ಭಾರೀ ಮಳೆಗೆ ದೇವಾಲಯದ ಎದುರಿನ ರಸ್ತೆ ಜಲಾವೃತ

KannadaprabhaNewsNetwork |  
Published : Jun 27, 2024, 01:10 AM IST
ದೇವಾಲಯದ ಎದುರು ಜಲಾವೃತವಾದ ರಸ್ತೆ  | Kannada Prabha

ಸಾರಾಂಶ

ಚಿನ್ನದಕೇರಿಯಲ್ಲಿರುವ ಬೃಹತ್ ಆಲದ ಮರದ ಟೊಂಗೆ ಬಿದ್ದು ಮನೆಯ ಸಂಪರ್ಕದ ವಿದ್ಯುತ್ ತಂತಿ ತುಂಡಾಗಿ ಪಕ್ಕದಲ್ಲಿರುವ ಮನೆಗೂ ಅಲ್ಪ ಹಾನಿಯಾಗಿದೆ.

ಗೋಕರ್ಣ: ಕಳೆದೆರಡು ದಿನಗಳಿಂದ ಪ್ರವಾಸಿ ತಾಣದಲ್ಲಿ ಅಬ್ಬರದ ಮಳೆ ಆಗುತ್ತಿದೆ. ರಭಸದ ಗಾಳಿ ಬೀಸುತ್ತಿದೆ. ಬುಧವಾರ ಬೆಳಗ್ಗೆ ಮಹಾಬಲೇಶ್ವರ ಮಂದಿರದ ಅಮೃತಾನ್ನ ಭೋಜನ ಶಾಲೆಯ ಚಾವಣಿ ಮೇಲೆ ತೆಂಗಿನ ಮರ ಬಿದ್ದು ಹಾನಿಯಾಗಿದೆ.ಚಿನ್ನದಕೇರಿಯಲ್ಲಿರುವ ಬೃಹತ್ ಆಲದ ಮರದ ಟೊಂಗೆ ಬಿದ್ದು ಮನೆಯ ಸಂಪರ್ಕದ ವಿದ್ಯುತ್ ತಂತಿ ತುಂಡಾಗಿ ಪಕ್ಕದಲ್ಲಿರುವ ಮನೆಗೂ ಅಲ್ಪ ಹಾನಿಯಾಗಿದೆ.

ಬೀಳುವ ಸ್ಥಿತಿಯಲ್ಲಿರುವ ಈ ಮರವನ್ನು ತೆರವುಗೊಳಿಸುವಂತೆ ಇಲ್ಲಿನ ನಿವಾಸಿ ಮನೋಹರ್ ಪೈ ಎಂಟು ತಿಂಗಳ ಹಿಂದೆ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದರು. ವಾರ್ಡ್‌ ಸದಸ್ಯ ಸುಜಯ ಶೆಟ್ಟಿ ಮರ ತೆರವುಗೊಳಿಸಲು ಅಗತ್ಯ ಕ್ರಮಕ್ಕೆ ಮುಂದಾಗಿದ್ದರು. ಆದರೆ ಗ್ರಾಮ ಪಂಚಾಯಿತಿಯಲ್ಲಿ ಇದರ ವೆಚ್ಚ ಭರಿಸಲು ಸಾಕಷ್ಟು ಹಣವಿಲ್ಲ ಎಂದು ಅಲ್ಲಿಗೆ ಕೈಚೆಲ್ಲಿದ್ದಾರೆ. ಆದರೆ ಹಾಗೇ ಬಿಟ್ಟ ಪರಿಣಾಮ ಒಂದು ಟೊಂಗೆ ಮುರಿದಿದ್ದು, ಇನ್ನು ರಸ್ತೆ ಬದಿ ಮರವು ಒಲಿದಿದ್ದು, ವಿದ್ಯುತ್ ತಂತಿ ಮೇಲೆ ಬಿದ್ದು ಅವಘಡ ಸಂಭವಿಸುವ ಆತಂಕವಿದೆ. ಸಾಕಷ್ಟು ಅನವಶ್ಯಕ ಕಾಮಗಾರಿಗೆ ಹಣ ವ್ಯಯಿಸುವ ಪಂಚಾಯಿತಿ ಇಂತಹ ಅಗತ್ಯ ಕೆಲಸವನ್ನು ಮಾಡದೆ ಇರುವುದಕ್ಕೆ ಸ್ಥಳೀಯ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ಸ್ಥಳೀಯ ಆಡಳಿತ ಎಚ್ಚೆತ್ತುಕೊಂಡು ಮರ ತೆರವುಗೊಳಿಸಬೇಕಿದೆ.

ಇಲ್ಲಿನ ಎಲ್ಲ ಪ್ರಮುಖ ಮಾರ್ಗಗಳ ಚರಂಡಿಯ ನೀರು ರಸ್ತೆ ಮೇಲೆ ಬಂದು ಜಲಾವೃತಗೊಂಡಿದ್ದು, ಬಹುಮುಖ್ಯವಾಗಿ ಮಹಾಗಣಪತಿ, ಮಹಾಬಲೇಶ್ವರ ಮಂದಿರದ ಬಳಿ ಹಾಗೂ ರಥಬೀದಿಯಲ್ಲಿ ಹೊಲಸು ನೀರು, ಕಲ್ಲು ಮಣ್ಣು ರಾಶಿ ಬಿದ್ದಿದ್ದು, ಈ ಹೊಲಸನ್ನೆ ದಾಟಿ ಭಕ್ತರು ದೇವರ ದರ್ಶನಕ್ಕೆ ತೆರಳಬೇಕಾದ ಸ್ಥಿತಿ ಉಂಟಾಗಿದೆ. ರಾಜ್ಯ ಹೆದ್ದಾರಿಯ ಭದ್ರಕಾಳಿ ಕಾಲೇಜು, ಚೌಡಗೇರಿ ಕ್ರಾಸ್ ಬಳಿ ಚರಂಡಿಯಲ್ಲಿ ಮಣ್ಣು ತುಂಬಿ ರಸ್ತೆ ನದಿಯಾಗಿ ಮಾರ್ಪಡುತ್ತಿದೆ. ಕುಮಟಾದಲ್ಲಿ ಮಳೆ ಬಿರುಸು, ರಸ್ತೆ ಮೇಲೆ ನೀರು

ಕುಮಟಾ: ತಾಲೂಕಿನಾದ್ಯಂತ ಮಳೆ ಬಿರುಸಿನಿಂದ ಬೀಳುತ್ತಿದ್ದು, ಬುಧವಾರ ಹಲವೆಡೆ ಮಳೆಯ ನೀರು ರಸ್ತೆಯ ಮೇಲೆ ತುಂಬಿಕೊಂಡು ಸಂಚಾರಕ್ಕೆ ತೊಂದರೆ ಅನುಭವಿಸುವಂತಾಗಿದೆ.

ಕುಮಟಾ- ಸಿದ್ದಾಪುರ ರಾಜ್ಯ ಹೆದ್ದಾರಿಯ ಹಾರೋಡಿ ಬಳಿ ಮಳೆ ನೀರು ರಸ್ತೆಯ ಮೇಲೆ ತುಂಬಿಕೊಂಡು ವಾಹನಿಗರು ಸಂಚಾರಕ್ಕೆ ಸಮಸ್ಯೆ ಎದುರಿಸುವಂತಾಯಿತು. ತಾಸುಗಟ್ಟಲೆ ನೀರು ರಸ್ತೆಯ ಮೇಲೆ ನಿಂತಿದ್ದರಿಂದ ದೊಡ್ಡ ವಾಹನಗಳು ಹೇಗೋ ದಾಟಿದವಾದರೂ ದ್ವಿಚಕ್ರ ವಾಹನಿಗರು ಮಳೆ ಕಡಿಮೆಯಾಗುವುದನ್ನೇ ಕಾಯುತ್ತಾ ಇರಬೇಕಾಯಿತು.ರಸ್ತೆಯ ಇಕ್ಕೆಲಗಳಲ್ಲಿ ಸಮರ್ಪಕ ಕಾಲುವೆ ವ್ಯವಸ್ಥೆ ಮಾಡದಿರುವುದು ಹಾಗೂ ಮಳೆ ನೀರು ಹರಿಯುವುದಕ್ಕೆ ಇದ್ದ ಹಳೆಯ ಅಡ್ಡ ತೋಡುಗಳನ್ನು ಮುಚ್ಚಿದ್ದರ ಪರಿಣಾಮ ಮಳೆನೀರು ರಸ್ತೆಯ ಮೇಲೆಯೇ ತುಂಬಿಕೊಂಡು ಪ್ರವಾಹ ಪರಿಸ್ಥಿತಿ ಎದುರಿಸುವಂತಾಗಿದೆ ಎಂದು ಭಾಸ್ಕರ ಪಟಗಾರ ತಿಳಿಸಿದ್ದಾರೆ.

ಅಧಿಕಾರಿಗಳ ನಿರ್ಲಕ್ಷ್ಯದಿಂದ ರಸ್ತೆಯಲ್ಲಿ ಮಳೆಗಾಲದಲ್ಲಿ ಇಂಥ ದುರವಸ್ಥೆ ಉದ್ಭವಿಸಿದೆ. ತಕ್ಷಣ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು, ಬಂದು ಸಮಸ್ಯೆ ಬಗೆಹರಿಸಬೇಕು. ಮಳೆನೀರು ಸರಾಗವಾಗಿ ಹರಿದು ಹೋಗಲು ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದರು. ಇದಲ್ಲದೇ ಪಟ್ಟಣದ ಮಾಸ್ತಿಕಟ್ಟೆ, ಬಸ್ತಿಪೇಟೆ ಇನ್ನಿತರ ಕಡೆಗಳಲ್ಲೂ ಮಳೆನೀರು ರಸ್ತೆಯ ಮೇಲೆ ನಿಂತು ವಾಹನ ಸಂಚಾರಕ್ಕೆ ಅನಾನುಕೂಲವಾಯಿತು.

PREV

Recommended Stories

ವಿಶ್ವಾದ್ಯಂತ ಒಂದೇ ದಿನ ಕಾಂತಾರ ಚಾಪ್ಟರ್ 1 ಬಿಡುಗಡೆ
ಈರುಳ್ಳಿ, ಹೂ, ಪಚ್ಚ ಬಾಳೆ ಬೆಲೆ ಧರೆಗೆ!