ರಾಜವೈಭವದ ಗೋಲ್ಡನ್‌ ಚಾರಿಯಟ್‌ಗೆ ಚಾಲನೆ

KannadaprabhaNewsNetwork |  
Published : Oct 25, 2026, 02:00 AM IST
golden chariot train 7 | Kannada Prabha

ಸಾರಾಂಶ

ರಾಜ್ಯದ ಪಾರಂಪರಿಕ ತಾಣಗಳು ಹಾಗೂ ಹೊಸ ತಾಣಗಳನ್ನು ಪರಿಚಯಿಸಲು ಸರ್ಕಾರ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕ್ರಾಂತಿಕಾರಿ ಹೆಜ್ಜೆ ಇಟ್ಟಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದ ಪಾರಂಪರಿಕ ತಾಣಗಳು ಹಾಗೂ ಹೊಸ ತಾಣಗಳನ್ನು ಪರಿಚಯಿಸಲು ಸರ್ಕಾರ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕ್ರಾಂತಿಕಾರಿ ಹೆಜ್ಜೆ ಇಟ್ಟಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ಶನಿವಾರ ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಐಷಾರಾಮಿ ಪ್ರವಾಸಿ ರೈಲು ಗೋಲ್ಡನ್ ಚಾರಿಯೇಟ್‌ಗೆ ಹಸಿರು ನಿಶಾನೆ ತೋರಿದ ನಂತರ ಮೆಜೆಸ್ಟಿಕ್ ಹಾಗೂ ಕೆಂಗೇರಿ ರೈಲು ನಿಲ್ದಾಣದಲ್ಲಿ ಮಾಧ್ಯಮಗಳಿಗೆ ಶಿವಕುಮಾರ್ ಶನಿವಾರ ಈ ವಿಷಯ ತಿಳಿಸಿದರು.

ಇಡೀ ದೇಶದಲ್ಲಿ ಪ್ರವಾಸಕ್ಕಾಗಿ ಇಂತಹ 4 ವಿಶೇಷ ರೈಲುಗಳಿವೆ. ಇದರಲ್ಲಿ ಕರ್ನಾಟಕ ಮತ್ತು ರಾಜಸ್ಥಾನದಲ್ಲಿ ಮಾತ್ರ ಐಷಾರಾಮಿ ಸೌಲಭ್ಯಗಳಿರುವ 2 ರೈಲುಗಳಿವೆ. ಸರ್ಕಾರ ಹಂಪಿ, ಬೇಲೂರು, ಮಲೆನಾಡು, ಮೈಸೂರು, ಕರಾವಳಿ, ಕೊಡಗು ಸೇರಿ ರಾಜ್ಯದ ಪ್ರವಾಸಿ ತಾಣಗಳಿಗೆ ಹೊಸ ರೂಪ ನೀಡುವ ಉದ್ದೇಶದಿಂದ ಅನೇಕ ವಿಶೇಷ ಕಾರ್ಯಕ್ರಮ ರೂಪಿಸುತ್ತಿದೆ ಎಂದು ಹೇಳಿದರು.

ಐಷಾರಾಮಿ ರೈಲು ಪ್ರಯಾಣವೆಂದರೆ ಶ್ರೀಮಂತರಿಗೆ ಮಾತ್ರ ಸೀಮಿತವಾಗಬಾರದು. ಕರ್ನಾಟಕದ ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಪ್ರಾಕೃತಿಕ ಸೌಂದರ್ಯ ಸವಿಯಲು ರಾಜ್ಯದ ಸಾಮಾನ್ಯ ಪ್ರವಾಸಿಗರಿಗೂ ಗೋಲ್ಡನ್ ಚಾರಿಯಟ್‌ ರೈಲಿನಲ್ಲಿ ಪ್ರಯಾಣಿಸುವ ಅವಕಾಶ ಸಿಗಬೇಕು. ಈ ಉದ್ದೇಶದಿಂದ ಆಫ್‌ ಸೀಸನ್‌ನಲ್ಲಿ ಕಡಿಮೆ ದರದಲ್ಲಿ ಪ್ರವಾಸಕ್ಕೆ ಅವಕಾಶ ಕಲ್ಪಿಸುವ ಕುರಿತು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ತಿಳಿಸಿದರು.

ಹಂಪಿ, ಮಹಾಬಲಿಪುರ, ಮೈಸೂರು, ಬೆಂಗಳೂರು, ಕೊಚ್ಚಿನ್, ಚಿಟ್ಟಿನಾಡುಗಳಂತಹ ಉತ್ತಮ ಪ್ರವಾಸಿ ಕೇಂದ್ರಗಳನ್ನು ಸಂಪರ್ಕಿಸುವ ರೂಟ್ ತಯಾರಿಸಿದ್ದೇವೆ. ನಾಲ್ಕು ದಿನ ಪ್ರವಾಸ ಮಾಡುವ ‘ಡ್ರೀಮ್ಸ್ ಆಫ್ ಕರ್ನಾಟಕ’ ಪ್ರವಾಸಿ ಯೋಜನೆ ಕೂಡ ಸಿದ್ಧವಾಗಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ನೀಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಕೆ.ಜೆ.ಜಾರ್ಜ್, ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಡಾ। ರಾಮ್ ಪ್ರಸಾತ್ ಮನೋಹರ್ ಉಪಸ್ಥಿತರಿದ್ದರು.

-ಬಾಕ್ಸ್-

ಮೊದಲ ಪ್ರಯಾಣದ

ಟಿಕೆಟ್ ಪೂರ್ಣ ಮಾರಾಟ

ರಾಜ್ಯದಲ್ಲಿ 2026-27ರ ಸಾಲಿನ ರಾಜ್ಯದ ಹೆಮ್ಮೆಯ ರೈಲು ಗೋಲ್ಡನ್ ಚಾರಿಯಟ್‌ನ ಮೊದಲ ಪ್ರಯಾಣದ ಎಲ್ಲಾ ಟಿಕೆಟ್‌ಗಳು ಸಂಪೂರ್ಣವಾಗಿ ಮಾರಾಟ ಆಗಿವೆ ಎಂದು ಪ್ರವಾಸೋದ್ಯಮ ಇಲಾಖೆ ತಿಳಿಸಿದೆ.

ಬೆಳಗ್ಗೆ 11ಕ್ಕೆ ಹೊರಟ ವಿಶೇಷ ರೈಲು 5 ರಾತ್ರಿ ಮತ್ತು 6 ದಿನಗಳ ‘ಪ್ರೈಡ್ ಆಫ್ ಕರ್ನಾಟಕ’ ಪ್ರಯಾಣ. ಇಡೀ‌ ರೈಲಿನಲ್ಲಿ ಒಟ್ಟು 75 ಜನ ಪ್ರಯಾಣಿಕರು ಮಾತ್ರ ಪ್ರಯಾಣಿಸುವ ವ್ಯವಸ್ಥೆ ಮಾಡಲಾಗಿದೆ. ರೈಲಿನೊಳಗೆ ಜಿಮ್, ಬಾರ್, ಸ್ಪಾ, ಬೆಡ್ ರೂಮ್ ಸೇರಿ ಮೂರು ರೆಸ್ಟೋರೆಂಟ್‌ಗಳಿವೆ. ಬೆಂಗಳೂರಿನಿಂದ ಹೊರಟು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಮೈಸೂರು, ಬೇಲೂರು, ಹಳೇಬೀಡು, ಚಿಕ್ಕಮಗಳೂರು, ಹಂಪಿ ಮತ್ತು ಗೋವಾಕ್ಕೆ ಭೇಟಿ ನೀಡಲಿದೆ.

ಪ್ರತಿ ಪ್ರಯಾಣಿಕರಿಗೆ ₹3.5 ಲಕ್ಷದಿಂದ ₹4.4 ಲಕ್ಷದವರೆಗೆ ನಿಗದಿ ಮಾಡಲಾಗಿದ್ದು, 13 ಡಬಲ್ ಬೆಡ್ ಕ್ಯಾಬಿನ್‌ ಹೊಂದಿರುವ ರೈಲಿನಲ್ಲಿ 26 ಟ್ವಿನ್ ಬೆಡ್ ಕ್ಯಾಬಿನ್‌ ಹಾಗೂ ಅಂಗವಿಕಲರಿಗಾಗಿ ಒಂದು ವಿಶೇಷ ಕ್ಯಾಬಿನ್ ಇದೆ.

ಸೀಟುಗಳ, ಹೊಸ ಪೀಠೋಪಕರಣಗಳನ್ನು ಅಳವಡಿಸಲಾಗಿದ್ದು, ಮರದ ಮೇಲ್ಮೈಗಳಿಗೆ ಪಾಲಿಶ್ ಮಾಡಿದ್ದು, ಉನ್ನತ ದರ್ಜೆಯ ಹಾಸಿಗೆ, ಹೊದಿಕೆ ಹಾಗೂ ಆಧುನಿಕ ಶೈಲಿಯ ಬಾತ್‌ರೂಮ್ ಸೌಲಭ್ಯಗಳು ರೈಲಿನ ಸೌಂದರ್ಯ ಹೆಚ್ಚಿಸಿವೆ.

ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಪ್ರತಿ ಬೋಗಿಯಲ್ಲೂ ಸಿಸಿಟಿವಿ ಕ್ಯಾಮೆರಾ, ಸುಧಾರಿತ ಅಗ್ನಿ ಸುರಕ್ಷತಾ ವ್ಯವಸ್ಥೆ ಹಾಗೂ ವೃತ್ತಿಪರ ಆತಿಥ್ಯ ನೀಡಲಾಗುವುದು.

----

ಚಿತ್ರ ಶೀರ್ಷಿಕೆ:

ರಾಜ್ಯದ ಐಷಾರಾಮಿ ಪ್ರವಾಸಿ ರೈಲು ಗೋಲ್ಡನ್ ಚಾರಿಯೇಟ್‌ಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಇಂಧನ ಸಚಿವ ಕೆ.ಜೆ.ಜಾರ್ಜ್ ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿದರು.

ಪ್ರವಾಸೋದ್ಯಮ ಇಲಾಖೆಯ ಕರ್ನಾಟಕ ದರ್ಶನ ಯೋಜನೆ ಈ ಮಧ್ಯೆ ನಿಂತು ಹೋಗಿತ್ತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಚಿವ ಕೆ.ಜೆ.ಜಾರ್ಜ್ ಅವರು ಜವಾಬ್ದಾರಿ ತೆಗೆದುಕೊಂಡು, ಅದಕ್ಕೆ ಹೊಸ ರೂಪ ಕೊಟ್ಟು ಪ್ರತಿಷ್ಠಿತ ''''''''ಗೋಲ್ಡನ್ ಚಾರಿಯಟ್'''''''' ಆರಂಭಿಸಿದ್ದಾರೆ. ಹೊಸ ಪ್ರವಾಸಿ ಮಾರ್ಗಗಳನ್ನು ನಿಗದಿ ಮಾಡಿ, ಐಷಾರಾಮಿ ಸೌಲಭ್ಯಗಳನ್ನು ನೀಡಿದೆ. ಈಗಾಗಲೇ 75 ಮಂದಿ ಪ್ರಯಾಣ ಮಾಡುತ್ತಿದ್ದಾರೆ ಎಂದು ತಿಳಿಸಿದರು. ರಾಜ್ಯ ಪ್ರವಾಸೋದ್ಯಮ ಇಲಾಖೆ, ಭಾರತೀಯ ರೈಲ್ವೆ ಹಾಗೂ ಐಆರ್‌ಸಿಟಿಸಿ ಸಹಯೋಗದಲ್ಲಿ ಗೋಲ್ಡನ್ ಚಾರಿಯಟ್‌ ರೈಲಿನ ಸೇವೆ ಅಭಿವೃದ್ಧಿಪಡಿಸಲಾಗುತ್ತಿದೆ. ಈ ವ್ಯವಸ್ಥೆಯಿಂದ ಪ್ರವಾಸಿಗರಿಗೆ ಅನುಕೂಲವಾಗುವ ಜೊತೆ ಪ್ರವಾಸಿ ತಾಣಗಳ ಹೋಟೆಲ್‌ ಉದ್ಯಮ ಸೇರಿ ಸ್ಥಳೀಯ ಆರ್ಥಿಕ ಚಟುವಟಿಕೆಗಳಿಗೂ ಉತ್ತೇಜನ ದೊರೆಯಲಿದೆ ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾಂಜಾದಾರದ ವಿರುದ್ಧ ಮುಂದುವರಿದ ಪೊಲೀಸರ ಸಮರ
ಒಂದೇ ಮಳೆಗೆ ಒಳಚರಂಡಿ ಅವ್ಯವಸ್ಥೆ ಬಯಲು!