ವಿಜ್ಞಾನದ ಅರಿವು ಮೂಡಿಸುವಲ್ಲಿ ವಿದ್ಯಾರ್ಥಿಗಳ ಪಾತ್ರ ಅಪಾರ

KannadaprabhaNewsNetwork | Published : Jul 10, 2024 12:43 AM

ಸಾರಾಂಶ

ಭದ್ರಾವತಿ ಬೊಮ್ಮನಕಟ್ಟೆ ಸರ್.ಎಂ.ವಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ೨೦೨೩-೨೪ನೇ ಸಾಲಿನ ವಿಜ್ಞಾನ ದಿನಾಚರಣೆ ಮತ್ತು ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಹಾಗೂ ಗಾಯಕ ಹರೋನಹಳ್ಳಿ ಸ್ವಾಮಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕನ್ನಡಪ್ರಭ ವಾರ್ತೆ ಭದ್ರಾವತಿ

ವಿಜ್ಞಾನದ ಅರಿವು ಮೂಡಿಸುವಲ್ಲಿ ವಿದ್ಯಾರ್ಥಿಗಳ ಜವಾಬ್ದಾರಿ ಅತಿ ಮುಖ್ಯವಾದದ್ದು ಎಂದು ನಗರದ ಬೊಮ್ಮನಕಟ್ಟೆ ಸರ್.ಎಂ.ವಿ ಸರ್ಕಾರಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಎಸ್ ರಘುನಾಥ್ ಹೇಳಿದರು.

ಕಾಲೇಜಿನಲ್ಲಿ ವಿಜ್ಞಾನ ವೇದಿಕೆ ಮತ್ತು ಅಗಸ್ತ್ಯ ಅಂತಾರಾಷ್ಟ್ರೀಯ ಪ್ರತಿಷ್ಠಾನ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ೨೦೨೩-೨೪ನೇ ಸಾಲಿನ ವಿಜ್ಞಾನ ದಿನಾಚರಣೆ ಮತ್ತು ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇದು ವಿಜ್ಞಾನ ಯುಗ. ಸುತ್ತಲ ಜಗತ್ತನ್ನು ಇಂದು ವಿಜ್ಞಾನ ಆವರಿಸಿದೆ. ತಂತ್ರಜ್ಞಾನ ಇಲ್ಲದ ಬದುಕನ್ನು ಊಹಿಸಲು ಅಸಾಧ್ಯವಾದ ಕಾಲಘಟ್ಟ ತಲುಪಿದ್ದೇವೆ. ಉತ್ತಮ ಬದುಕಿಗೆ ತಂತ್ರಜ್ಞಾನ ಅನಿವಾರ್ಯ ಹಾಗೂ ಅವಶ್ಯಕವಾಗಿದೆ ಎಂದರು.

ಇಂದು ಬದುಕು ವಿಜ್ಞಾನದ ಜೊತೆ ಸಂಬಂಧ ಬೆಸೆದಿದೆ. ಆದ್ದರಿಂದ ವಿಜ್ಞಾನ ಬದುಕಿಗೆ ಬಹಳಷ್ಟು ಅಗತ್ಯವಾಗಿದೆ. ವಿಜ್ಞಾನದ ಬಗ್ಗೆ ತಪ್ಪು ತಿಳಿಯದೆ ಸತ್ಯ ತಿಳಿಯಬೇಕು. ವಿಜ್ಞಾನ ಜೀವನಕ್ಕೆ ಎಷ್ಟು ಮಹತ್ವವಾದುದ್ದಾಗಿದೆ ಎಂದು ತಿಳಿಯಲು ಪ್ರತಿಯೊಬ್ಬರೂ ಆಸಕ್ತಿವಹಿಸಬೇಕು. ಸೌಲಭ್ಯ ಸೌಕರ್ಯಗಳಿಲ್ಲದ ಕಾಲದಲ್ಲಿಯೇ ರಾಮಾನುಜನ್ ಅವರಂತಹ ವಿಜ್ಞಾನಿಗಳು ಬಹಳಷ್ಟು ಕೊಡುಗೆ ನೀಡಿರುವುದನ್ನು ಗಮನಿಸಬೇಕು ಎಂದರು.

ಆಯನೂರು ಕೋರ್ ವಿಜ್ಞಾನ ಚಟುವಟಿಕಾ ಕೇಂದ್ರದ ಮುಖ್ಯಸ್ಥ ಶಿವರಾಜ ಗೊರನಾಳ ಮಾತನಾಡಿ, ಭಾರತ ಬೇರೆ ದೇಶಗಳಿಗೆ ಸ್ಪರ್ಧೆನೀಡಲು ವಿಜ್ಞಾನದ ಉನ್ನತೀಕರಣ ಮುಖ್ಯ. ಸ್ಪರ್ಧೆ ಎಂದರೆ ಹಣಾಹಣಿಯಲ್ಲ ಬದಲಾಗಿ ಎರಡು ದೇಶಗಳ ಪ್ರಗತಿ ಪರಿಶೀಲನೆ. ಆದ್ದರಿಂದ ಬೇರೆ ಬೇರೆ ಚಟುವಟಿಕೆಗಳಿಗೆ ದೊರೆಯುವ ಉತ್ತೇಜನದಂತೆಯೇ ವಿಜ್ಞಾನಕ್ಕೂ ಉತ್ತೇಜನ ಅಗತ್ಯ ಎಂದರು.

ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ವಿಜ್ಞಾನ ಮತ್ತು ಸಾಂಸ್ಕೃತಿಕ ವೇದಿಕೆ ಸಂಚಾಲಕ ಡಾ.ಬಿ ವಸಂತಕುಮಾರ್, ಐಕ್ಯೂಎಸಿ ಸಂಚಾಲಕ ಡಾ.ಜಿ.ಎಸ್ ಸಿದ್ದೇಗೌಡ, ಉದ್ಯೋಗ ಮತ್ತು ಮಾಹಿತಿ ಪಿ.ಜಿ ವಿಭಾಗದ ಸಂಚಾಲಕ ಡಾ. ಈರೇಶ್‌ನಾಯ್ಕ, ರೆಡ್ ಕ್ರಾಸ್ ಸಂಚಾಲಕ ಡಾ. ಎ.ಬಿ ಅನಿಲ್‌ಕುಮಾರ್ ಮತ್ತು ರೋವರ್‍ಸ್ ಘಟಕದ ಸಂಚಾಲಕ ಡಾ. ಗಣೇಶ್ ಆಚಾರಿ ಇನ್ನಿತರರಿದ್ದರು.

ಮುಖ್ಯ ಶಿಕ್ಷಕ ಹಾಗೂ ಗಾಯಕ ಹರೋನಹಳ್ಳಿ ಸ್ವಾಮಿ ವಿಜ್ಞಾನ ಗೀತೆ ಹಾಡಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು. ಸಾಗರ್ ಜಿ ಪ್ರಾರ್ಥಿಸಿ, ರೇಂಜರ್ಸ್‌ ಘಟಕದ ಸಂಚಾಲಕಿ ಡಾ.ಶಿಲ್ಪಾ ಜಿ.ಎಂ ಸ್ವಾಗತಿಸಿ, ಯಶಸ್ವಿನಿ ಕೆ ನಿರೂಪಿಸಿ, ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮಾಧಿಕಾರಿ ಡಾ.ಅರಸಯ್ಯ ವಂದಿಸಿದರು.

ಜೀವಶಾಸ್ತ್ರ, ಪ್ರಾಣಿಶಾಸ್ತ್ರ ಹಾಗೂ ಸಸ್ಯ ಶಾಸ್ತ್ರಕ್ಕೆ ಸಂಬಂಧಿಸಿದ ಸುಮಾರು ೫೦ಕ್ಕೂ ಹೆಚ್ಚು ಮಾದರಿ ವಸ್ತು ಪ್ರದರ್ಶನದಲ್ಲಿ ಇಡಲಾಗಿತ್ತು. ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಕಾಲೇಜಿನ ವಿಜ್ಞಾನ ವಿದ್ಯಾರ್ಥಿಗಳು ಮಾದರಿಗಳ ಕುರಿತು ಮಾಹಿತಿ ನೀಡಿದರು.

Share this article