ಕಂಪ್ಲಿ: ಪಟ್ಟಣದ ಸಾಂಗತ್ರಯ ಸಂಸ್ಕೃತ ಪಾಠಶಾಲೆಯಲ್ಲಿ ತಾಲೂಕು ಸ್ವೀಪ್ ಸಮಿತಿ ವತಿಯಿಂದ ಲೋಕಸಭಾ ಚುನಾವಣೆ ಅಂಗವಾಗಿ ಮತದಾರ ಜಾಗೃತಿಗಾಗಿ ಬುಧವಾರ ಸಂಜೆ ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ನರೇಗಾ ಎಡಿ ಕೆ.ಎಸ್. ಮಲ್ಲನಗೌಡ ಮಾತನಾಡಿ, ನಿಸರ್ಗ, ಪ್ರೀತಿ, ಪ್ರೇಮ, ವಿರಹ, ವಿಡಂಬನೆ ಮೊದಲಾದ ಕವಿತೆ ರಚನೆ ಸಾಮಾನ್ಯವಾಗಿದ್ದರೂ, ಚುನಾವಣೆ ಪ್ರಕ್ರಿಯೆ ಮತದಾನ ಕುರಿತು ಕವಿತೆ ರಚನೆ ಕವಿಗಳಿಗೆ ಸವಾಲಾಗಿದೆ. ಮತದಾರರನ್ನು ಜಾಗೃತಿಗೊಳಿಸುವ ಮೌಲಿಕ ಕವಿತೆಗಳ ರಚನೆ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಕವಿಗೋಷ್ಠಿಯಲ್ಲಿ ಜಿ. ಪ್ರಕಾಶ್, ಬಂಗಿ ದೊಡ್ಡ ಮಂಜುನಾಥ, ಎಸ್. ರಾಜು, ರಾಜು ಬಿಲಂಕರ್, ಎಸ್. ಶಾಮಸುಂದರರಾವ್, ಅಶೋಕ ಕುಕನೂರು, ಚಂದ್ರಯ್ಯ ಸೊಪ್ಪಿಮಠ, ಅಂಬಿಗರ ಮಂಜುನಾಥ, ರಮೇಶ ಸುಗ್ಗೇನಹಳ್ಳಿ ಚುನಾವಣೆಗೆ ಸಂಬಂಧಿಸಿದ ಕವಿತೆಗಳನ್ನು ವಾಚಿಸಿದರು.ಕವಿ ಜಿ. ಪ್ರಕಾಶ್, ಅಂಬಿಗರ ಮಂಜುನಾಥ, ರಾಜು ಬಿಲಂಕರ್, ರಮೇಶ್ ಸುಗ್ಗೇನಹಳ್ಳಿ ವಾಚಿಸಿದ ಕವಿತೆಗಳು ಪ್ರೇಕ್ಷಕರ ಗಮನ ಸೆಳೆದವು.
ಸ್ವೀಪ್ ಸಮಿತಿ ಅಧ್ಯಕ್ಷ ತಾಪಂ ಇಒ ಆರ್.ಕೆ. ಶ್ರೀಕುಮಾರ್, ಪುರಸಭೆ ಮುಖ್ಯಾಧಿಕಾರಿ ಗೋರೆಬಾಳ್ ರೆಡ್ಡಿರಾಯನಗೌಡ ಹಾಗೂ ಕಂದಾಯ, ತಾಪಂ, ಪುರಸಭೆ ಸಿಬ್ಬಂದಿ ಇದ್ದರು.