ಕರ್ನಾಟಕ ಏಕೀಕರಣದಲ್ಲಿ ಪತ್ರಿಕೆಗಳ ಪಾತ್ರ ಮಹತ್ವದ್ದು: ಶಾಂತಲಿಂಗ ಶ್ರೀ

KannadaprabhaNewsNetwork |  
Published : Nov 26, 2026, 02:30 AM IST
24ಎಂಡಿಜಿ2, ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಪಿಎಂಶ್ರೀ ನವೋದಯ ವಿದ್ಯಾಲಯದಲ್ಲಿ ಜರುಗಿದ ಕರ್ನಾಟಕ ಏಕೀಕರಣದಲ್ಲಿ ಪತ್ರಿಕೆಗಳ ಪಾತ್ರ ಕುರಿತು ಉಪನ್ಯಾಸ ಹಾಗೂ ಪ್ರಾಧ್ಯಾಪಕ ಮನೋಹರ ಕುಲಕರ್ಣಿ ಅವರ ಮೌನದ ಎತ್ತರ ಕೃತಿ ಬಿಡುಗಡೆ ಸಮಾರಂಭವನ್ನು ಭೈರನಹಟ್ಟಿಯ ಶಾಂತಲಿಂಗ ಸ್ವಾಮಿಜಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಕನ್ನಡ ನಾಡಿನ ಏಕೀಕರಣದ ಹೋರಾಟದಲ್ಲಿ ಕನ್ನಡಿಗರಲ್ಲಿ ಸ್ವಾಭಿಮಾನದ ಕಿಚ್ಚು ಹಚ್ಚುವ ಮೂಲಕ ಹೋರಾಟಕ್ಕೆ ಹೆಚ್ಚಿನ ಬಲ ತುಂಬುವಲ್ಲಿ ಅಂದಿನ ಪತ್ರಿಕೆಗಳು ಮಹತ್ವದ ಪಾತ್ರ ವಹಿಸಿವೆ.

ಕರ್ನಾಟಕ ಏಕೀಕರಣದಲ್ಲಿ ಪತ್ರಿಕೆಗಳ ಪಾತ್ರ ಕುರಿತು ಉಪನ್ಯಾಸ, ಮೌನದ ಎತ್ತರ ಕೃತಿ ಬಿಡುಗಡೆ

ಕನ್ನಡಪ್ರಭ ವಾರ್ತೆ ಮುಂಡರಗಿ

ಕನ್ನಡ ನಾಡಿನ ಏಕೀಕರಣದ ಹೋರಾಟದಲ್ಲಿ ಕನ್ನಡಿಗರಲ್ಲಿ ಸ್ವಾಭಿಮಾನದ ಕಿಚ್ಚು ಹಚ್ಚುವ ಮೂಲಕ ಹೋರಾಟಕ್ಕೆ ಹೆಚ್ಚಿನ ಬಲ ತುಂಬುವಲ್ಲಿ ಅಂದಿನ ಪತ್ರಿಕೆಗಳು ಮಹತ್ವದ ಪಾತ್ರ ವಹಿಸಿವೆ ಎಂದು ಭೈರನಹಟ್ಟಿಯ ದೊರೆಸ್ವಾಮಿ ವಿರಕ್ತಮಠ ಹಾಗೂ ಶಿರೋಳ ತೋಂಟದಾರ್ಯ ಮಠದ ಶಾಂತಲಿಂಗಸ್ವಾಮೀಜಿ ಹೇಳಿದರು. ತಾಲೂಕಿನ ಕೊರ್ಲಹಳ್ಳಿಯ ಪಿಎಂಶ್ರೀ ಜವಾಹರ ನವೋದಯ ವಿದ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ದೊರೆಸ್ವಾಮಿ ವಿವಿಧೋದ್ದೇಶಗಳ ಟ್ರಸ್ಟ್, ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ, ದೊರೆಸ್ವಾಮಿ ವಿರಕ್ತಮಠ ಭೈರನಹಟ್ಟಿ ಸಂಯುಕ್ತವಾಗಿ ಆಯೋಜಿಸಲಾಗಿದ್ದ ಕರ್ನಾಟಕ ಏಕೀಕರಣದಲ್ಲಿ ಪತ್ರಿಕೆಗಳ ಪಾತ್ರ ಕುರಿತು ಉಪನ್ಯಾಸ ಹಾಗೂ ಪ್ರಾಧ್ಯಾಪಕ ಮನೋಹರ ಕುಲಕರ್ಣಿ ಅವರ ಮೌನದ ಎತ್ತರ ಕೃತಿ ಬಿಡುಗಡೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು ಹುರಿದುಂಬಿಸಿದ ಪತ್ರಿಕೆಗಳು, ತದನಂತರ ಹರಿದು ಹಂಚಿಹೋಗಿದ್ದ ಕರುನಾಡನ್ನು ಒಂದುಗೂಡಿಸಲು ಅವಿರತವಾಗಿ ಶ್ರಮಿಸಿದವು. ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ವಾಗ್ಭೂಷಣ, ಪಾಟೀಲ ಪುಟ್ಟಪ್ಪನವರ ಸಾರಥ್ಯದ ವಿಶ್ವವಾಣಿ ಸೇರಿದಂತೆ ನೂರಾರು ಪತ್ರಿಕೆಗಳು ಏಕೀಕರಣದ ರೂವಾರಿಗಳಿಗೆ ಸ್ಫೂರ್ತಿಯಾದವು ಎಂದು ಸ್ಮರಿಸಿದ ಅವರು, ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳಲ್ಲಿ ಯಾವುದೇ ಲೋಪದೋಷಗಳಾದರೂ ಅದನ್ನು ಸಮಾಜಕ್ಕೆ ತಿಳಿಸಿ ಸರಿಪಡಿಸುವ ಮಹತ್ತರ ಜವಾಬ್ದಾರಿ ಪತ್ರಿಕಾರಂಗದ ಮೇಲಿದೆ. ಇಂದಿಗೂ ನೈಜ ವರದಿಗಳ ಮೂಲಕ ಸಮಾಜದ ತೊಂದರೆಗಳನ್ನು ನಿವಾರಿಸುವ ಕೆಲಸವನ್ನು ಪತ್ರಿಕೆಗಳು ಮಾಡುತ್ತಿವೆ ಎಂದರು.ಹಿರಿಯ ಪತ್ರಕರ್ತ ಅಜೀತ್ ಘೋರ್ಪಡೆ ಮಾತನಾಡಿ, ನಾಡಿನ ಜನತೆಯನ್ನು ಜಾಗೃತಗೊಳಿಸುವಲ್ಲಿ ಪತ್ರಿಕೋದ್ಯಮ ಅವಿರತ ಶ್ರಮಿಸಿದೆ. ಬಂಗಾರದ ವಾಚ್ ಮಾರಿ ಪತ್ರಿಕೆ ನಡೆಸಿದ ಮೊಹರೆ ಹನುಮಂತರಾಯರಂತಹ ಪತ್ರಕರ್ತರ ತ್ಯಾಗವನ್ನು ಇಂದಿನ ಪೀಳಿಗೆ ಸದಾ ಸ್ಮರಿಸಬೇಕು ಎಂದರು.

ಪತ್ರಕರ್ತ ಸಿ.ಕೆ. ಗಣಪ್ಪನವರ ಮಾತನಾಡಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಆಂಗ್ಲ ಮಾಧ್ಯಮ ಅನಿವಾರ್ಯವಾದರೂ, ನಮ್ಮ ಅನ್ನದ ಭಾಷೆ ಹಾಗೂ ಮಾತೃಭಾಷೆಯಾದ ಕನ್ನಡವನ್ನು ಎಂದಿಗೂ ಮರೆಯಬಾರದು. ಭಾಷೆಯನ್ನು ಉಳಿಸಿ ಬೆಳೆಸುವ ಪಣವನ್ನು ವಿದ್ಯಾರ್ಥಿಗಳು ತೊಡಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ವಿದ್ಯಾಲಯದ ಪ್ರಾಚಾರ್ಯ ಬಸವರಾಜ ಜಿ.ಎಸ್. ಮಾತನಾಡಿ, ಪತ್ರಿಕೆಗಳು ಪ್ರಜಾಪ್ರಭುತ್ವದ ನಾಲ್ಕನೇ ಆಧಾರ ಸ್ತಂಭವಾಗಿದ್ದು, ವಿದ್ಯಾರ್ಥಿಗಳಲ್ಲಿ ಚಿಂತನೆಯ ದೀಪವನ್ನು ಬೆಳಗಿಸಿ, ಅವರ ವ್ಯಕ್ತಿತ್ವ ನಿರ್ಮಾಣದಲ್ಲಿ ಮಹತ್ತರ ಪಾತ್ರ ವಹಿಸುತ್ತವೆ ಎಂದರು.

ಇದೇ ಸಂದರ್ಭ ಪಿಎಂಶ್ರೀ ಜವಾಹರ ನವೋದಯ ವಿದ್ಯಾಲಯದ ಶಿಕ್ಷಕ ಮನೋಹರ ಕುಲಕರ್ಣಿ ಅವರ ಮೌನದ ಎತ್ತರ ಕೃತಿಯನ್ನು ಶಾಂತಲಿಂಗ ಸ್ವಾಮೀಜಿ ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಪತ್ರಕರ್ತ ಶರಣು ಸೊಲಗಿ, ಮಲ್ಲಿಕಾರ್ಜುನ ಪಾಟೀಲ, ಮನೋಹರ ಕುಲಕರ್ಣಿ, ಆರ್.ಬಿ. ಚಿನಿವಾಲರ್, ಮಹಾಂತೇಶ ಹಿರೇಮಠ, ಗಾಯತ್ರಿ ಸೇರಿದಂತೆ ಅನೇಕರಿದ್ದರು. ಜನಪದ ಕಲಾವಿದ ಗವಿಸಿದ್ದಯ್ಯ ಹಳ್ಳಿಕೇರಿಮಠ ಇವರಿಂದ ಜಾನಪದ ಸಂಜೆ ಕಾರ್ಯಕ್ರಮ ಜರುಗಿತು. ಕನ್ನಡ ಶಿಕ್ಷಕ ಸುರೇಶ ಐ.ಎಂ. ಸ್ವಾಗತಿಸಿದರು. ಎಂ.ಬಿ. ಕುಲಕರ್ಣಿ ನಿರೂಪಿಸಿ, ಎನ್.ಎಚ್. ಪದ್ಮಾವತಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗರ್ಭಿಣಿಯಾದ ಅಪ್ರಾಪ್ತೆ: ಪೋಕ್ಸೋ ಕೇಸ್‌ ದಾಖಲು
ಇಳಕಲ್ಲಿಗೆ ಬಂತು ಕನ್ನಡ ಬಂಡಾರದ ರಥ