ಶೃಂಗೇರಿ ಸಂಪರ್ಕ ರಸ್ತೆಗಳಲ್ಲಿ ಹೊಂಡಗಳದ್ದೇ ಸಾಮ್ರಾಜ್ಯ

KannadaprabhaNewsNetwork |  
Published : Nov 10, 2025, 12:15 AM IST
ೇ್ | Kannada Prabha

ಸಾರಾಂಶ

ಶೃಂಗೇರಿ, ಪ್ರಮುಖ ಪ್ರವಾಸಿ ಕೇಂದ್ರಗಳಲ್ಲಿ ಒಂದಾದ ಶೃಂಗೇರಿಗೆ ಪ್ರತಿನಿತ್ಯ ರಾಜ್ಯ ಸೇರಿದಂತೆ ದೇಶ, ವಿದೇಶಗಳಿಂದಲೂ ಶ್ರೀ ಶಂಕರರ ಪುಣ್ಯಭೂಮಿಯಲ್ಲಿ ಶಾರದಾಂಬೆ ದರ್ಶನ, ಶ್ರೀಗಳ ಆಶೀರ್ವಾದ ಪಡೆಯಲು ಪ್ರವಾಸಿಗರು ಆಗಮಿಸುತ್ತಾರೆ.

- ಶೃಂಗೇರಿ ವಿವಿಧೆಡೆ ಸಂಪರ್ಕ ಮುಖ್ಯ ರಸ್ತೆಗಳು । ಗ್ರಾಮೀಣ ರಸ್ತೆಗಳೂ ಹೊಂಡಗುಂಡಿಗಳಿಂದ ತುಂಬಿವೆ । ಮಳೆಗಾಲ ಕಳೆದರೂ ಡಾಂಬಾರಿಕರಣ ಭಾಗ್ಯಗಳ ಗ್ಯಾರಂಟಿಯಿಲ್ಲ

ನೆಮ್ಮಾರ್ ಅಬೂಬಕರ್.

ಕನ್ನಡಪ್ರಭ ವಾರ್ತೆ ಶೃಂಗೇರಿ

ಪ್ರಮುಖ ಪ್ರವಾಸಿ ಕೇಂದ್ರಗಳಲ್ಲಿ ಒಂದಾದ ಶೃಂಗೇರಿಗೆ ಪ್ರತಿನಿತ್ಯ ರಾಜ್ಯ ಸೇರಿದಂತೆ ದೇಶ, ವಿದೇಶಗಳಿಂದಲೂ ಶ್ರೀ ಶಂಕರರ ಪುಣ್ಯಭೂಮಿಯಲ್ಲಿ ಶಾರದಾಂಬೆ ದರ್ಶನ, ಶ್ರೀಗಳ ಆಶೀರ್ವಾದ ಪಡೆಯಲು ಪ್ರವಾಸಿಗರು ಆಗಮಿಸುತ್ತಾರೆ.

ಮಂಗಳೂರು, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಸಾಗರ, ಬೆಂಗಳೂರು, ಮೈಸೂರು, ಧರ್ಮಸ್ಥಳ, ಕೊಲ್ಲೂರು ಸೇರಿದಂತೆ ವಿವಿದೆಡೆ ಸಂಪರ್ಕ ಕಲ್ಪಿಸುವ ಕೇಂದ್ರ ಬಿಂದುವೂ ಆದ ಶೃಂಗೇರಿಯಲ್ಲಿ ಸಂಪರ್ಕ ರಸ್ತೆ ಸಂಪೂರ್ಣ ಹದಗೆಟ್ಟು, ಡಾಂಬರು ಕಾಣದೆ ಹೊಂಡಗುಂಡಿಗಳದೇ ಸಾಮ್ರಾಜ್ಯವಾಗಿದೆ.

ಈ ವರ್ಷ ಸುರಿದ ಭಾರೀ ಮಳೆಯಿಂದಾಗಿ ಬಹುತೇಕ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಮುಖ್ಯ ರಸ್ತೆಗಳಲ್ಲಿಯೇ ಜಲ್ಲಿ ಕಲ್ಲುಗಳು ಎದ್ದು ಬಂದು ಹೊಂಡಗಳಾಗಿ ಪರಿವರ್ತನೆಗೊಂಡಿದೆ. ದಿನನಿತ್ಯ ಸಂಚರಿಸುವ ಬಸ್ ಗಳಲ್ಲಿನ ಪ್ರಯಾಣಿಕರಿಗೆ ನಿತ್ಯ ಕಿರಿಕಿರಿಯಾಗುತ್ತಿವೆ. ಶೃಂಗೇರಿ ಪ್ರವಾಸಿ ಕೇಂದ್ರವಾಗಿರುವುದರಿಂದ ರಾಜ್ಯದ ವಿವಿಧೆಡೆಗಳಿಂದ ಸಾವಿರಾರು ಪ್ರವಾಸಿಗರು ಬರುತ್ತಿದ್ದು ಅದರಲ್ಲೂ ಸಾರ್ವಜನಿಕ ರಜಾ ದಿನ, ವಾರದ ಕೊನೆಯಾದ ಶನಿವಾರ, ಭಾನುವಾರಗಳಲ್ಲಿ ಹೆಚ್ಚಾಗೇ ಬರುವ ಜನ ಚಿಕ್ಕಮಗಳೂರು, ಶೃಂಗೇರಿ ಶಿವಮೊಗ್ಗ ರಸ್ತೆಗಳು ಹಾಳಾಗಿರುವುದರಿಂದ ಬೇರೆ ಬೇರೆ ಕಡೆ ಸುತ್ತಿ ಬಳಸಿ ಬರುವಂತಹ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ.

ಶೃಂಗೇರಿ ಆಗುಂಬೆ, ತೀರ್ಥಹಳ್ಳಿ ಸಂಪರ್ಕ ರಸ್ತೆ ರಾಜ್ಯ ಹೆದ್ದಾರಿಯಾಗಿದ್ದು ಶೃಂಗೇರಿಯಿಂದ ಬೇಗಾರುವರೆಗೂ ಗುಂಡಿಗಳಿಂದ ಹದಗೆಟ್ಟಿದೆ. ಅಲ್ಲಲ್ಲಿ ಹೊಂಡಗಳಿದ್ದು ಮಳೆ ಬಂದರೆ ಇವುಗಳಲ್ಲಿ ನೀರು ತುಂಬಿತ್ತದೆ. ಇದರಿಂದ ಸಾಕಷ್ಟು ರಸ್ತೆ ಅಪಘಾತ ಗಳಿಗೂ ಕಾರಣವಾಗುತ್ತಿವೆ. ಕೆಲ ದಿನಗಳ ಹಿಂದೆ ಬೇಗಾರು ಬಳಿ ಲಾರಿಯೊಂದು ಗುಂಡಿ ತಪ್ಪಿಸಲು ಹೋಗಿ ಕಂದಕಕ್ಕೆ ಉರುಳಿ ಬಿದ್ದಿತ್ತು ಎಂಬುದನ್ನು ಮರೆಯುವಂತಿಲ್ಲ.

ಶೃಂಗೇರಿ ಬೆಳ್ಳಂದೂರು 100 ಬೆಡ್ ಆಸ್ಪತ್ರೆ ಸಂಪರ್ಕ ರಸ್ತೆ ಗಿಣಿಗಿಣಿ ಬಳಿ ಸಂಪೂರ್ಣ ಹಾಳಾಗಿದೆ. ಆಂಗುಂಬೆ, ಉಡುಪಿ, ಮಣಿಪಾಲ್, ತೀರ್ಥಹಳ್ಳಿ ಇನ್ನಿತರೆ ಕಡೆಗಳಿಗೆ ಪ್ರಯಾಣಿಸಲು ಇದೇ ಮುಖ್ಯ ರಸ್ತೆಯಾಗಿರುವುದರಿಂದ ಈ ಮಾರ್ಗದಲ್ಲಿ ಪ್ರಯಾಣಿಸಲು ಹರಸಾಹಸವನ್ನೇ ಪಡಬೇಕಿದೆ. ಅದರಲ್ಲೂ ತುರ್ತು ಚಿಕಿತ್ಸೆಗೆ ಆಸ್ಪತ್ರೆಗೆ ಪ್ರಯಾಣಿಸುವ ರೋಗಿಗಳ ಪರಿಸ್ಥಿತಿ ದೇವರೆ ಬಲ್ಲ. ಇನ್ನು ಬೆಳ್ಳಂದೂರಿನಲ್ಲಿ 100 ಬೆಡ್ ಆಸ್ಪತ್ರೆ ನಿರ್ಮಾಣವಾಗುತ್ತಿದ್ದು ಅಲ್ಲಿಗೂ ಇದೇ ಮುಖ್ಯ ರಸ್ತೆ. ರಸ್ತೆ ಡಾಂಬರೀಕರಣ ಗೊಳ್ಳದೇ ವರ್ಷಗಳೇ ಕಳೆದಿವೆ.

ಶೃಂಗೇರಿ ಚಿಕ್ಕಮಗಳೂರು ಸಂಪರ್ಕ ಕಲ್ಪಿಸುವ ಜಯಪುರ, ಬಾಳೆಹೊನ್ನೂರು ರಸ್ತೆ ಮೆಣಸೆ ಬಳಿ ಸಂಪೂರ್ಣವಾಗಿ ಟಾರ್‌ಕಿತ್ತು ಬಂದು ಗುಂಡಿಗಳೇ ರಸ್ತೆಯಲ್ಲೆಲ್ಲಾ ಇದೆ. ಸೇತುವೆ ಮೇಲೂ ಹೊಂಡಗಳಿದ್ದು ಮಳೆ ಬಂದರೆ ಇಲ್ಲಿ ಸಂಚರಿಸುವವರು ಎಷ್ಟು ಎಚ್ಚರಿಕೆ ವಹಿಸಿದರು ಸಾಲದಾಗುತ್ತದೆ. ಈ ಹೊಂಡಗಳಿಗೆ ಮಣ್ಣು, ಎಂ ಸ್ಯಾಂಡ್ ಗಳನ್ನು ತುಂಬಿದ್ದರೂ ಮಳೆ ರಭಸಕ್ಕೆ ಎಲ್ಲವೂ ಕೊಚ್ಚಿ ಹೋಗಿ ನಿತ್ಯ ಹೊಂಡಗುಂಡಿಗಳ ನರಕ ದರ್ಶನವಾಗುತ್ತಿದೆ.

ಶೃಂಗೇರಿ ಪಟ್ಟಣದ ಮುಖ್ಯ ರಸ್ತೆ, ಬೈಪಾಸ್ ರಸ್ತೆ, ಶೃಂಗೇರಿ ಮೆಣಸೆ ರಸ್ತೆ ಹೀಗೆ ಮುಖ್ಯ ರಸ್ತೆಗಳೂ ಗುಂಡಿಮಯವಾಗಿವೆ. ಇನ್ನು ಗ್ರಾಮೀಣ ಪ್ರದೇಶಗಳಲ್ಲಿನ ರಸ್ತೆಗಳು ಮಳೆಯಿಂದ ಕೊಚ್ಚಿಹೋಗಿ ಮಣ್ಣಿನ ರಸ್ತೆಗಳಂತಾಗಿವೆ. ಪಟ್ಟಣದ ರಸ್ತೆಗಳು, ರಾಜ್ಯ ಹೆದ್ದಾರಿ, ಪಂಚಾಯಿತಿ ರಸ್ತೆಗಳು ಎಲ್ಲದರಲ್ಲೂ ಒಂದಕ್ಕೊಂದು ಪೈಪೋಟಿಗೆ ಬಿದ್ದಂತೆ ಗುಂಡಿಗಳೇ ರಾರಾಜಿಸುತ್ತಿವೆ. ಮಳೆಗಾಲಕ್ಕೆ ಮೊದಲು ಬಹುತೇಕ ಕಡೆಗಳಲ್ಲಿ ಡಾಂಬರೀಕರಣವಾಗಿರಲಿಲ್ಲ. ಆದರೆ ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದ್ದರಿಂದ ಬಹುತೇಕ ತಾಲೂಕಿನೆಲ್ಲೆಡೆ ರಸ್ತೆಗಳು ಕಿತ್ತು ಹಾಳಾಗಿವೆ.

ಮಳೆಗಾಲ ಕಳೆದು ಬಿಸಿಲು ಆರಂಭಗೊಂಡಿದ್ದರೂ ರಸ್ತೆಗಳಿಗೆ ಡಾಂಬರು ಹಾಕಲು ಇಲಾಖೆಯಾಗಲೀ, ಸರ್ಕಾರವಾಗಲೀ ಮುಂದಾಗುತ್ತಿಲ್ಲ. ಪದೇ ಪದೇ ಅಪಘಾತಗಳು ಸಂಭವಿಸುತ್ತಾ ಜೀವಗಳು ಬಲಿಯಾಗುತ್ತಿವೆ. ಕೆಲವೆಡೆ ಹೊಂಡಗಳಿಂದ ತುಂಬಿದ್ದು ರಸ್ತೆಯೇ ಕಾಣುತ್ತಿಲ್ಲ. ಆದರೂ ಸಂಬಂಧಿತರು ಮಾತ್ರ ಇತ್ತ ಚಿತ್ತ ಹರಿಸಿಲ್ಲ.

ಶಿವಮೊಗ್ಗ ಮಂಗಳೂರು ರಾಷ್ಟ್ರೀಯ ಹೆದ್ದಾರಿ 169 ರ ಶೃಂಗೇರಿ ಮಂಗಳೂರು ಸಂಪರ್ಕ ನೆಮ್ಮಾರು ತನಿಕೋಡುವಿನಿಂದ ಕೆರಕಟ್ಟೆ ಎಸ್ ಕೆ ಬಾರ್ಡರ್ ವರೆಗಿನ ರಸ್ತೆ ತೀರ ಕಿರಿದಾಗಿದ್ದು, ಅಪಾಯಕಾರಿ ತಿರುವುಗಳಿಂದ ಕೂಡಿದೆ. ಈ ಭಾಗದಲ್ಲಿ ರಸ್ತೆ ಅಭಿವೃದ್ಧಿ ಮರಿಚೀಕೆಯಾಗಿ ಉಳಿದಿದೆ. ಮಳೆಗಾಲ ಕಳೆದರೂ ಸರ್ಕಾರ ಡಾಂಬಾರೀಕರಣಕ್ಕೆ ಮುಂದಾಗದಿರುವುದು ಜನರಲ್ಲಿ ಆಶ್ಚರ್ಯ ಮೂಡಿಸಿದೆ. ಇನ್ನಾದರೂ ಸರ್ಕಾರ ಹೊಂಡಗುಂಡಿಗಳನ್ನು ಶಾಶ್ವತವಾಗಿ ಮುಚ್ಚಿಸಿ ರಸ್ತೆಗಳಿಗೆ ಡಾಂಬರು ಹಾಕಿಸಿದರೆ ಇಲ್ಲಿಗೆ ಬಂದು ಹೋಗುವ ವಾಹನ ಸವಾರರ ಸಂಕಷ್ಟ ತಪ್ಪುತ್ತದೆ.

--

ಗಂಭೀರವಾಗಿ ಪರಿಗಣಿಸಬೇಕಿದೆ ಸರ್ಕಾರ

ಈ ವರ್ಷ ಭಾರೀ ಮಳೆಯಿಂದ ರಸ್ತೆಗಳು ಸಂಪೂರ್ಣ ಹಾಳಾಗಿದೆ. ಹೊಂಡಗುಂಡಿಗಳಿಂದ ಕೂಡಿದ ಹದಗೆಟ್ಟ ರಸ್ತೆಯಲ್ಲಿ ಓಡಾಡಬೇಕಾಗಿರುವುದು ದುರಾದೃಷ್ಟಕರ. ಮಳೆ ಗಾಲ ಮುಗಿದರೂ ಸರ್ಕಾರ ರಸ್ತೆ ದುರಸ್ತಿಗೆ ಮುಂದಾಗದಿರುವುದು ನಿರ್ಲಕ್ಷವೇ ಸರಿ. ಇನ್ನಾದರೂ ಸರ್ಕಾರ ಗಂಬೀರವಾಗಿ ಪರಿಗಣಿಸಬೇಕು.

-ಸುಬ್ರಮಣ್ಯ ಶಿರೂರು ಗ್ರಾಮಸ್ಥ

--

ಡಾಂಬರೀಕರಣ ಭಾಗ್ಯದ ಗ್ಯಾರಂಟಿ ನೀಡಿ

ರಸ್ತೆಗಳು ಸಂಪರ್ಕ ಸಾಧನಗಳ ಕೇಂದ್ರ ಬಿಂದು. ಸರ್ಕಾರ ರಸ್ತೆ ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡದಿರುವುದು ಸರ್ಕಾರದ ವೈಫಲ್ಯತೆ ಎದ್ದು ಕಾಣುತ್ತದೆ. ರಾಜ್ಯದಲ್ಲಿ ಲೋಕೋಪಯೋಗಿ ಇಲಾಖೆ ಇದ್ದು ಇಲ್ಲದಂತಾಗಿದೆ. ಸರ್ಕಾರ ಇನ್ನಾದರೂ ಡಾಂಬರು ಹಾಕಿಸಬೇಕಿದೆ.

ರಾಜೇಶ್

ಮೇಘಳ ಬೈಲು-ಗ್ರಾಮಸ್ಥ.

--

9 ಶ್ರೀ ಚಿತ್ರ 1-

ಶೃಂಗೇರಿ ಆಗುಂಬೆ ಉಡುಪಿ ಮಣಿಪಾಲ್ ಸಂಪರ್ಕ ರಾಜ್ಯ ಹೆದ್ಜಾರಿ ಹೊಂಡಗುಂಡಿಗಳಿಂದ ಸಂಪೂರ್ಣ ಹದಗೆಟ್ಟಿರುವುದು.

9 ಶ್ರೀ ಚಿತ್ರ 2-

ಶೃಂಗೇರಿ ಚಿಕ್ಕಮಗಳೂರು ಸಂಪರ್ಕ ರಾಜ್ಯ ಹೆದ್ದಾರಿ ಮೆಣಸೆ ಬಳಿ ಹೊಂಡಗುಂಡಿಗಳಿಂದ ಕೂಡಿ ಸಂಪೂರ್ಣ ಹದಗೆಟ್ಟಿರುವುದು.9 ಶ್ರೀ ಚಿತ್ರ 3-ಸುಬ್ರಮಣ್ಯ ಶಿರೂರು.

9 ಶ್ರೀ ಚಿತ್ರ 4-ರಾಜೇಶ್ ಮೇಘಳ ಬೈಲು.

PREV

Recommended Stories

ಕುಸಿದ ಮೆಕ್ಕೆಜೋಳ ಬೆಲೆ, ಆರಂಭವಾಗದ ಖರೀದಿ ಕೇಂದ್ರ
2028ಕ್ಕೆ ಪುನಃ ನಮ್ಮದೇ ಸರ್ಕಾರ: ಡಿಸಿಎಂ ಡಿ.ಕೆ. ಶಿವಕುಮಾರ್