದು ಬಿಬಿಎಂಪಿ ಕಂದಾಯ ವಿಭಾಗದ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!