ಬಳ್ಳಾರಿ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಡೆಯುವ ಚುನಾವಣೆಗಳಲ್ಲಿ ಮಾಧ್ಯಮಗಳ ಭಾಗವಹಿಸುವಿಕೆ ಬಹುಮುಖ್ಯ ಪಾತ್ರವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ತಿಳಿಸಿದರು.
ಈಗಾಗಲೇ ಲೋಕಸಭಾ ಸಾರ್ವತ್ರಿಕ ಚುನಾವಣೆ ಘೋಷಣೆಯಾಗಿದ್ದು, ಜಿಲ್ಲೆಯಲ್ಲಿ ಮೇ 7 ರಂದು ಮತದಾನ ನಡೆಯಲಿದೆ. ಚುನಾವಣೆ ಸಂದರ್ಭದಲ್ಲಿ ಮಾಧ್ಯಮಗಳ ಪಾತ್ರ ಮಹತ್ವದ್ದಾಗಿದ್ದು, ಮಾಧ್ಯಮಗಳು ಮತದಾರರಿಗೆ ಚುನಾವಣೆಯ ಕುರಿತು ಉಪಯುಕ್ತ ಮಾಹಿತಿ ನೀಡುವುದರ ಜೊತೆಗೆ ಮತದಾನದ ಪ್ರಾಮುಖ್ಯತೆಯನ್ನು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.
ಚುನಾವಣೆಯ ಸಂದರ್ಭದಲ್ಲಿ ಮಾಧ್ಯಮಗಳು ವಸ್ತುನಿಷ್ಠ ಸುದ್ದಿಗಳಿಗೆ ಆದ್ಯತೆ ನೀಡಬೇಕು. ಟಿವಿ, ಕೇಬಲ್, ಪತ್ರಿಕೆಗಳಲ್ಲಿ ಭಿತ್ತರಗೊಳ್ಳುವ ರಾಜಕೀಯ ಜಾಹೀರಾತುಗಳಿಗೆ ಮಾಧ್ಯಮ ಪ್ರಮಾಣೀಕರಣ ಮತ್ತು ನಿಗಾ ಸಮಿತಿ (ಎಂಸಿಎಂಸಿ) ಯಿಂದ ಪೂರ್ವಾನುಮತಿ ಕಡ್ಡಾಯವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರಗೊಳ್ಳುವ ರಾಜಕೀಯ ಪಕ್ಷ, ವ್ಯಕ್ತಿಗಳ ಜಾಹೀರಾತುಗಳ ಮೇಲೂ ಎಂಸಿಎಂಸಿ ಸಮಿತಿಯು ನಿಗಾವಹಿಸಿದ್ದು, ಇವುಗಳಿಗೆ ಸಹ ಅನುಮತಿ ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ಶೇಕಡಾವಾರು ಮತದಾನ ಪ್ರಮಾಣ ಹೆಚ್ಚಿಸಲು ಜಿಲ್ಲಾ ಸ್ವೀಪ್ ಸಮಿತಿಯಿಂದ ಹಲವಾರು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಈ ಸಂಬಂಧ ಸ್ವೀಪ್ ಚಟುವಟಿಕೆ ಕಾರ್ಯಕ್ರಮಗಳಿಗೆ ಹೆಚ್ಚು ಪ್ರಚಾರ ನೀಡಬೇಕು ಅವರು ಕೋರಿದರು.
ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೈರ್, ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ತುಕಾರಾಂ ರಾವ್ ಮಾತನಾಡಿದರು.