ಸೊಳ್ಳೆಗಳ ನಿಯಂತ್ರಣ ಮಾಡುವಲ್ಲಿ ಪೌರಕಾರ್ಮಿಕರ ಪಾತ್ರ ಮಹತ್ವದ್ದು-ರೇಣುಕಾ

KannadaprabhaNewsNetwork | Published : May 18, 2025 1:00 AM
Follow Us

ಸಾರಾಂಶ

ಪ್ರಸಕ್ತ ವರ್ಷದ ಮಳೆಗಾಲ ಪ್ರಾರಂಭವಾಯಿತು. ಹಾಗಾಗಿ ನಾವು ಸೊಳ್ಳೆಗಳನ್ನು ನಿಯಂತ್ರಣ ಮಾಡಲು ಪ್ರತಿಯೊಬ್ಬರೂ ಕೈಜೋಡಿಸಬೇಕೆಂದು ಡಾ. ರೇಣುಕಾ ಕೊರವನವರ ಹೇಳಿದರು.

ನರಗುಂದ: ಪ್ರಸಕ್ತ ವರ್ಷದ ಮಳೆಗಾಲ ಪ್ರಾರಂಭವಾಯಿತು. ಹಾಗಾಗಿ ನಾವು ಸೊಳ್ಳೆಗಳನ್ನು ನಿಯಂತ್ರಣ ಮಾಡಲು ಪ್ರತಿಯೊಬ್ಬರೂ ಕೈಜೋಡಿಸಬೇಕೆಂದು ಡಾ. ರೇಣುಕಾ ಕೊರವನವರ ಹೇಳಿದರು.

ಅವರು ಶನಿವಾರ ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯದಲ್ಲಿ ತಾಲೂಕು ಮಟ್ಟದ ರಾಷ್ಟ್ರೀಯ ಡೆಂಘೀ ದಿನಾಚರಣೆ ಅಂಗವಾಗಿ ಪೌರ ಕಾರ್ಮಿಕರಿಗೆ ಕೀಟಜನ್ಯ ರೋಗಗಳ ಕುರಿತು ಕಾರ್ಯಾಗಾರದಲ್ಲಿ ಮಾತನಾಡಿದರು.

ಪ್ರತಿ ವರ್ಷ ಮಳೆಗಾಲದ ಆರಂಭದಲ್ಲಿ ಸಾರ್ವಜನಿಕರಿಗೆ ತಿಳಿವಳಿಕೆ ನೀಡಲು ಡೆಂಘೀ ದಿನಾಚರಣೆ ಆಚರಿಸಲಾಗುತ್ತದೆ. ನಿಂತ ನೀರು ಸೊಳ್ಳೆಗಳ ತವರೂರು, ಕೀಟ ಚಿಕ್ಕದು ಕಾಟ ದೊಡ್ಡದು, ಡೆಂಘೀ ತರಬಹುದು ಸಾವು, ಚಿಕೂನ್ ಗುನ್ಯಾ ತರಬಹುದು ನೋವು, ಸೊಳ್ಳೆಗಳ ನಿಯಂತ್ರಿಸಿದರೆ ನಾವೂ ತಡೆಗಟ್ಟಬಹುದು ಸಾವೂ ನೋವು ಆಗುತ್ತವೆ. ಆದ್ದರಿಂದ ಕೀಟಜನ್ಯ ರೋಗಗಳಾದ ಮಲೇರಿಯಾ, ಡೆಂಘೀ, ಚಿಕೂನ್‌ಗುನ್ಯಾ, ಮೆದುಳು ಜ್ವರ ಮತ್ತು ಆನೆಕಾಲು ರೋಗಗಳು ಸೋಂಕಿತ ಹೆಣ್ಣು ಸೊಳ್ಳೆ ಕಚ್ಚುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ಹರಡುವ ಕಾಯಿಲೆಗಳಾಗಿವೆ. ಸೊಳ್ಳೆಗಳ ನಿಯಂತ್ರಣ ಮಾಡಿದಲ್ಲಿ ಈ ಐದು ರೋಗಗಳನ್ನು ನಿಯಂತ್ರಣ ಮಾಡಬಹುದು. ಸೊಳ್ಳೆಗಳ ನಿಯಂತ್ರಣ ಮಾಡುವಲ್ಲಿ ಪೌರಕಾರ್ಮಿಕರ ಪಾತ್ರ ಮಹತ್ವದ್ದಾಗಿದೆ. ಮನೆಗಳಲ್ಲಿ ಇರುವ ಎಲ್ಲಾ ನೀರಿನ ಪರಿಕರಗಳನ್ನು ನಾಲ್ಕೈದು ದಿನಗಳಿಗೊಮ್ಮೆ ಚೆನ್ನಾಗಿ ತಿಕ್ಕಿ ತೊಳೆದು, ಒಣಗಿಸಿ ಹೊಸ ನೀರನ್ನು ತುಂಬಿಸಿ ಭದ್ರವಾಗಿ ಮುಚ್ಚಿಡಬೇಕು. ಮನೆಯ ಸುತ್ತ-ಮುತ್ತ ಮತ್ತು ಚರಂಡಿಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಮನೆಯ ಸುತ್ತ-ಮುತ್ತ ಘನತ್ಯಾಜ್ಯ ವಸ್ತುಗಳು, ಟೈರ್‌ಗಳಲ್ಲಿ ಮಳೆಗಾಲದಲ್ಲಿ ನೀರು ನಿಂತು ಸೊಳ್ಳೆಗಳ ಉತ್ಪತ್ತಿ ಆಗುತ್ತದೆ, ಏಕೆಂದರೆ ಸೊಳ್ಳೆಗಳು ನಿಂತು ತಂಪಾದ ನೀರಿನಲ್ಲಿ ಹೆಣ್ಣು ಸೊಳ್ಳೆ ಮೊಟ್ಟೆಗಳನ್ನಿಟ್ಟು ಐದಾರು ದಿನಗಳಲ್ಲಿ ಸೊಳ್ಳೆಗಳಾಗಿ ಮಾರ್ಪಡುತ್ತವೆ. ಆದ್ದರಿಂದ ಸೊಳ್ಳೆಗಳಿಗೆ ನಿಂತ ನೀರು ಸಿಗದಂತೆ ನೋಡಿಕೊಳ್ಳಬೇಕು. ಜೊತೆಗೆ ಸಾರ್ವಜನಿಕರು ಸೊಳ್ಳೆ ಕಚ್ಚದಂತೆ ಮೈತುಂಬಾ ಬಟ್ಟೆ ಧರಿಸುವುದು, ಮಾರ್ಕೆಟ್ ಗಳಲ್ಲಿ ಸಿಗುವ ಸೊಳ್ಳೆ ನಿರೋಧಕಗಳಾದ ಲಿಕ್ವಿಡ್, ಸೊಳ್ಳೆಬತ್ತಿ, ಸೊಳ್ಳೆ ಬ್ಯಾಟ್, ಸೊಳ್ಳೆಪರದೆಗಳನ್ನು ಉಪಯೋಗಿಸಬೇಕು. ಇಲಾಖೆಯಿಂದ ಕೆರೆ, ಕಟ್ಟೆ ಮುಂತಾದ ನಿಂತ ನೀರಿನ ತಾಣಗಳಿಗೆ ಲಾರ್ವಾಹಾರಿ ಮೀನುಗಳನ್ನು ಬಿಡಲಾಗುತ್ತದೆ. ಡೆಂಘೀ ರೋಗ ಪತ್ತೆ ಹಚ್ಚಲು ಯಾವುದೇ ಜ್ವರವಿದ್ದಲ್ಲಿ ಕಡ್ಡಾಯವಾಗಿ ರಕ್ತ ಪರೀಕ್ಷೆಯನ್ನು ಸರಕಾರಿ ಆಸ್ಪತ್ರೆ ಮತ್ತು ಕ್ಷೇತ್ರಗಳಲ್ಲಿ ಆಶಾ ಮತ್ತು ಕ್ಷೇತ್ರ ಸಿಬ್ಬಂದಿಗಳಿಂದ ರಕ್ತ ಸಂಗ್ರಹಿಸಿ ಪರೀಕ್ಷಿಸಿ ಮಲೇರಿಯಾ ಕಂಡು ಬಂದಲ್ಲಿ ಉಚಿತವಾಗಿ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ ಎಂದು ಹೇಳಿದರು. ಆರೋಗ್ಯ ಶಿಕ್ಷಣಾಧಿಕಾರಿ ಜಿ.ವಿ. ಕೊಣ್ಣೂರ ಮಾತನಾಡಿ, ಸೊಳ್ಳೆಗಳ ಕಡಿತದಿಂದ ತಪ್ಪಿಸಿಕೊಳ್ಳಲು ಸ್ವಯಂ ನಿಯಂತ್ರಣಾ ಕ್ರಮಗಳಾದ ಸಾಯಂಕಾಲ ಮನೆಗಳಲ್ಲಿ ಬೇವಿನಸೊಪ್ಪಿನ ಹೊಗೆ ಹಾಕುವುದು ಕಿಡಕಿ ಬಾಗಿಲು ಗಳಿಗೆ ಜಾಳಿಗೆ ಅಳವಡಿಸುವುದು ಮೈ ತುಂಬಾ ಬಟ್ಟೆ ಸರಿಸುವುದು ಸೊಳ್ಳೆ ಪರದೇ ಸೊಳ್ಳೆ ಬತ್ತಿ ಬ್ಯಾಟ, ದ್ರಾವಣಗಳನ್ನು ಉಪಯೋಗಿಸುವುದರ ಬಗ್ಗೆ ತಿಳಿಸಿದರು. ಪುರಸಭೆ ಸಿಬ್ಬಂದಿ ವಿ.ಬಿ. ಹಡಗಲಿ ಮಾತನಾಡಿ, ಕೀಟ ಜನ್ಯ ರೋಗಗಳ ನಿಯಂತ್ರಣದಲ್ಲಿ ಪುರಸಭೆಯ ಅಧಿಕಾರಿ/ಸಿಬ್ಬಂಧಿಗಳು ಮತ್ತು ಪೌರ ಕಾರ್ಮಿಕರ ಸಹಭಾಗಿತ್ವ ಅವಶ್ಯವಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೀಟಜನ್ಯ ರೋಗಗಳ ಕುರಿತು ವಸ್ತು ಪ್ರದರ್ಶನ ಏರ್ಪಡಿಸಿ ಎಲ್ಲರಿಗೂ ಕರಪತ್ರಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಎಸ್.ಎಚ್. ಕಲೂತಿ, ಎಂ.ಪಿ. ಶಿಗ್ಗಾಂಕರ, ಬಸವರಾಜ ಕೌಜಗೇರಿ,ಎಂ.ಎಂ. ಮಸೂತಿಮನಿ, ಎ.ಎಂ. ಕಾಡದೇವರಮಠ, ರೇಖಾ ಹಿರೆಹೋಳಿ, ಬಿ.ಕೆ. ಪಾಟೀಲ, ಜಮುನಾ ಪಾಟೀಲ, ಶ್ರೀಕಾಂತ ನರಗುಂದ, ಸಿ.ಎಫ್. ಕುಂಬಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.