ಶಿರಸಿ: ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಅಕ್ರಮ ಚಟುವಟಿಕೆಗಳು ಇತ್ತೀಚಿನ ದಿನಗಳಲ್ಲಿ ಜೋರಾಗತೊಡಗಿದ್ದು, ಚಿಕ್ಕ ಮಕ್ಕಳು ನಗರ ಪ್ರದೇಶದಿಂದ ಮದ್ಯ ಖರೀದಿಸಿ ಹಳ್ಳಿಗಳ ರಸ್ತೆ ಹಾಗೂ ಅರಣ್ಯ ಪ್ರದೇಶದಲ್ಲಿ ಮದ್ಯ ಸೇವಿಸುವ ಪ್ರಕರಣ ಹೆಚ್ಚಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕಿದ್ದ ಇಲಾಖೆ ಕಣ್ಮುಚ್ಚಿ ಕುಳಿತಿರುವುದಕ್ಕೆ ಆಕ್ಷೇಪ ವ್ಯಕ್ತವಾಗುತ್ತಿದೆ.
ನಗರದಲ್ಲಿರುವ ಬಾರ್ ಆಂಡ್ ರೆಸ್ಟೋರೆಂಟ್‌ಗಳಲ್ಲಿ ಅಪ್ರಾಪ್ತರು ಮದ್ಯ ಖರೀದಿಸಿ, ಗ್ರಾಮೀಣ ಭಾಗಗಳ ರಸ್ತೆ, ಅರಣ್ಯ ಪ್ರದೇಶದ ಖಾಲಿ ಜಾಗದಲ್ಲಿ ಕುಳಿತು ಮದ್ಯ ಸೇವಿಸಿ ಮೋಜು-ಮಸ್ತಿ ಮಾಡುತ್ತಿದ್ದಾರೆ. ಇದರಿಂದ ಅರಣ್ಯ ಪ್ರದೇಶದಲ್ಲಿ ಎಲ್ಲೆಂದರಲ್ಲಿ ಮದ್ಯದ ಖಾಲಿ ಬಾಟಲಿಗಳು ರಾರಾಜಿಸುತ್ತಿವೆ. ಹಗಲಿನಲ್ಲಿಯೇ ರಾಜಾರೋಷವಾಗಿ ಮದ್ಯ ಸೇವಿಸಿ ಅಸಭ್ಯವಾಗಿ ವರ್ತಿಸುತ್ತಿರುವುದರಿಂದ ಹಳ್ಳಿಗಳಲ್ಲಿ ಮಹಿಳೆಯರು, ಮಕ್ಕಳು ಓಡಾಡಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ಕೆಲ ಕಡೆಗಳಲ್ಲಿ ಮದ್ಯದ ಬಾಟಲಿ, ಪ್ಯಾಕೆಟ್‌ಗಳ ರಾಶಿಯೇ ತುಂಬಿ ತುಳುಕುತ್ತಿವೆ. ಹಿಂದೆ ನಗರ ಭಾಗಕ್ಕೆ ಸಿಮೀತವಾಗಿದ್ದ ಇಂತಹ ಚಟುವಟಿಕೆಗಳು ಗ್ರಾಮೀಣ ಭಾಗದಲ್ಲಿಯೇ ಹೆಚ್ಚಾಗುತ್ತಿರುವುದರಿಂದ ಹಳ್ಳಿಗಳ ಪರಿಸರ ಹಾಳಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಪೊಲೀಸ್ ಹಾಗೂ ಅಬಕಾರಿ ಇಲಾಖೆಯು ಜಂಟಿ ಕಾರ್ಯಾಚರಣೆ ನಡೆಸಿ, ಗ್ರಾಮೀಣ ಭಾಗಗಳಲ್ಲಿ ನಡೆಯುವ ಅಕ್ರಮ ಹಾಗೂ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಮುಂದಾಗಬೇಕು ಎಂದು ಆಗ್ರಹಿಸುತ್ತಿದ್ದಾರೆ,ಮಲೆನಾಡಿನ ಹಳ್ಳಿಯಲ್ಲಿ ತೋಟದ ಭಾಗಯತ ಕ್ಷೇತ್ರಕ್ಕೆ 1 ಎಕರೆ ತೋಟಕ್ಕೆ 6 ಎಕರೆ ಮತ್ತು 1 ಎಕರೆಗೆ 9 ಎಕರೆ ಸೊಪ್ಪಿನ ಬೆಟ್ಟ ಬಿಟ್ಟಿದ್ದಾರೆ. ಬೆಟ್ಟದಲ್ಲಿ ಸೊಪ್ಪು, ದರಕು ಮಾತ್ರ ವಲ್ಲದೇ, ದನ-ಕರುಗಳನ್ನು ಮೇಯಿಸುತ್ತ ಬಂದಿರುವುದು ಹಿಂದಿನ ಕಾಲದ ಪದ್ಧತಿ. ಆದರೆ, ಕಾಲ ಕ್ರಮೇಣ ಹಳ್ಳಿಗರ ಸೊಪ್ಪಿನ ಬೆಟ್ಟ ಕುಡುಕರ ತಾಣವಾಗಿ ಮಾರ್ಪಾಡಾಗಿದೆ. ಎಲ್ಲೆಂದರಲ್ಲಿ ಬಿಯರ್ ಬಾಟಲಿಗಳು ಮದ್ಯದ ಪ್ಯಾಕೆಟ್‌ಗಳನ್ನೂ ಕುಡಿದು ಎಸೆದು ಹೋಗುತ್ತಾರೆ. ನಾವು ಬೆಟ್ಟಕ್ಕೆ ವಿವಿಧ ಕೆಲಸಕ್ಕೆ ಹೋದರೆ ಕಾಣಸಿಗುವುದೇ ಮದ್ಯದ ಪ್ಯಾಕೆಟ್‌ಗಳಾಗಿವೆ. ಗ್ರಾಮೀಣ ಭಾಗದಲ್ಲಿ ಅಕ್ರಮ ಮದ್ಯ ಮಾರಾಟವೂ ಎಗ್ಗಿಲ್ಲದೇ ನಡೆಯುತ್ತಿರುವ ಪರಿಣಾಮ ನಮ್ಮ ಬೆಟ್ಟದಲ್ಲಿ ದನ ಕರುಗಳನ್ನು ಮೇಯಿಸಲು ಬಿಡುವುದು ದೊಡ್ಡ ತಲೆನೋವಾಗಿದೆ. ಮೇಯಿಸಲು ಬಿಟ್ಟರೆ ದನ ಕರುಗಳು ಮದ್ಯದ ಪ್ಯಾಕೆಟ್ ಮತ್ತು ಪ್ಲಾಸ್ಟಿಕ್ ಬಾಟಲಿಗಳನ್ನು ತಿನ್ನುತ್ತಿವೆ. ಪ್ಲಾಸ್ಟಿಕ್ ಸೇವಿಸಿದ ಜಾನುವಾರುಗಳು ರೋಗಕ್ಕೆ ತುತ್ತಾಗುತ್ತಿವೆ. ಕೆಲ ಭಾಗದಲ್ಲಿ ಇಂತಹ ಪ್ಲಾಸ್ಟಿಕ್ ಸೇವಿಸಿ, ಜಾನುವಾರುಗಳು ಮೃತಪಟ್ಟ ಉದಾರಣೆಯೂ ಇದೆ. ಗ್ರಾಮೀಣ ಭಾಗದಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆ ನಿಯಂತ್ರಣಕ್ಕೆ ಪೋಲಿಸ್ ಮತ್ತು ಅಬಕಾರಿ ಇಲಾಖೆಯು ಕಣ್ಗಾವಲು ಇಡಬೇಕು ಎಂದು ಗ್ರಾಮೀಣ ಜನತೆ ಒತ್ತಾಯಿಸುತ್ತಿದ್ದಾರೆ.ತಾಲೂಕಿನ ಗ್ರಾಮೀಣ ಭಾಗದ ಪ್ರವಾಸಿ ತಾಣಗಳಿಲ್ಲಿಯೂ ಮದ್ಯದ ಹಾವಳಿ ಹೆಚ್ಚಾಗ ತೊಡಗಿದ್ದು, ಮಳೆಗಾಲವಾದ್ದರಿಂದ ಪ್ರವಾಸಿಗರ ಸಂಖ್ಯೆ ಕಡಿಮೆ ಇರುವ ಕಾರಣ ಮದ್ಯ ವ್ಯಸನಿಗಳಿಗೆ ಬಹಳ ಅನುಕೂಲವಾಗಿದೆ. ಬೆಳಿಗ್ಗೆಯಿಂದ ಸಂಜೆ ವರೆಗೂ ಅಲ್ಲಿಯೇ ಇದ್ದು ಸಾರಾಯಿ ಸೇವನೆ ಮಾಡಿ ಅಲ್ಲಿನ ಪರಿಸರವನ್ನು ಹಾಳುಮಾಡುತ್ತಿದ್ದಾರೆ. ಸ್ಥಳೀಯರು ಪ್ರಶ್ನಿಸಿದರೆ ಇಲ್ಲಸಲ್ಲದ ಮಾತನ್ನಾಡುತ್ತಾರೆ. ಪೊಲೀಸರಿಗೆ ತಿಳಿಸಿದರೆ ಅವರು ಬರುವುದರ ಒಳಗಡೆ ಇಲ್ಲಿಂದ ಜಾಗ ಖಾಲಿ ಮಾಡುತ್ತಾರೆ. ಪ್ರಮುಖ ಪ್ರವಾಸಿ ತಾಣಗಳಲ್ಲಿ ಸ್ಥಳೀಯ ಗ್ರಾಪಂ ಸಿಬ್ಬಂದಿ ನೇಮಿಸಿ, ಇಂತಹ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಿದೆ.ಹಳ್ಳಿಗರ ಸೊಪ್ಪಿನ ಬೆಟ್ಟ ಕುಡುಕರ ತಾಣವಾಗಿ ಮಾರ್ಪಾಡಾಗಿದ್ದು, ತೋಟಕ್ಕೆ ಬೇಕಾದ ಸೊಪ್ಪು ಮತ್ತು ದರಕಿಗೆ ಬೆಟ್ಟಕ್ಕೆ ಹೋದರೆ ಮದ್ಯದ ಪ್ಯಾಕೆಟ್ ಸಿಗುತ್ತದೆ ಹೊರತು ಬೇರೇನೂ ಸಿಗಲಾರದು. ಬೀಟ್ ಪೊಲೀಸರು ಹಾಗೂ ಅಬಕಾರಿ ಇಲಾಖೆ ಹಳ್ಳಿಗಳಲ್ಲಿ ಕಣ್ಗಾವಲು ಇಡಬೇಕು. ಹಳ್ಳಿಗರ ಸೊಪ್ಪಿನ ಬೆಟ್ಟದಲ್ಲಿ ಯಾವುದೇ ಕಾರಣಕ್ಕೂ ಅಕ್ರಮ ಚಟುವಟಿಕೆಗಳಿಗೆ ಆಸ್ಪದ ನೀಡಬಾರದು ಎನ್ನುತ್ತಾರೆ ಭೈರುಂಬೆ ಗ್ರಾಪಂ ಸದಸ್ಯ ಪ್ರಕಾಶ ಹೆಗಡೆ.