ಅಮರೇಶ್ವರಸ್ವಾಮಿ ಕಂದಗಲ್ಲಮಠ
ಕುಕನೂರು: ಕುಕನೂರು ತಾಲೂಕಿನಿಂದ ನರೇಗಲ್ಲಿಗೆ ಹೋಗಬೇಕಾದರೆ ಹರಸಾಹಸ ಪಡುವ ಸ್ಥಿತಿ ಪ್ರಯಾಣಿಕರಿಗೆ ಒದಗಿ ಬಂದಿದೆ. ಈ ರಸ್ತೆಯಲ್ಲಿ ಪ್ರಯಾಣಿಸಿದವರು ಯಾಕಾದ್ರೂ ಈ ರಸ್ತೆಗೆ ಬಂದೇವಪ್ಪಾ, ಏನಾದ್ರೂ ಸರಿ ಇತ್ತ ಇನ್ನೊಮ್ಮೆ ಬರಬಾರ್ದು ನೋಡು ಎನ್ನದೇ ಹೋಗುವುದಿಲ್ಲ.ಕುಕನೂರು ತಾಲೂಕಿನ ತೊಂಡಿಹಾಳ ಗ್ರಾಮದಿಂದ ನರೇಗಲ್ಲಿಗೆ ಹೋಗಬೇಕಾದರೆ, ತೊಂಡಿಹಾಳದಿಂದ ಸುಮಾರು ಐದು-ಆರು ಕಿ.ಮೀ. ರಸ್ತೆ, ಅಂದರೆ ಕುಕನೂರು ತಾಲೂಕಿನ ಸರಹದ್ದು ದಾಟುವ ವರೆಗೂ ರಸ್ತೆ ಸುವ್ಯವಸ್ಥೆಯಲ್ಲಿದೆ. ಆದರೆ ಕುಕನೂರು ತಾಲೂಕು ಸರಹದ್ದು ಮುಗಿದ ಹತ್ತಾರು ಹೆಜ್ಜೆಯಲ್ಲಿಯೇ ಹದಗೆಟ್ಟ ರಸ್ತೆ ಎದುರಾಗುತ್ತದೆ. ತಗ್ಗು ಗುಂಡಿಗಳು ಬಿದ್ದಿವೆ. ರಸ್ತೆ ಅಕ್ಕಪಕ್ಕ ಜಾಲಿ ಗಿಡಗಳು ಬೆಳೆದು ನಿಂತಿವೆ. ಡಾಂಬರ್ ಕಿತ್ತು ಕಡಿಗಳು ಹೊರಬಂದಿವೆ... ಹೀಗೆ ನರೇಗಲ್ಲ ಪಟ್ಟಣದ ತಲುಪುವ ವರೆಗೂ ಆರು ಕಿ.ಮೀ.ಗೂ ಹೆಚ್ಚು ರಸ್ತೆ ಪೂರ್ತಿ ಹದಗೆಟ್ಟು ಸಂಚಾರಕ್ಕೆ ತೊಂದರೆ ಉಂಟು ಮಾಡುತ್ತಿದೆ.ಉತ್ತಮ ರಸ್ತೆ ಇದ್ದರೆ ಪ್ರಯಾಣಿಕರು ಸುರಕ್ಷಿತವಾಗಿ ಹಾಗೂ ಬೇಗ ತಲುಪಬಹುದು. ಆದರೆ ಈ ರಸ್ತೆಯಲ್ಲಿ ಜೀವ ಕೈಯಲ್ಲಿಟ್ಟುಕೊಂಡೇ ಪ್ರಯಾಣಿಸಬೇಕಾದ ಅನಿವಾರ್ಯತೆ ಇದೆ. ತೊಂಡಿಹಾಳ ಮಾರ್ಗವಾಗಿ ನರೇಗಲ್ಲ ಪಟ್ಟಣಕ್ಕೆ ತೆರಳಿದರೆ, ಇಲ್ಲವೇ ನರೇಗಲ್ಲ ಪಟ್ಟಣದಿಂದ ತೊಂಡಿಹಾಳ ಗ್ರಾಮಕ್ಕೆ ಬಂದರೆ ಈ ರಸ್ತೆಯ ಅಧ್ವಾನ ಸ್ಥಿತಿ ಕಂಡು ಬರುತ್ತದೆ.
ಜಾಲಿ, ತಗ್ಗು ಗುಂಡಿ: ನರೇಗಲ್ಲ ಸಂಪರ್ಕಿಸುವ ತೊಂಡಿಹಾಳ-ನರೇಗಲ್ಲ ರಸ್ತೆಗೆ ಮಗ್ಗುಲುಗಳೆಲ್ಲ ಜಾಲಿಗಿಡಗಳಿಂದ ಕೂಡಿದೆ. ಎದುರು ಬರುವ ವಾಹನ ನೇರವಾಗಿ ಬೇಗ ಕಾಣುವುದಿಲ್ಲ. ಇದರಿಂದ ಅಪಘಾತ ಉಂಟಾಗುವ ಸಂಭವ ಹೆಚ್ಚಿದೆ. ಅಲ್ಲದೆ ರಸ್ತೆ ತುಂಬೆಲ್ಲ ತಗ್ಗು-ಗುಂಡಿಗಳು ಇರುವ ಕಾರಣ ರಸ್ತೆ ಸಂಚಾರ ಸಹ ಕಷ್ಟಕರವಾಗಿದೆ. ವಾಹನಗಳು ಯಾವ ಕಡೆ ಬರುತ್ತವೆ ಎಂಬುದೇ ಗೊತ್ತಾಗುವುದಿಲ್ಲ.ರಸ್ತೆ ದುರಸ್ತಿ ಆಗಲಿ: ಜನರ ಹಿತದೃಷ್ಟಿಯಿಂದ ಈ ರಸ್ತೆಯನ್ನು ಜನಪ್ರತಿನಿಧಿಗಳು, ಅಧಿಕಾರಿ ವರ್ಗದವರು ದುರಸ್ತಿ ಮಾಡಿಸಬೇಕು. ಮುಂದೆ ಆಗುವ ಅಪಾಯಕಾರಿ ಘಟನೆಗಳನ್ನು ತಪ್ಪಿಸಬೇಕು. ಇದರಿಂದ ಜನರ ಪ್ರಯಾಣ ಸಹ ಸುಖಕರವಾಗಿರುತ್ತದೆ. ಅಲ್ಲದೆ ಮಳೆಗಾಲದಲ್ಲಿ ಸಹ ಅನುಭವಿಸುವ ತೊಂದರೆ ತಪ್ಪುತ್ತದೆ. ಈ ಬಗ್ಗೆ ಕಾಳಜಿ ವಹಿಸಿದರೆ ಪ್ರಯಾಣಿಕರಿಗೆ ಅನುಕೂಲ ಆಗುತ್ತದೆ.ನರೇಗಲ್ಲ ಪಟ್ಟಣಕ್ಕೆ ತೊಂಡಿಹಾಳ ರಸ್ತೆ ಮೂಲಕ ತೆರಳಬೇಕೆಂದರೆ ಯಾಕಪ್ಪಾ ಈ ರಸ್ತೆಗೆ ಬಂದೇವು ಎನ್ನುವ ಭಾವನೆ ಬರುತ್ತದೆ. ಜನಪ್ರತಿನಿಧಿಗಳು ಈ ಬಗ್ಗೆ ಕಾಳಜಿ ವಹಿಸಿ ರಸ್ತೆ ಸುಧಾರಣೆ ಮಾಡಿದರೆ ಪ್ರಯಾಣಕ್ಕೆ ಅನುಕೂಲ ಆಗುತ್ತದೆ. ರಸ್ತೆ ತುಂಬಾ ಹದಗೆಟ್ಟಿದೆ. ಕಲ್ಲು, ತಗ್ಗು, ಜಾಲಿ ಗಿಡಗಳಿಂದ ತುಂಬಿದೆ ಎಂದು ರಸ್ತೆ ಸಂಚರಿಸುವ ಕಲ್ಲಯ್ಯ, ರಾಮಣ್ಣ ಹೇಳುತ್ತಾರೆ.