ವಿಫಲತೆಯಿಂದ ಕುಗ್ಗದೆ ನಿರಂತರ ಪ್ರಯತ್ನವೇ ಯಶಸ್ಸಿನ ಗುಟ್ಟು

KannadaprabhaNewsNetwork |  
Published : Oct 02, 2026, 03:00 AM IST
ಪೊಟೋ ಸೆ.30ಎಂಡಿಎಲ್ 1ಎ, 1ಬಿ, 1ಸಿ. ಮುಧೋಳ ಎಸ್.ಆರ್.ಕಂಠಿ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗಾಗಿ ಐಎಎಸ್, ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ದತಾ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಮುಧೋಳಕಠಿಣ ಪರಿಶ್ರಮ, ನಿರಂತರ ಅಧ್ಯಯನ ಹಾಗೂ ಸೋಲಿನಿಂದ ಕುಗ್ಗದೆ ಮತ್ತೆ ಮತ್ತೆ ಪ್ರಯತ್ನಿಸುವ ಮನೋಭಾವವೇ ಸ್ಪರ್ಧಾತ್ಮಕ ಪರೀಕ್ಷೆಗಳ ಯಶಸ್ಸಿನ ಪ್ರಮುಖ ಗುಟ್ಟು ಎಂದು ಯುಪಿಎಸ್‌ಸಿ ಪರೀಕ್ಷೆಯಲ್ಲಿ 389ನೇ ರ‍್ಯಾಂಕ್ ಪಡೆದು ಆಯ್ಕೆಯಾಗಿರುವ ಹಾಸನ ಜಿಲ್ಲೆಯ ಸಕಲೇಶಪುರದ ಯುವಕ ಮನೋಜ್ ಜಿ.ಎಸ್. ಹೇಳಿದರು.

ಕನ್ನಡಪ್ರಭ ವಾರ್ತೆ ಮುಧೋಳ

ಕಠಿಣ ಪರಿಶ್ರಮ, ನಿರಂತರ ಅಧ್ಯಯನ ಹಾಗೂ ಸೋಲಿನಿಂದ ಕುಗ್ಗದೆ ಮತ್ತೆ ಮತ್ತೆ ಪ್ರಯತ್ನಿಸುವ ಮನೋಭಾವವೇ ಸ್ಪರ್ಧಾತ್ಮಕ ಪರೀಕ್ಷೆಗಳ ಯಶಸ್ಸಿನ ಪ್ರಮುಖ ಗುಟ್ಟು ಎಂದು ಯುಪಿಎಸ್‌ಸಿ ಪರೀಕ್ಷೆಯಲ್ಲಿ 389ನೇ ರ‍್ಯಾಂಕ್ ಪಡೆದು ಆಯ್ಕೆಯಾಗಿರುವ ಹಾಸನ ಜಿಲ್ಲೆಯ ಸಕಲೇಶಪುರದ ಯುವಕ ಮನೋಜ್ ಜಿ.ಎಸ್. ಹೇಳಿದರು.

ನಗರದ ಎಸ್.ಆರ್.ಕಂಠಿ ಮಹಾವಿದ್ಯಾಲಯದ ಐಕ್ಯೂಎಸಿ ಉಪಕ್ರಮದಡಿ ಸ್ಪರ್ಧಾತ್ಮಕ ಪರೀಕ್ಷಾ ಮಾರ್ಗದರ್ಶನ ಘಟಕ ಹಾಗೂ ಬೆಂಗಳೂರಿನ ಸ್ಪರ್ಧಾ ಭಾರತಿ ಐಎಎಸ್ ಅಕಾಡೆಮಿ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ‘ಐಎಎಸ್ ಮತ್ತು ಕೆಎಎಸ್ ತಯಾರಿಯಿಂದ ಯಶಸ್ಸಿನತ್ತ’ ಒಂದು ದಿನದ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಅವರು ಮಾತನಾಡಿದರು.

ತಮ್ಮ ಯುಪಿಎಸ್‌ಸಿ ಯಶಸ್ಸಿನ ಅನುಭವ ಹಂಚಿಕೊಂಡ ಮನೋಜ್, ನಾಲ್ಕನೇ ಪ್ರಯತ್ನದಲ್ಲಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು, ಮೊದಲ ಮೂರು ಪ್ರಯತ್ನಗಳಲ್ಲಿ ಯಶಸ್ಸು ದೊರೆಯದಿದ್ದರೂ ನಿರಾಶರಾಗದೆ ಮುಂದುವರಿದಿದ್ದಾಗಿ ತಿಳಿಸಿದರು. ಪ್ರತಿಯೊಂದು ವಿಫಲತೆಯೂ ಮುಂದಿನ ಯಶಸ್ಸಿಗೆ ಪಾಠವಾಗಬೇಕು. ಆತ್ಮವಿಶ್ವಾಸ ಕಳೆದುಕೊಳ್ಳದೆ ನಿರಂತರ ಪರಿಶ್ರಮಿಸುವುದು ಅತ್ಯಗತ್ಯ ಎಂದರು.

7ನೇ ತರಗತಿಯಲ್ಲಿ ಓದುತ್ತಿದ್ದಾಗ ತಾಯಿಯನ್ನು ಕಳೆದುಕೊಂಡಿದ್ದು, ಬಡತನದ ಹಿನ್ನೆಲೆಯಿಂದ ಬಂದಿದ್ದರೂ ಗುರಿಯತ್ತ ಸಾಗಿದ ತಮ್ಮ ಜೀವನಯಾನವನ್ನು ವಿವರಿಸಿದ ಅವರು, “ಸಂಕಷ್ಟಗಳು ನಮ್ಮನ್ನು ಹಿಮ್ಮೆಟ್ಟಿಸಲು ಅಲ್ಲ, ಮತ್ತಷ್ಟು ಬಲಪಡಿಸಲು ಬರುತ್ತವೆ. ಗುರಿ ಸ್ಪಷ್ಟವಾಗಿದ್ದರೆ ಯಾವುದೇ ಅಡೆತಡೆ ಸಾಧನೆಗೆ ಅಡ್ಡಿಯಾಗುವುದಿಲ್ಲ” ಎಂದು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು.

ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಯಲ್ಲಿ ಸಮಯ ನಿರ್ವಹಣೆ, ಸಮರ್ಪಕ ಅಧ್ಯಯನ ಕ್ರಮ, ಹಿಂದಿನ ಪ್ರಶ್ನೆಪತ್ರಿಕೆಗಳ ವಿಶ್ಲೇಷಣೆ ಹಾಗೂ ಸಂದರ್ಶನವನ್ನು ಆತ್ಮವಿಶ್ವಾಸದಿಂದ ಎದುರಿಸುವ ವಿಧಾನಗಳ ಕುರಿತು ಅವರು ಮಾರ್ಗದರ್ಶನ ನೀಡಿದರು.

ಪುಸ್ತಕ ಜ್ಞಾನದ ಜೊತೆಗೆ ವ್ಯಕ್ತಿತ್ವ ವಿಕಸನ, ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಹಾಗೂ ಸ್ಪಷ್ಟ ಚಿಂತನೆ ಮುಖ್ಯ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುವ ವಿದ್ಯಾರ್ಥಿಗಳಿಗೆ ಗ್ರಂಥಾಲಯ ಅತ್ಯಮೂಲ್ಯ ಸಂಪನ್ಮೂಲವಾಗಿದ್ದು, ಪುಸ್ತಕಗಳು, ದಿನಪತ್ರಿಕೆಗಳು ಹಾಗೂ ವಿವಿಧ ಮಾಹಿತಿಯ ಮೂಲಗಳನ್ನು ಬಳಸಿಕೊಳ್ಳಬೇಕು. ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಮಯ ವ್ಯರ್ಥ ಮಾಡುವ ಬದಲು ಗ್ರಂಥಾಲಯದಲ್ಲಿ ಏಕಾಗ್ರತೆಯಿಂದ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಂಪನ್ಮೂಲ ವ್ಯಕ್ತಿ ರಾಜು ಕಲ್ಯಾಣಕರ್ ಐಎಎಸ್ ಸಂದರ್ಶನದ ಕುರಿತು ಮಾತನಾಡಿ, ಸಂದರ್ಶನವು ಕೇವಲ ಜ್ಞಾನ ಪರೀಕ್ಷೆಯಲ್ಲ. ಅಭ್ಯರ್ಥಿಯ ವ್ಯಕ್ತಿತ್ವ, ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಹಾಗೂ ಪರಿಸ್ಥಿತಿಯನ್ನು ಎದುರಿಸುವ ಮನೋಭಾವವನ್ನೂ ಪರೀಕ್ಷಿಸುವ ಹಂತವಾಗಿದೆ ಎಂದು ವಿವರಿಸಿದರು.

ಪ್ರಾಚಾರ್ಯ ಡಾ.ಮಲ್ಲಿಕಾರ್ಜುನ ಆರ್.ಜರಕುಂಟಿ ಮಾತನಾಡಿ, ಮಹಾವಿದ್ಯಾಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ದೊಡ್ಡ ಗುರಿಗಳನ್ನು ಹೊಂದಿ, ಇಂತಹ ಕಾರ್ಯಾಗಾರಗಳ ಸದುಪಯೋಗ ಪಡೆದುಕೊಂಡು ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು. ಮನೋಜ್ ಜಿ.ಎಸ್. ಹಾಗೂ ರಾಜು ಕಲ್ಯಾಣಕರ್ ಅವರಂತಹ ಯುವ ಅಧಿಕಾರಿಗಳ ಅನುಭವಗಳು ವಿದ್ಯಾರ್ಥಿಗಳಿಗೆ ದಿಕ್ಸೂಚಿಯಾಗಲಿವೆ ಎಂದರು.

ಸ್ಪರ್ಧಾತ್ಮಕ ಪರೀಕ್ಷಾ ಮಾರ್ಗದರ್ಶನ ಘಟಕದ ಅಧ್ಯಕ್ಷ ಹಾಗೂ ಗ್ರಂಥಪಾಲಕ ಡಾ.ಚಿರಂಜೀವಿ ಎಲ್.ಎಂ. ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ.ಪಿ.ಡಿ.ಕುಂಬಾರ ನಿರೂಪಿಸಿದರು. ಪ್ರೊ.ಸುರೇಶ ಶಿಂಧೆ ವಂದಿಸಿದರು.

ಐಕ್ಯೂಎಸಿ ಸಂಯೋಜಕ ಪ್ರೊ.ಎ.ಆರ್.ಕಡೂರು, ಸ್ಪರ್ಧಾ ಭಾರತಿ ಐಎಎಸ್ ಅಕಾಡೆಮಿಯ ಅಧ್ಯಕ್ಷ ಮಂಜು ಕುಲಗೋಡ ಸೇರಿದಂತೆ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳಿಗೆ ಗೂಗಲ್‌ ಗುರುವಿನ ಜ್ಞಾನ ಅಗತ್ಯ
ಮಾರಿಹಾಳ ಪಿಕೆಪಿಎಸ್‌ಗೆ ₹71.60 ಲಕ್ಷ ಲಾಭ