ಕನ್ನಡಪ್ರಭ ವಾರ್ತೆ ಬಸವಕಲ್ಯಾಣ
ಬಸವ ತತ್ವದ ಗಟ್ಟಿ ತಳಪಾಯದ ಮೇಲೆ ಸಮಾಜದ ಒಳತಿಗಾಗಿ ಪ್ರತಿ ಮನಸ್ಸು ಕೂಡ ಬಸವಾನುಭೂತಿ ಪಡೆಯಬೇಕೆಂಬ ನಿಶ್ಚಲ ನಿಲುವಿನೊಂದಿಗೆ ಅವಿರತ ಶ್ರಮ ಪಡುತ್ತಿರುವ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಸೇವೆ ಪ್ರಶಂಸನೀಯ ಎಂದು ಡಾ. ಚನ್ನವೀರ ಶಿವಾಚಾರ್ಯರು ನುಡಿದರು.ಹಾರಕೂಡ ಮಠದಲ್ಲಿ ಆಯೋಜಿಸಿದ ಬಸವಭಾನು ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಭಾಲ್ಕಿ ಪೂಜ್ಯರು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಲ್ಲಿಸಿದ ಅಮೋಘ ಸೇವೆ ಗುರುತಿಸಿ ಹಾರಕೂಡ ಮಠದಿಂದ ಬಸವಭಾನು ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ಬಸವ ಪ್ರಭುವಿನ ಚಿಂತನೆ ಬಸವದಿ ಶರಣರ ಸಂದೇಶವನ್ನು ನಾಡಿನಾದ್ಯಂತ ಬೆಳಗಿಸುವಲ್ಲಿ ವಿಶೇಷ ಸೇವೆಗೈಯುತ್ತಿರುವ ಪೂಜ್ಯರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯ ನಾಡೋಜ ಗೌರವ ನೀಡಿರುವುದು ತುಂಬಾ ಖುಷಿ ತಂದಿದೆ. ಭಾಲ್ಕಿ ಮಠದಿಂದ ಬಸವ ಸೇವೆ ನಿತ್ಯ ನಿರಂತರವಾಗಿ ಸಾಗುವಂತಾಗಿ ಜನತೆಯ ಬದುಕಿಗೆ ಬಸವ ಬೆಳಕು ಪ್ರಾಪ್ತವಾಗಲಿ ಎಂದು ನುಡಿದರು.ಬಸವಭಾನು ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ನಾಡೋಜ ಡಾ. ಬಸವಲಿಂಗ ಪಟ್ಟದೇವರು, ಕಲ್ಯಾಣ ಕರ್ನಾಟಕದಲ್ಲಿ ಹಾರಕೂಡ ಶ್ರೀಮಠ ವಿಶಿಷ್ಟವಾಗಿದ್ದು, ಶಿಸ್ತಿನ ಗರಡಿ ಮನೆಯಂತಿದೆ. ಹಾರಕೂಡ ಶ್ರೀಮಠ ಎಂದರೆ 21ನೇ ಶತಮಾನದ ಭಕ್ತಿಯ ಪರುಷ ಕಟ್ಟೆಯಾಗಿದೆ ಎಂದರು.
ಗುರುಬಸವ ಪಟ್ಟದ್ದೇವರು ನೇತೃತ್ವ ವಹಿಸಿ ಮಾತನಾಡಿದರು. ಡಾಕುಳಗಿ ಶ್ರೀಗಳು, ನಿವೃತ್ತ ನ್ಯಾಯಾಧೀಶರಾದ ಸುಭಾಷಚಂದ್ರ ನಾಗರಾಳೆ, ಬೀದರ್ ಜಿಪಂ ನಿವೃತ್ತ ಉಪ ಕಾರ್ಯದರ್ಶಿ ಬಿ.ಕೆ ಹೀರೆಮಠ, ವೈಜನಾಥ ಕಾಮಶಟ್ಟಿ, ಮಲ್ಲಿನಾಥ ಹಿರೇಮಠ ಹಾರಕೂಡ, ಬಾಬುಹೊನ್ನಾ ನಾಯಕ, ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ರಾಮಪ್ಪ ಗುದಗೆ, ವಿಜಯಕುಮಾರ ಸಂಗೊಳಗೆ, ಸುನೀತಾ ಚಲವಾರ, ಶರಣೆ ಸತ್ಯಕ್ಕ, ಸೂಜ್ಞಾನಿ ತಾಯಿ ಮನಗುಂಡಿ ಉಪಸ್ಥಿತರಿದ್ದರು.