ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ, ಶೈಕ್ಷಣಿಕ ಕಾರ್ಯಾಗಾರ ಉದ್ಘಾಟನೆಕನ್ನಡಪ್ರಭ ವಾರ್ತೆ ಕೊಟ್ಟೂರು
ಸ್ಪರ್ಧಾತ್ಮಕ ಯುಗಕ್ಕೆ ಹೊಂದಿಕೊಂಡು ಶಿಕ್ಷಣ ಕಲಿಕೆಯ ಎಲ್ಲಾ ಸವಾಲು ಸ್ವೀಕರಿಸಿ ಪ್ರತಿ ವಿದ್ಯಾರ್ಥಿಗಳು ಮತ್ತು ಸಮಾಜವನ್ನು ಶೈಕ್ಷಣಿಕವಾಗಿ ಅಭಿವೃದ್ಧಿ ಪಡಿಸುವತ್ತ ಮುಂದಾಗಿರುವ ಗುರುಗಳ ಅಥವಾ ಶಿಕ್ಷಕರ ಪಾತ್ರ ಹಿರಿದಾಗಿದೆ ಎಂದು ಹಗರಿಬೊಮ್ಮನಹಳ್ಳಿ ಶಾಸಕ ಕೆ. ನೇಮರಾಜ ನಾಯ್ಕ್ ಹೇಳಿದರು.ಇಲ್ಲಿನ ಚಾನುಕೋಟಿ ಮಠದ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಪೂರಕವಾಗಿ ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಕೆಕೆಆರ್‌ಡಿಬಿ ಮತ್ತಿತರ ಸ್ಥಳೀಯ ಅನುದಾನವನ್ನು ಬಳಸಿಕೊಂಡು ಶಾಲೆಗಳ ಉನ್ನತೀಕರಣಗೊಳಿಸುವುದರ ಜೊತೆಗೆ ಖಾಸಗಿ ಶಾಲೆಗಳಲ್ಲಿರುವ ಸೌಲಭ್ಯಗಳಂತೆ ಕ್ಷೇತ್ರದ ಶಾಲೆಗಳನ್ನು ಡಿಜಿಟಲೀಕರಣಗೊಳಿಸುವ ಮತ್ತು ಲ್ಯಾಬ್ ಮತ್ತಿತರರ ಕಂಪ್ಯೂಟರ್ ಗಳನ್ನು ಅಳವಡಿಸಲು ₹80 ಕೋಟಿ ಅನುದಾನ ನೀಡಿರುವೆ ಎಂದರು.ಶಿಕ್ಷಕರಿಗೆ ಹಳೆಯ ಪಿಂಚಣಿ ಸೌಲಭ್ಯ ಕಲ್ಪಿಸಿಕೊಡಲು ಸರ್ಕಾರದ ಮೇಲೆ ಒತ್ತಡ ತರುವೆ ಎಂದರಲ್ಲದೇ ಕೊಟ್ಟೂರಿನಲ್ಲಿ ಬಿಇಒ ಕಚೇರಿ ತೆರೆಯಲು ಎಲ್ಲಾ ಬಗೆಯ ಆರ್ಥಿಕ ಸಂಪನ್ಮೂಲಗಳನ್ನು ತಮಗೆ ಲಭ್ಯವಾಗುತ್ತಿರುವ ಅನುದಾನವನ್ನು ಉಪಯೋಗಿಸಿಕೊಳ್ಳಲು ಸೂಚಿಸಿ ಆಡಳಿತಾತ್ಮಕ ಅನುಮೋದನೆ ನೀಡುವಂತೆ ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಲ್ಲಿ ಒತ್ತಾಯ ಪಡಿಸಿರುವೆ ಎಂದು ಹೇಳಿದರು.
ಕ್ಷೇತ್ರದಲ್ಲಿ ಹೆಚ್ಚು ಬಗೆಯ ಉನ್ನತ ಮಟ್ಟದ ಶಾಲೆಗಳನ್ನು ತೆರೆಯಲು ಸಂಬಂಧಪಟ್ಟವರಲ್ಲಿ ಮನವಿ ಸಲ್ಲಿಸಿದ್ದು ಸಮಗ್ರವಾಗಿ ಶೈಕ್ಷಣಿಕವಾಗಿ ಹಗರಿಬೊಮ್ಮನಹಳ್ಳಿ ಕ್ಷೇತ್ರ ಅಭಿವೃದ್ಧಿಯ ಪಥದತ್ತ ಸಾಗಲು ದೊಡ್ಡ ಮಟ್ಟದ ಯೋಜನೆ ರೂಪಿಸಿರುವೆ ಎಂದು ಹೇಳಿದರು.ಉಪನ್ಯಾಸಕ ಡಾ. ಎ.ಎಂ. ರಾಜಶೇಖರಯ್ಯ ಮಾತನಾಡಿ, ಶಿಕ್ಷಣ ಕ್ಷೇತ್ರದ ಯಾವುದೇ ಅಂಗಕ್ಕೆ ಧಕ್ಕೆ ಬಂದರೂ ಅಭಿವೃದ್ಧಿಯ ಎಲ್ಲಾ ಬಗೆಯಲ್ಲಿ ಹಿನ್ನಡೆ ಕಾಣಬೇಕಾಗುತ್ತದೆ ಎಂದು ಎಚ್ಚರಿಸಿದರಲ್ಲದೆ, ಹಿಂದಿನ ಕಾಲದ ಗುರುಗಳ ಮಾರ್ಗದರ್ಶನ ಪ್ರಸ್ತುತ ಕಾಲದ ಶಿಕ್ಷಣ ಬೆಳವಣಿಗೆಗೆ ಖಂಡಿತ ಕಾರಣವಾಗಿದೆ ಎಂದರು.
ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಐ. ದಾರುಕೇಶ್, ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಬಿ. ಶಿವಾನಂದ, ಮುಖಂಡ ಬದ್ದಿ ಮರಿಸ್ವಾಮಿ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಯೋಗೇಶ್ವರ ದಿನ್ನೆ, ಬಿಇಓ ಮೈಲೇಶ್ ಬೇವೂರು ಮಾತನಾಡಿದರು. ಚಾನುಕೋಟಿ ಮಠಾಧ್ಯಕ್ಷ ಡಾ. ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.ತಹಶೀಲ್ದಾರ್ ಅಮರೇಶ್ ಜಿ.ಕೆ., ತಾಪಂ ಇಒ ಡಾ. ಆನಂದ ಕುಮಾರ್, ಪಪಂ ಉಪಾಧ್ಯಕ್ಷ ಸಿ. ಸಿದ್ದಯ್ಯ, ಪಪಂ ಸದಸ್ಯರಾದ ಮರಬದ ಕೊಟ್ರೇಶ್, ಮಧ್ಯಾಹ್ನ ಉಪಾಹಾರ ಯೋಜನೆಯ ಸಹಾಯಕ ನಿರ್ದೇಶಕ ಕೆ.ಜಿ. ಆಂಜನೇಯ, ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಿ. ಮಲ್ಲಿಕಾರ್ಜುನ ಗೌಡ, ಶಿಕ್ಷಕರಾದ ಸಿದ್ದಪ್ಪ, ಶಿಶಿಕಲಾ, ನಾಗೇಶ್, ಬಿ. ಮತ್ತೇಶ್, ರವೀಂದ್ರ, ಮರಳನಗೌಡ ಮತ್ತಿತರರಿದ್ದರು.
ತಾಲೂಕಿನ ಉತ್ತಮ ಶಿಕ್ಷಕರು ಮತ್ತು ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಕೂಡ್ಲಿಗಿ ಬಿಇಒ ಜಗದೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಪಿ. ನಾಗೇಶ್ ಸ್ವಾಗತಿಸಿದರು. ಶಿಕ್ಷಕರಾದ ಬಸಮ್ಮ, ಶಿವಕುಮಾರ್ ನಿರೂಪಿಸಿದರು.