ಡೆಂಘೀ ತಡೆಗೆ ಸಮುದಾಯದ ಪಾತ್ರ ಅನನ್ಯ

KannadaprabhaNewsNetwork | Published : May 17, 2024 12:31 AM
ರಾಷ್ಟ್ರೀಯ ಡೆಂಘೆದಿನ ಅಂಗವಾಗಿ ಬಳ್ಳಾರಿಯಲ್ಲಿ ಜಿಲ್ಲಾ ಆರೋಗ್ಯ ಇಲಾಖೆಯಿಂದ ಹಮ್ಮಿಕೊಂಡಿದ್ದ ಜಾಗೃತಿ ಬೈಕ್‍ರ್ಯಾಲಿಗೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ ಚಾಲನೆ ನೀಡಿ ಮಾತನಾಡಿದರು.  | Kannada Prabha

ಯಾವುದೇ ಜ್ವರವಿದ್ದರೂ ನಿರ್ಲಕ್ಷ್ಯ ಮಾಡದೇ ತಕ್ಷಣ ವೈದ್ಯರ ಬಳಿ ಭೇಟಿ ನೀಡಿ, ಸೂಕ್ತ ಚಿಕಿತ್ಸೆ ಪಡೆಯುವುದರಿಂದ ಡೆಂಗೀ ಜ್ವರದಿಂದ ಉಂಟಾಗುವ ಸಾವು-ನೋವು ತಡೆಗಟ್ಟಬಹುದು.

ಬಳ್ಳಾರಿ: ಡೆಂಘೀ ಜ್ವರ ತಡೆಗಟ್ಟುವಿಕೆಯಲ್ಲಿ ಮುಂಜಾಗ್ರತಾ ಕ್ರಮಗಳ ಅನುಷ್ಠಾನಕ್ಕೆ ಸಮುದಾಯದ ಪಾತ್ರ ಪ್ರಮುಖವಾದದ್ದು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ ಹೇಳಿದರು.

ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಚೇರಿಯಿಂದ ರಾಷ್ಟ್ರೀಯ ಡೆಂಘೀ ದಿನಾಚರಣೆ ಅಂಗವಾಗಿ ಸಮುದಾಯದೊಂದಿಗೆ ಸೇರಿ ಡೆಂಘೀ ಜ್ವರ ನಿಯಂತ್ರಿಸೋಣ ಎಂಬ ಘೋಷವಾಕ್ಯದೊಂದಿಗೆ ಸಮುದಾಯದಲ್ಲಿ ಡೆಂಘೀ ಜ್ವರದ ಬಗ್ಗೆ ಅರಿವು ಮೂಡಿಸಲು ಗುರುವಾರ ನಗರದ ಜಿಲ್ಲಾಸ್ಪತ್ರೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಆವರಣದಿಂದ ಹಮ್ಮಿಕೊಂಡಿದ್ದ ಬೈಕ್‍ ರ‍್ಯಾಲಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಮಳೆಗಾಲ ಹಾಗೂ ನಂತರದ ದಿನಗಳಲ್ಲಿ ಡೆಂಘೀ ಜ್ವರ ನಿಯಂತ್ರಣ ಕ್ರಮಗಳನ್ನು ಸಮುದಾಯದ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಾರ್ವಜನಿಕರೊಂದಿಗೆ ನಿಕಟ ಸಂಪರ್ಕವಿರುವ ಸರ್ಕಾರ-ಸರ್ಕಾರೇತರ ಸಂಘ ಸಂಸ್ಥೆಗಳು, ಸ್ವಯಂ ಸೇವಾ ಸಂಘಗಳ ಸಹಭಾಗಿತ್ವ ಅನಿವಾರ್ಯವಾಗಿದೆ. ಇದರಿಂದ ಡೆಂಘೀ ಪ್ರಸರಣ ನಿಯಂತ್ರಣ ಮಾಡಬಹುದು ಎಂದರು.

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಅಬ್ದುಲ್ಲಾ ಮಾತನಾಡಿ, ಮುಂಬರುವ ಮುಂಗಾರು ಸಮಯದಲ್ಲಿ ಮನೆಯ ಸುತ್ತಮುತ್ತಲಿನ ಘನತ್ಯಾಜ್ಯ ವಸ್ತುಗಳಲ್ಲಿ ಸಂಗ್ರಹವಾಗುವ ಮಳೆನೀರಿನಲ್ಲಿ ಈಡೀಸ್ ಸೊಳ್ಳೆಗಳ ಉತ್ಪತ್ತಿ ತಡೆಗಟ್ಟುವಲ್ಲಿ ಕ್ರಮ ಕೈಗೊಳ್ಳಬೇಕು. ಯಾವುದೇ ಜ್ವರವಿದ್ದರೂ ನಿರ್ಲಕ್ಷ್ಯ ಮಾಡದೇ ತಕ್ಷಣ ವೈದ್ಯರ ಬಳಿ ಭೇಟಿ ನೀಡಿ, ಸೂಕ್ತ ಚಿಕಿತ್ಸೆ ಪಡೆಯುವುದರಿಂದ ಡೆಂಗೀ ಜ್ವರದಿಂದ ಉಂಟಾಗುವ ಸಾವು-ನೋವು ತಡೆಗಟ್ಟಬಹುದು ಎಂದು ತಿಳಿಸಿದರು.

ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಹಾಗೂ ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಡಾ.ಹನುಮಂತಪ್ಪ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ. ವೀರೇಂದ್ರಕುಮಾರ್, ಜಿಲ್ಲಾ ವಿಬಿಡಿಸಿ ಸಮಾಲೋಚಕ ಪ್ರತಾಪ್ ಎಚ್., ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಶಕುಂತಲಾ ಮ್ಯಾಳಿ, ನಾಗರಾಜ, ರವೀಂದ್ರ ಜಿನಗ, ಮರಿಬಸವನಗೌಡ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಅಂಬುಜಾ, ನಂದಿನಿ, ಶಕುಂತಲಾ, ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿಗಳು, ವಿಬಿಡಿಸಿ ಸಿಬ್ಬಂದಿ ವರ್ಗದವರು, ತಾಲೂಕು ಆರೋಗ್ಯಾಧಿಕಾರಿಗಳ ಸಿಬ್ಬಂದಿ ಹಾಗೂ ಮಲೇರಿಯಾ ಲಿಂಕ್ ವಾಲಂಟೀಯರ್ಸ್ ಮತ್ತು ಇತರ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಸಿಬ್ಬಂದಿ ಭಾಗವಹಿಸಿದ್ದರು.

ಜಾಗೃತಿ ಬೈಕ್‍ ರ‍್ಯಾಲಿಯು ನಗರದ ಪ್ರಮುಖ ಬೀದಿಗಳು ಹಾಗೂ ಡೆಂಘೀ ಸಮಸ್ಯಾತ್ಮಕ ವಾರ್ಡ್‍ಗಳಲ್ಲಿ ಸಂಚರಿಸಿ ಸಾರ್ವಜನಿಕರಿಗೆ ಡೆಂಘೀ ಕುರಿತು ಜಾಗೃತಿ ಮೂಡಿಸಿತು.