ಸೋಮರಡ್ಡಿ ಅಳವಂಡಿ
ಕೊಪ್ಪಳ: ಆಂಜನೇಯನ ಪರಮಭಕ್ತ ಗುರುತಿಸಿದ ಶಿಲಾಬಂಡೆಯೇ ಈಗ ಅಯೋಧ್ಯೆಯ ರಾಮಮಂದಿರದಲ್ಲಿ ಶ್ರೀರಾಮಚಂದ್ರ (ಬಾಲ ರಾಮ) ಮೂರ್ತಿಯಾಗುವ ಸಾಧ್ಯತೆಯಿದೆ. ಶ್ರೀರಾಮನ ಮೂರ್ತಿ ತಯಾರಿಕೆಗೆ ಬಳಸಿದ ಶಿಲಾಬಂಡೆಯ ಉಳಿದ ಭಾಗದಲ್ಲಿ ಕೊಪ್ಪಳದಲ್ಲಿ ಆಂಜನೇಯನ ಮೂರ್ತಿಯೂ ಸಿದ್ಧವಾಗಲಿದೆ!ಇಲ್ಲಿನ ಪ್ರಕಾಶ ಶಿಲ್ಪಿ ಎಂಬವರೇ ಈ ಕಾರ್ಯಕ್ಕೆ ಮುಂದಾದ ಹನುಮ ಭಕ್ತ. ಇವರು ದಿನಕ್ಕೊಂದು ಆಂಜನೇಯನ ಮೂರ್ತಿ ಕೆತ್ತಿಯೇ ಜೀವನ ಆರಂಭಿಸಿದವರು. ಇದುವರೆಗೂ ಸುಮಾರು 6141 ಮೂರ್ತಿಗಳನ್ನು ಕೆತ್ತಿದ್ದಾರೆ. ಶ್ರೀರಾಮನ ಮೂರ್ತಿಯನ್ನೂ ಕೆತ್ತಿದ್ದಾರೆ. ಈಗ ಬಾಲ ರಾಮನ ಮೂರ್ತಿ ಕೆತ್ತಿದ ಶಿಲಾ ಬಂಡೆಯ ಉಳಿದ ಭಾಗದಲ್ಲಿಯೇ ಆಂಜನೇಯನ ಮೂರ್ತಿ ಕೆತ್ತಲಿದ್ದಾರೆ. ಇದಕ್ಕಾಗಿ ಮೈಸೂರಿನಿಂದ ಶಿಲೆ ಕೊಪ್ಪಳಕ್ಕೆ ಬರುತ್ತಿದೆ.ಏನಿದು ಕಾಕತಾಳೀಯ?: ಪ್ರಕಾಶ ಶಿಲ್ಪಿ ಅವರು ಮೂರ್ತಿ ಕೆತ್ತನೆಗೆ ಶಿಲೆ ಹುಡುಕುತ್ತ ಮೈಸೂರಿಗೆ ಕೆಲ ತಿಂಗಳ ಹಿಂದೆ ತೆರಳಿದ್ದರು. ಆಗ ಅವರಿಗೆ ಶಿಲಾಬಂಡೆಗಳ ಮಾರಾಟ ಮಾಡುವ ಶ್ರೀನಿವಾಸ್ ಪರಿಚಯವಾಗುತ್ತದೆ. ಅವರ ಜೊತೆ ಮೈಸೂರು ಸಮೀಪದ ಆರೋಹಳ್ಳಿ ಬಳಿ ಶಿಲೆಯೊಂದನ್ನು ಗುರುತಿಸುತ್ತಾರೆ. ಆದರೆ ಅವರು ತಯಾರು ಮಾಡಲು ಉದ್ದೇಶಿಸಿದ್ದ ವಿಜಯದಾಸರ ಮೂರ್ತಿಗೆ ಆ ಶಿಲೆ ಅಳತೆಯಲ್ಲಿ ಹೊಂದಿಕೆಯಾಗುವುದಿಲ್ಲ. ಬಳಿಕ ಅಲ್ಲಿಯೇ ದಿನದ ರೂಢಿಯಂತೆ 5741ನೇ ಆಂಜನೇಯನ ಮೂರ್ತಿ ಕೆತ್ತಿ, ಪೂಜಿಸಿ ಕೊಪ್ಪಳಕ್ಕೆ ವಾಪಸಾಗುತ್ತಾರೆ.
ಆದರೆ ಇದೀಗ ಮೈಸೂರಿನ ಅರುಣ್ ಯೋಗಿರಾಜ್ ಅವರು ಅಯೋಧ್ಯೆಯ ಮಂದಿರಕ್ಕಾಗಿ ರೂಪಿಸಿದ ಬಾಲ ರಾಮನ ಮೂರ್ತಿಯನ್ನು ಇದೇ ಪ್ರದೇಶದ (ಕೊಪ್ಪಳದ ಪ್ರಕಾಶ ಶಿಲ್ಪಿ ಗುರುತಿಸಿ ಆಂಜನೇಯನ ಮೂರ್ತಿ ಕೆತ್ತಿದ್ದ) ಶಿಲಾಬಂಡೆಯಿಂದಲೇ ಕೆತ್ತಲಾಗಿದೆ ಎನ್ನಲಾಗಿದೆ. ಅದೇ ಮೂರ್ತಿ ಆಯ್ಕೆಯಾಗಿದೆ ಎನ್ನಲಾಗಿದ್ದು, ಜ.22 ರಂದು ಅಯೋಧ್ಯೆಯ ಮಂದಿರದ ಗರ್ಭಗುಡಿಯಲ್ಲಿ ಅದು ಪ್ರತಿಷ್ಠಾಪನೆಗೊಳ್ಳಲಿದೆ.ಈ ವಿಚಾರ ತಿಳಿದ ಪ್ರಕಾಶ ಶಿಲ್ಪಿ ಶಿಲಾಬಂಡೆ ಮಾರುವ ಶ್ರೀನಿವಾಸ್ ಅವರನ್ನು ಸಂಪರ್ಕಿಸುತ್ತಾರೆ. ಅವರೂ ಸಹ ಇದನ್ನು ಖಚಿತಪಡಿಸುತ್ತಾರೆ. ನೀವು ಗುರುತಿಸಿದ ಬಂಡೆಯಿಂದಲೇ ಶ್ರೀರಾಮನ ವಿಗ್ರಹ ತಯಾರಾಗಿದೆ ಎನ್ನುತ್ತಾರೆ. ಪ್ರಕಾಶ ಶಿಲ್ಪಿ ಶ್ರೀರಾಮನ ಮೂರ್ತಿಗಾಗಿ ಒಯ್ದ ಶಿಲೆಯ ಬಂಡೆಯಲ್ಲಿದ್ದ ಉಳಿದ ಶಿಲೆಯನ್ನು ಕಾಯ್ದಿರಿಸಿದ್ದಾರೆ. ಅದರಲ್ಲಿ ಆಂಜನೇಯನ ಮೂರ್ತಿ ತಯಾರು ಮಾಡಲು ಪ್ರಕಾಶ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಬಂಡೆಯನ್ನು ಕೊಪ್ಪಳಕ್ಕೆ ತರಿಸುತ್ತಿದ್ದಾರೆ. ಈ ಹನುಮನ ಮೂರ್ತಿ ಕೊಪ್ಪಳದ ಸಹಸ್ರಾಂಜನೇಯ ದೇವಾಲಯದಲ್ಲಿ ಪ್ರತಿಷ್ಠಾಪನೆಗೊಳ್ಳಲಿದೆ.6141 ಆಂಜನೇಯ ಮೂರ್ತಿಗಳು: ಆಂಜನೇಯನ ಭಕ್ತ ಕೊಪ್ಪಳದ ನಿವಾಸಿ ಪ್ರಕಾಶ ಶಿಲ್ಪಿ ಪ್ರತಿ ದಿನ ಆಂಜನೇಯನ ಮೂರ್ತಿ ಕೆತ್ತುತ್ತಾರೆ. ಒಂದು ಇಂಚಿನಿಂದ ಹಿಡಿದು 21 ಇಂಚಿನ ಆಂಜನೇಯನ ಮೂರ್ತಿಗಳನ್ನು ಕೆತ್ತಿದ್ದಾರೆ. 2007ರ ಜನೇವರಿ 26ರಿಂದ ಪ್ರಾರಂಭಿಸಿ, ನಿತ್ಯವೂ ಮೂರ್ತಿ ತಯಾರು ಮಾಡುತ್ತಾರೆ. ಇದುವರೆಗೂ (ಜ.10ವರೆಗೆ) 6141 ಮೂರ್ತಿಗಳನ್ನು ಕೆತ್ತಿದ್ದಾರೆ ಮತ್ತು ಕೆತ್ತುತ್ತಲೇ ಇದ್ದಾರೆ.ಅಲ್ಲದೆ, ಕಲ್ಲಿನ ಕೊಳಲು, ಕಲ್ಲಿನ ಘಂಟೆ ಸೇರಿದಂತೆ ಹತ್ತು ಹಲವು ಬೆರಗಾಗುವ ಮೂರ್ತಿಗಳನ್ನು ಕೆತ್ತಿದ್ದಾರೆ.ಶ್ರೀರಾಮನ ಮೂರ್ತಿಗಾಗಿ ಬಳಸಿದ ಶಿಲಾಬಂಡೆಯನ್ನು ಮೊಟ್ಟ ಮೊದಲು ಗುರುತಿಸಿದ್ದೇ ಕೊಪ್ಪಳದ ಪ್ರಕಾಶ ಶಿಲ್ಪಿ ಅವರು, ಅದಾದ ನಂತರ ಆ ಶಿಲಾಬಂಡೆಯ ಉಳಿದ ಭಾಗವನ್ನು ಕಾಯ್ದಿರಿಸಿದ್ದು, ಆಂಜನೇಯನ ಮೂರ್ತಿ ಕೆತ್ತಲು ತೆಗೆದುಕೊಂಡು ಹೋಗಲಿದ್ದಾರೆ ಎಂದು ಮೈಸೂರಿನ ಶಿಲಾಬಂಡೆ ಮಾರಾಟಗಾರ ಶ್ರೀನಿವಾಸ ಹೇಳುತ್ತಾರೆ.ಇದು ದೇವರ ಮಹಿಮೆಯೋ ಅಥವಾ ಕಾಕತಾಳೀಯವೋ ಗೊತ್ತಿಲ್ಲ. ಆದರೆ, ಮೊದಲು ಗುರುತಿಸಿದ ಶಿಲಾಬಂಡೆಯೇ ಈಗ ಶ್ರೀರಾಮನ ಮೂರ್ತಿಯಾಗಿರುವುದು ನನಗೆ ಅತೀವ ಸಂತೋಷವನ್ನುಂಟು ಮಾಡಿದೆ. ಅದರ ಉಳಿದ ಭಾಗದಲ್ಲಿಯೇ ಆಂಜನೇಯನ ಮೂರ್ತಿ ತಯಾರು ಮಾಡುವುದಕ್ಕಾಗಿ ಬಂಡೆಯನ್ನು ಮೈಸೂರಿನಿಂದ ತರಿಸುತ್ತಿದ್ದೇನೆ. ಇದು ನನ್ನ ಪೂರ್ವ ಜನ್ಮದ ಪುಣ್ಯ. ಆ ಆಂಜನೇಯ ಕರುಣಿಸಿದ ವರ ಎಂದೇ ಭಾವಿಸಿದ್ದೇನೆ ಎಂದು ಮೂರ್ತಿ ತಯಾರಕ ಪ್ರಕಾಶ ಶಿಲ್ಪಿ ಹೇಳುತ್ತಾರೆ.