ಸಮಾನತೆ ಹಕ್ಕು ನೀಡಿದ್ದು ಸಂವಿಧಾನ

KannadaprabhaNewsNetwork | Published : Apr 20, 2025 1:49 AM

ಸಾರಾಂಶ

ಸಂವಿಧಾನದ ಹಕ್ಕಿನಿಂದ ಚಾ ಮಾರುವ ವ್ಯಕ್ತಿ ಪ್ರಧಾನಿ ಆಗಿದ್ದಾರೆ. ಬುಡಕಟ್ಟು ಸಮುದಾಯದ ಮಹಿಳೆ ರಾಷ್ಟ್ರಪತಿ ಆಗಿದ್ದಾರೆ. ದಲಿತ ಜನಾಂಗದ ವ್ಯಕ್ತಿ ಹೈಕೋರ್ಟ್ ನ್ಯಾಯಮೂರ್ತಿ ಆಗುತ್ತಿದ್ದಾರೆ. ಇದಕ್ಕೆ ಕಾರಣ ಯಾವುದೇ ಧರ್ಮ ಗ್ರಂಥ, ದೇವರು ಅಲ್ಲ. ಸಂವಿಧಾನ ನೀಡಿರುವ ಹಕ್ಕಿನಿಂದ.

ಕುಕನೂರು:

ಯಾವ ಧರ್ಮ ಗ್ರಂಥ ಹಾಗೂ ದೇವತೆಗಳು ಭಾರತದಲ್ಲಿ ಸಮಾನತೆ ಹಕ್ಕು ನೀಡಿಲ್ಲ. ಅದನ್ನು ನೀಡಿದ್ದು ಡಾ. ಬಿ.ಆರ್‌. ಅಂಬೇಡ್ಕರ್‌ ರಚಿಸಿದ ಸಂವಿಧಾನ ಎಂದು ಉಪನ್ಯಾಸಕ ಬಸವರಾಜ ಸೂಳಿಭಾವಿ ಹೇಳಿದರು.

ಪಟ್ಟಣದಲ್ಲಿ ತಾಲೂಕಾಡಳಿತ, ತಾಲೂಕು ಪಂಚಾಯಿತಿ, ಪಟ್ಟಣ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಜರುಗಿದ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನರಾಮ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ದೇವಸ್ಥಾನದಲ್ಲಿ ದಲಿತರಿಗೂ ಪ್ರವೇಶ ಎಂಬುದು ಸಂವಿಧಾನದ ಆಶಯ. ಆದರೆ, ಇದು ಎಷ್ಟರ ಮಟ್ಟಿಗೆ ಸಾರ್ಥಕ ಆಗಿದೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದರು.

ಸಂವಿಧಾನದ ಹಕ್ಕಿನಿಂದ ಚಾ ಮಾರುವ ವ್ಯಕ್ತಿ ಪ್ರಧಾನಿ ಆಗಿದ್ದಾರೆ. ಬುಡಕಟ್ಟು ಸಮುದಾಯದ ಮಹಿಳೆ ರಾಷ್ಟ್ರಪತಿ ಆಗಿದ್ದಾರೆ. ದಲಿತ ಜನಾಂಗದ ವ್ಯಕ್ತಿ ಹೈಕೋರ್ಟ್ ನ್ಯಾಯಮೂರ್ತಿ ಆಗುತ್ತಿದ್ದಾರೆ. ಇದಕ್ಕೆ ಕಾರಣ ಯಾವುದೇ ಧರ್ಮ ಗ್ರಂಥ, ದೇವರು ಅಲ್ಲ. ಸಂವಿಧಾನ ನೀಡಿರುವ ಹಕ್ಕಿನಿಂದ ಎಂದ ಅವರು, ಇನ್ನೂ ಜೀವಂತವಾಗಿರುವ ಮನುವಾದದ ಸ್ಥಿತಿ ಹೋಗಲಾಡಿಸಬೇಕು. ಸಂವಿಧಾನದ ಅರಿವು ಬಂದಾಗ ಶೋಷಣೆಗೆ ಒಳಗಾಗುವವರ ಸಂಖ್ಯೆ ಇಳಿಮುಖವಾಗುತ್ತದೆ. ಮನೆಯಲ್ಲಿ ದೇವರ ಪೋಟೋ ಬದಲು ಅಂಬೇಡ್ಕರ್ ಪೋಟೋ ಹಾಕಿ‌ದರೆ ಭಾರತೀಯತೆ ಬೆಳೆಯುತ್ತದೆ ಎಂದರು.

ವಕೀಲ ಮಹಾಂತೇಶ ಬೂದಗುಂಪಾ ಮಾತನಾಡಿ, ಅಂಬೇಡ್ಕರ್ ಆಧುನಿಕ ಭಾರತದ ಪಿತಾಮಹ. ಶಿಕ್ಷಣ, ಸಂಘಟನೆ, ಹೋರಾಟದ ಜತೆಗೆ ಆರ್ಥಿಕ ಸಬಲೀಕರಣ ಆದಾಗ ಸಮುದಾಯಗಳ ಅಭಿವೃದ್ಧಿ ಆಗುತ್ತದೆ. ಅಂಬೇಡ್ಕರ್ ಬಾಲ್ಯದಿಂದ ಕಷ್ಟದ ದಿನಗಳನ್ನು ಎದುರಿಸಿ ತಮ್ಮ ಪರಿಸ್ಥಿತಿ ಮತ್ತೊಬ್ಬರಿಗೆ ಬರಬಾರದು ಎಂದು ಸಂವಿಧಾನ ರಚಿಸಿ ಸಮಾನತೆ ಕಲ್ಪಿಸಿದ್ದಾರೆ ಎಂದು ಹೇಳಿದರು.

ತಹಸೀಲ್ದಾರ್‌ ಎಚ್. ಪ್ರಾಣೇಶ ಕಾರ್ಯಕ್ರಮ ಉದ್ಘಾಟಿಸಿದರು. ಸಮಾಜ ಕಲ್ಯಾಣ ಇಲಾಖೆ ತಾಲೂಕು ಕಲ್ಯಾಣಾಧಿಕಾರಿ ಶಶಿಧರ ಸಕ್ರಿ ಪ್ರಾಸ್ತಾವಿಕ ಮಾತನಾಡಿದರು. ಪಪಂ ಉಪಾಧ್ಯಕ್ಷ ಪ್ರಶಾಂತ ಆರಬೆರಳಿನ್ ಅಧ್ಯಕ್ಷತೆ ವಹಿಸಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷ ನೂರುದ್ದೀನಸಾಬ್ ಗುಡಿಹಿಂದಲ್, ತಾಪಂ ಇಒ ಸಂತೋಷ ಬಿರಾದಾರ, ಪಪಂ ಮುಖ್ಯಾಧಿಕಾರಿ ರವೀಂದ್ರ ಬಾಗಲಕೋಟೆ, ಸಿಡಿಪಿಒ ಬೆಟದಪ್ಪ ಮಾಳೆಕೊಪ್ಪ, ಬಿಸಿಎಂ ಇಲಾಖೆ ಕಲ್ಯಾಣಾಧಿಕಾರಿ ಶಿವಶಂಕರ ಕರಡಕಲ್, ಪಪಂ ಸದಸ್ಯರಾದ ರಾಮಣ್ಣ ಬಂಕದಮನಿ, ಗಗನ ನೋಟಗಾರ, ಜಗನ್ನಾಥ ಭೋವಿ, ಮಹಾಂತೇಶ ಬೂದಗುಂಪಿ, ಹನುಮಂತ ರಾವಣಕಿ, ನಿಂಗಪ್ಪ ಗೊರ್ಲೆಕೊಪ್ಪ, ಯಮನೂರಪ್ಪ ಗೊರ್ಲೆಕೊಪ್ಪ, ಮಲೀಯಪ್ಪ ಅಣ್ಣಿಗೇರಿ, ಮಲ್ಲಿಕಾರ್ಜುನ ಉಜ್ಜಮ್ಮನವರ, ಈಶಪ್ಪ ದೊಡ್ಮನಿ, ಜಗದೀಶ ತೊಂಡಿಹಾಹ, ಲಕ್ಷ್ಮಣ ಕಾಳಿ, ಭೀಮಣ್ಣ ನಡುಲಮನಿ, ರಾಘವೇಂದ್ರ ಕಾತರಕಿ ಇದ್ದರು.

ಅದ್ಧೂರಿ ಮೆರವಣಿಗೆ:

ಅಂಬೇಡ್ಕರ್‌ ಜಯಂತಿ ಅಂಗವಾಗಿ ತೆರೆದ ವಾಹನದಲ್ಲಿ ಅಂಬೇಡ್ಕರ್‌ ರ್ಹಾಗೂ ಜಗಜ್ಜೀವನರಾಮ್ ಅವರ ಭಾವಚಿತ್ರದ ಮೆರವಣಿಗೆ ಜರುಗಿತು. ವಾದ್ಯ ಮೇಳ, ನಂದಿಕೋಲು ಕುಣಿತ ಮೆರವಣಿಗೆಗೆ ಮೆರಗು ನೀಡಿದವು.

Share this article