- ಕೆ.ಎಸ್.ಆನಂದ್ ಅಭಿಮತ । ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ
ದೇಶದ ಸರ್ವತೋಮುಖ ಅಭಿವೃದ್ಧಿಯಲ್ಲಿ ವಿದ್ಯಾರ್ಥಿಗಳ ಪಾತ್ರ ಪ್ರಮುಖವಾಗಿದೆ. ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಕ್ರೀಡೆ, ಸಾಂಸ್ಕೃತಿಕ ಹಾಗೂ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ತಮ್ಮ ಪ್ರತಿಭೆ ಪ್ರದರ್ಶಿಸಬೇಕು ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಶುಕ್ರವಾರ ಕ್ರೀಡಾ, ಸಾಂಸ್ಕೃತಿಕ, ಎನ್ಎಸ್ಎಸ್, ರೋವರ್ಸ್ ಮತ್ತು ರೇಂಜರ್ಸ್ ಘಟಕಗಳ ಉದ್ಘಾಟನೆ ಹಾಗೂ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ವಿದ್ಯಾರ್ಥಿಗಳ ಗುರಿ ಕೇವಲ ಪದವಿ ಪಡೆಯಲು ಸೀಮಿತವಾಗಬಾರದು. ಸಮಾಜಮುಖಿ ಚಿಂತನೆ ಬೆಳೆಸಿಕೊಂಡು ಜನಪರ ಕಾರ್ಯಗಳಲ್ಲಿ ತೊಡಗಿವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ಶಿಕ್ಷಣ ವ್ಯವಸ್ಥೆ ಸೂಕ್ತ ಅವಕಾಶ ಕಲ್ಪಿಸಬೇಕು ಎಂದರು.ಕಾಲೇಜಿನ ಹಳೆ ವಿದ್ಯಾರ್ಥಿಯಾದ ತಾವು ಸಂಸ್ಥೆ ಅಭಿವೃದ್ಧಿಗೆ ವಿಶೇಷ ಕಾಳಜಿ ವಹಿಸಿದ್ದೇನೆ. ಕಾಲೇಜು ಕಟ್ಟಡ ನಿರ್ಮಾಣ ಕ್ಕೆ ಅರಣ್ಯ ಇಲಾಖೆ ಸುಪರ್ದಿಯಲ್ಲಿದ್ದ ಐದು ಎಕರೆ ಭೂಮಿಯನ್ನು ಕಾಲೇಜಿನ ಹೆಸರಿಗೆ ಹಸ್ತಾಂತರಿಸಲು ಸರ್ಕಾರದ ಮಟ್ಟ ದಲ್ಲಿ ಪ್ರಯತ್ನಿಸಿ ಯಶಸ್ವಿಯಾಗಿದ್ದೇನೆ. ಕನಕ ವೃತ್ತದ ಬಳಿ ವಿಶಾಲ ಆವರಣದಲ್ಲಿ ಆಧುನಿಕ ಶಿಕ್ಷಣ ವ್ಯವಸ್ಥೆಗೆ ಪೂರಕ ನೂತನ ಕಾಲೇಜು ಕಟ್ಟಡ ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಸಂಬಂಧ ಮುಂದಿನ ವಾರದಿಂದಲೇ ಸರ್ವೇ ಕಾರ್ಯ ಆರಂಭವಾಗಲಿದೆ ಎಂದು ತಿಳಿಸಿದರು.ಮುಖ್ಯ ಅತಿಥಿಯಾಗಿದ್ದ ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ ಮೂರು ದಶಕಗಳ ಹಿಂದೆ ಆರಂಭ ಗೊಂಡ ಕಾಲೇಜಿನಲ್ಲಿ ಇಂದು 2 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವುದು ಶೈಕ್ಷಣಿಕ ಬೆಳವಣಿಗೆಗೆ ಸಾಕ್ಷಿ. ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ, ಕೃಷಿಮೇಳ, ಜಾನಪದ ಕಾರ್ಯಕ್ರಮ, ಎನ್ಎಸ್ಎಸ್ ಶಿಬಿರ ಹಾಗೂ ಉದ್ಯೋಗ ಮೇಳಗಳ ಮೂಲಕ ಕಾಲೇಜು ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಗೆ ನೆರವಾಗುತ್ತಿದೆ. ಮುಂದಿನ ದಿನಗಳಲ್ಲಿ ಕಾಲೇಜು ಇನ್ನಷ್ಟು ಅಭಿವೃದ್ಧಿ ಹೊಂದಿ ಜಿಲ್ಲೆ ಉತ್ತಮ ಶಿಕ್ಷಣ ಸಂಸ್ಥೆಯಾಗಿ ರೂಪುಗೊಳ್ಳಲಿ ಎಂದು ಆಶಿಸಿದರು.ಪ್ರಾಚಾರ್ಯೆ ಪುಷ್ಪಭಾರತಿ ಮಾತನಾಡಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಕಾಲೇಜಿನಲ್ಲಿ ಆದ್ಯತೆ ನೀಡಲಾಗಿದೆ. ಹಲವು ವಿದ್ಯಾರ್ಥಿಗಳು ರ್ಯಾಂಕ್ ಗಳಿಸುವ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಯಶಸ್ಸು ಸಾಧಿಸಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಲು ತರಬೇತಿ ಕೇಂದ್ರವನ್ನೂ ಸ್ಥಾಪಿಸಲಾಗಿದೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿ ರುವುದರಿಂದ ಮೂಲಸೌಕರ್ಯದ ಕೊರತೆ ಎದುರಾಗಿದೆ. ನೂತನ ಕಟ್ಟಡ ನಿರ್ಮಾಣಕ್ಕೆ ಶಾಸಕರು ಸಹಕರಿಸಬೇಕು ಎಂದು ಮನವಿ ಮಾಡಿದರು.ಕಿರುತೆರೆ ಕಲಾವಿದ ಕಂಬದ ರಂಗಯ್ಯ ಗಾಯನ ನಡೆಸಿಕೊಟ್ಟರು. ಪುರಸಭೆ ಮಾಜಿ ಉಪಾಧ್ಯಕ್ಷ ಮೋಹನ್ಕುಮಾರ್ ಕಾಲೇಜಿನ ಅಭಿವೃದ್ಧಿ ಕುರಿತು ಮಾತನಾಡಿದರು. ಕಾಲೇಜಿನ ನಿವೃತ್ತ ಪ್ರಾಧ್ಯಾಪಕಿ ಪಂಕಜ ಎನ್.ಎಸ್. ದತ್ತಿ ನಿಧಿಗೆ ₹50 ಸಾವಿರ ದೇಣಿಗೆ ನೀಡಿದರು. ದಾನಿಗಳಾದ ಅರುಣ್ ಮತ್ತು ಈರೇಗೌಡ ರನ್ನು ಸನ್ಮಾನಿಸಲಾಯಿತು.ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಕೆಂಪಸಿದ್ದಯ್ಯ, ಸಪ್ತಕೋಟಿ ಧನಂಜಯ, ಆರ್.ವೆಂಕಟೇಶ್, ಕೆ.ಆರ್.ರವಿ, ಉಮೇಶ್ ಡಿ.ಎಸ್., ಅಧ್ಯಾಪಕರು, ಪಿಎಸ್ಐ ಜಿ.ಆರ್.ಸಜಿತ್ಕುಮಾರ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.