ಹಿರೇಕೆರೂರು: ಭಾರತದ ಸ್ವಾತಂತ್ರ್ಯಕ್ಕೆ ಶ್ರಮಿಸಿದ ಹಾವೇರಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಬಲಿದಾನವನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಹೊಣೆಗಾರಿಕೆ ಪ್ರಜ್ಞಾವಂತರ ಮೇಲಿದೆ ಎಂದು ಸಾಕ್ಷ್ಯಚಿತ್ರ ನಿರ್ದೇಶಕ ಅರಳಿಕಟ್ಟಿ ಗೂಳಪ್ಪ ಹೇಳಿದರು.ತಾಲೂಕಿನ ಹಂಸಭಾವಿ ಪಟ್ಟಣದಲ್ಲಿ ಭಾರತ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣಾರ್ಥ ಗ್ರಾಮ ಸ್ವರಾಜ್ ಅಭಿಯಾನ, ಗ್ರಾಮ ಪಂಚಾಯತ್ ಹಂಸಭಾವಿ, ಶ್ರೀ ಮೃತ್ಯುಂಜಯ ವಿದ್ಯಾಪೀಠದ ಸಹಯೋಗದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟಗಾರ ಟಿ.ಆರ್. ನೆಶ್ವಿ ಅವರ 126ನೇ ಜನ್ಮ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ನಮ್ಮ ಹಾವೇರಿ ಜಿಲ್ಲೆಯಲ್ಲಿ ಸುಮಾರು ಆರುನೂರಕ್ಕೂ ಹೆಚ್ಚು ಸ್ವಾತಂತ್ರ್ಯ ಹೋರಾಟಗಾರರು ದೇಶದ ಸ್ವಾತಂತ್ರ್ಯಕ್ಕೆ ತಮ್ಮ ಬದುಕನ್ನು ಮುಡಿಪಿಟ್ಟಿರುವರು. ದುರದೃಷ್ಟವಶಾತ್ ಸ್ಥಳೀಯ ಹೋರಾಟಗಾರರ ಕುರಿತು ವಿದ್ಯಾರ್ಥಿ ಹಾಗೂ ಯುವ ಸಮೂಹಕ್ಕೆ ಅರಿವು ಮೂಡಿಸುವುದರಲ್ಲಿ ಎಡವಿದ್ದೇವೆ. ನಮ್ಮ ನೆಲದ ಚಳವಳಿಗಾರರ ನಿಸ್ವಾರ್ಥ ದೇಶಪ್ರೇಮವನ್ನು ಪರಿಚಯಿಸುವ ಮೂಲಕ ಅವರನ್ನು ಸ್ಮರಿಸಬೇಕಿದೆ. ಜೊತೆಗೆ ಹಿರೇಕೆರೂರ ಭಾಗದಲ್ಲಿ ರೈತ ಚಳವಳಿಗಳಿಂದ ಬ್ರಿಟಿಷರ ನಿದ್ರೆಗೆಡಿಸಿದ ಟಿ.ಆರ್.ನೆಶ್ವಿ ನಮಗೆ ಸದಾ ಪ್ರೇರಣೆ ಎಂದರು.ಸಮಾರಂಭ ಉದ್ಘಾಟಿಸಿದ ಗ್ರಾಮ ಸ್ವರಾಜ್ ಅಭಿಯಾನದ ಸಂಚಾಲಕ ಆವರಗೆರೆ ರುದ್ರಮುನಿ ಮಾತನಾಡಿ, ಧಾರವಾಡ ದಕ್ಷಿಣ ಭಾಗದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಹುರುಪು ತುಂಬಿದ ಟಿ.ಆರ್. ನೆಶ್ವಿ ಹಿರೇಕೆರೂರ ಭಾಗವನ್ನು ಕರ್ನಾಟಕದ ಬಾರ್ಡೋಲಿಯನ್ನಾಗಿಸಿದರು. ಗ್ರಾಮ ಪಂಚಾಯತ್ ಮಟ್ಟದಲ್ಲಿ ಅಂಥ ಮಹನೀಯರ ಸ್ಮರಣೆ ಮಾದರಿ. ಈ ನಡೆ ಹಳ್ಳಿಹಳ್ಳಿಗಳಿಗೂ ವ್ಯಾಪಿಸಲಿ ಎಂದರು.ಮುಖಂಡ ಮೋಹನಗೌಡ ಪಾಟೀಲ ಮಾತನಾಡಿ, ಟಿ.ಆರ್. ನೆಶ್ವಿಯವರು ಧಾರವಾಡ ದಕ್ಷಿಣ ಭಾಗದಲ್ಲಿ ಎರಡು ಬಾರಿ ಸಂಸದರಾಗಿದ್ದರೂ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಅವರ ವ್ಯಕ್ತಿತ್ವ ಕುರಿತು ನಮ್ಮ ಹಿರಿಯರು ನಮಗೆ ಹೇಳುತ್ತಿದ್ದರು. ಚಿಕ್ಕವರಿದ್ದಾಗ ಅವರನ್ನು ನೋಡಿ ಬೆಳೆದಿದ್ದೇವೆ ಎಂಬುದೇ ನಮಗೆ ಅತೀವ ಹೆಮ್ಮೆಯ ಸಂಗತಿ ಎಂದರು.ಪ್ರಭುಸ್ವಾಮಿ ಹಾಲೇವಾಡಿಮಠ, ಶಶಿಕಲಾ ಅಬಲೂರು ಮಾತನಾಡಿದರು. ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಭುಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಎನ್.ಎಸ್.ಪಾಟೀಲ, ಸೋಮಣ್ಣ ದೊಡ್ಡಹುಚ್ಚಗೊಂಡರ, ಸುಭಾಷ್ ನೆಶ್ವಿ, ರೇಣುಕಾ ನೆಶ್ವಿ, ಪ್ರಮೋದ ನೆಶ್ವಿ, ಸೌಭಾಗ್ಯ ಎಸ್., ಆರ್.ಉಷಾರಾಣಿ, ಮುತ್ತಣ್ಣ ಬಾಸೂರ, ಮಲ್ಲಿಕಾರ್ಜುನ ಭರಮಣ್ಣವರ, ಗಿರೀಶ ಬಾರ್ಕಿ, ಸುಭಾಷ್ ಮಡಿವಾಳರ ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು.ಡಾ. ಎಸ್. ಹನುಮಂತಪ್ಪ ಕಾರ್ಯಕ್ರಮ ನಿರ್ವಹಿಸಿದರು.