ಮುಂಡರಗಿ: ಪಾಲಕರು ಮಕ್ಕಳನ್ನು ಚೆನ್ನಾಗಿ ಬೆಳೆಸಬೇಕು. ಮಕ್ಕಳು ಶಾಲೆಗೆ ಬಂದು ಹೋದರೆ ಸಾಲದು, ಅವರು ಮನೆಗೆ ಬಂದಾಗ ಶಾಲೆಯಲ್ಲಿನ ಕಲಿಕಾ ಚಟುವಟಿಕೆಗಳ ಕುರಿತು ತಂದೆ ತಾಯಂದಿರು ಒಂದಿಷ್ಟು ವಿಚಾರಿಸಬೇಕು. ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಪಾಲಕರ ಪಾತ್ರ ಅತ್ಯಂತ ಪ್ರಮುಖವಾಗಿರುತ್ತದೆ ಎಂದು ವಿಶ್ರಾಂತ ಪ್ರಾಚಾರ್ಯ, ಪರಿಸರವಾದಿ ಪ್ರೊ.ಸಿ.ಎಸ್. ಅರಸನಾಳ ಹೇಳಿದರು. ಅವರು ಶುಕ್ರವಾರ ಸಂಜೆ ಪುರಸಭೆ ವ್ಯಾಪ್ತಿಯ ರಾಮೇನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಶಾಲಾ ವಾರ್ಷಿಕೋತ್ಸವ ಹಾಗೂ ಸಾಂಸ್ಕೃತಿ ಹಬ್ಬ ಉದ್ಘಾಟಿಸಿ ಮಾತನಾಡಿದರು. ಒಬ್ಬ ವಿದ್ಯಾರ್ಥಿ ಅತ್ಯುತ್ತಮ ವಿದ್ಯಾರ್ಥಿಯಾಗಿ ಹೊರ ಹೊಮ್ಮಬೇಕಾದರೆ ಪಾಲಕ, ಬಾಲಕ ಹಾಗೂ ಶಿಕ್ಷಕರ ಪಾತ್ರ ಪ್ರಮುಖವಾಗಿರುತ್ತದೆ. ಅಂದಾಗ ವಿದ್ಯಾರ್ಥಿ ಪರಿಪೂರ್ಣವಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ. ಮಕ್ಕಳ ಕೆಲವು ಮಹತ್ವದ ಕಲಿಕೆಗಳಿಗೆ ಮೊಬೈಲ್ ಅವಶ್ಯ. ಆದರೆ ಮಕ್ಕಳು ಅದನ್ನು ದುರುಪಯೋಗ ಮಾಡಿಕೊಳ್ಳುತ್ತಿರುವುದರಿಂದ ಮಕ್ಕಳನ್ನು ಮೊಬೈಲ್ ನಿಂದ ದೂರ ಇಡಬೇಕು. ಇಲ್ಲಿನ ಮುಖ್ಯೋಪಾಧ್ಯಾಯ ಡಾ.ನಿಂಗು ಸೊಲಗಿಯವರು ಈ ಶಾಲೆಗೆ ಬಂದ ನಂತರ ಗ್ರಾಮದ ಗುರು-ಹಿರಿಯರ, ಯುವಕರ ಹಾಗೂ ಶಾಲಾ ಸಿಬ್ಬಂದಿಯವರ ಸಹಕಾರದಿಂದ ಇಡೀ ಶಾಲೆಯನ್ನು ಅಭಿವೃದ್ಧಿ ಪಡಿಸುವ ಮೂಲಕ ಶಾಲೆ ಅಂದವನ್ನು ಇನ್ನಷ್ಟು ಹೆಚ್ಚಿಸಿದ್ದಾರೆ. ಮುಂದೊಂದು ದಿನ ಈ ಶಾಲೆ ತಾಲೂಕಿಗೆ ಮಾದರೀಯಾಗಿ ಹೊರ ಹೊಮ್ಮಲಿದೆ ಎಂದರು. ಶಾಲಾ ಮುಖ್ಯೋಪಾಧ್ಯಾಯ ಡಾ. ನಿಂಗು ಸೊಲಗಿ ಮಾತನಾಡಿ, ಗ್ರಾಮದ ಗುರು-ಹಿರಿಯರು, ಯುವಕರು, ಶಾಲಾ ಸಿಬ್ಬಂದಿಯವರ ಸಹಕಾರದಿಂದ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಒಂದು ಊರಿಗೆ ದೇವಾಲಯ ಎಷ್ಟು ಮುಖ್ಯವೋ, ಅಲ್ಲಿ ಶಾಲೆಯೂ ಅಷ್ಟೇ ಮುಖ್ಯ. ಅಂತಹ ಶಾಲೆಯ ಅಭಿವೃದ್ದಿಗೆ ಇಡೀ ರಾಮೇನಹಳ್ಳಿ ಗ್ರಾಮಸ್ಥರು ಸ್ಪಂದಿಸುವ ಮೂಲಕ ಶಾಲಾ ಅಭಿವೃದ್ದಿ ಕಾರ್ಯಕ್ಕೆ ಕೈ ಜೋಡಿಸಿದ್ದಕ್ಕಾಗಿ ಅಭಿನಂದಿಸಿ, ಶಾಲಾ ಆವರಣದಲ್ಲಿ ಇನ್ನೂ ಮಾಡಬೇಕಾದ ಕೆಲಸ ಕಾರ್ಯಗಳಿದ್ದು, ಧೂಳುಮುಕ್ತ ಶಾಲಾ ಆವರಣಕ್ಕಾಗಿ ಫೆವರ್ ಹಾಕಿಸಬೇಕಿದೆ. ರಂಗ ಮಂದಿರ ಸೇರಿದಂತೆ ಇನ್ನೂ ಹಲವಾರು ಕೆಲಸ ಕಾರ್ಯಗಳು ಆಗಬೇಕಾಗಿದ್ದು, ಎಂದಿನಂತೆ ಗ್ರಾಮಸ್ಥರು ಕೈಜೋಡಿಸಿ ಸಹಕಾರ ನೀಡಿದರೆ ಈ ಶಾಲೆಯನ್ನು ಇನ್ನಷ್ಟು ಮೇಲ್ಮಟ್ಟಕ್ಕೆ ಕೊಂಡೊಯ್ಯಲು ಸಹಕಾರಿಯಾಗುತ್ತದೆ ಎಂದರು.