ಸಮಾಜದ ಅಭಿವೃದ್ಧಿಯಲ್ಲಿ ಈಡಿಗ ಸಮುದಾಯದ ಸೇವೆ ಅಪಾರ: ಶ್ರೀರೇಣುಕಾನಂದಸ್ವಾಮಿ

KannadaprabhaNewsNetwork |  
Published : Jun 01, 2025, 02:36 AM IST
30ಕೆಎಂಎನ್ ಡಿ26 | Kannada Prabha

ಸಾರಾಂಶ

ಯಾವುದೇ ಒಂದು ಸಮುದಾಯ ಸರ್ವತೋಮುಖವಾಗಿ ಅಭಿವೃದ್ಧಿ ಸಾಧಿಸಬೇಕಾದರೆ ಸಂಘಟನೆ ಮುಖ್ಯವಾಗುತ್ತದೆ. ಈಡಿಗ ಸಮುದಾಯದಲ್ಲಿ ಜನ್ಮವೆತ್ತಿದ್ದ ನಾವು ಸಮುದಾಯಕ್ಕೆ ಏನು ಕೊಡುಗೆ ನೀಡುತ್ತಿದ್ದೇವೆ ಎಂದು ಚಿಂತನೆ ನಡೆಸಬೇಕು. ಉಳ್ಳವರು ಸಮುದಾಯದಲ್ಲಿ ನೊಂದವರ ಕಣ್ಣೀರು ಒರೆಸುವ ಕೆಲಸ ಮಾಡಬೇಕು. ಬಡತನದ ಬೇಗೆಯಲ್ಲಿ ಬಳಲುತ್ತಿರುವ ವ್ಯಕ್ತಿಗಳನ್ನು ಮೇಲೆತ್ತುವ ಕೆಲಸ ಮಾಡಬೇಕು.

ಕನ್ನಡಪ್ರಭ ವಾರ್ತೆ ಮದ್ದೂರು

ಸಮಾಜದ ಅಭಿವೃದ್ಧಿಯಲ್ಲಿ ಈಡಿಗರ ಸಮುದಾಯದ ಸೇವೆ ಅಪಾರವಾಗಿದೆ ಎಂದು ಶಿವಮೊಗ್ಗದ ನಾರಾಯಣಗುರು ಮಠದ ಪೀಠಾಧ್ಯಕ್ಷ ಶ್ರೀ ರೇಣುಕಾನಂದಸ್ವಾಮಿ ಶುಕ್ರವಾರ ಹೇಳಿದರು.

ಪಟ್ಟಣದ ಶಿವಪುರದ ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ತಾಲೂಕು ಆರ್ಯ ಈಡಿಗರ ನೂತನ ಸಂಘವನ್ನು ಉದ್ಘಾಟಿಸಿ ಮಾತನಾಡಿ, ಈಡಿಗರ ಸಮುದಾಯ ಯಾರಿಗೂ ಕೈ ಚಾಚಿ ಕೇಳುವುದಿಲ್ಲ. ತಮ್ಮ ದುಡಿಮೆಯಲ್ಲಿ ಗಳಿಸಿದ ಹಣದಲ್ಲಿ ಕಿಂಚಿತ್ತು ಹಣವನ್ನಾದರೂ ದಾನದ ರೂಪದಲ್ಲಿ ನೀಡುವಲ್ಲಿ ಸಮಾಜದ ಕೊಡುಗೆ ದೊಡ್ಡದಿದೆ ಎಂದರು.

ನಮ್ಮ ಸಮಾಜದಲ್ಲಿ ಹುಟ್ಟಿ ವಿಶ್ವದಲ್ಲಿ ಖ್ಯಾತಿ ಪಡೆದ ಚಲನಚಿತ್ರ ನಟ, ಪದ್ಮಭೂಷಣ ಡಾ. ರಾಜಕುಮಾರ್, ಅವರ ಪುತ್ರರಾದ ದಿ. ಪುನೀತ್ ರಾಜಕುಮಾರ್, ಶಿವರಾಜ್ ಕುಮಾರ್, ಮಾಜಿ ಮುಖ್ಯಮಂತ್ರಿ ದಿ.ಬಂಗಾರಪ್ಪ ಸೇರಿದಂತೆ ಅನೇಕರು ಸಮಾಜದಲ್ಲಿ ಹೆಸರು ಮಾಡಿದ್ದಾರೆ ಎಂದು ತಿಳಿಸಿದರು.

ಪುನೀತ್ ರಾಜಕುಮಾರ್ ಕೇವಲ ಚಿತ್ರ ನಟರಾಗಿ ಮಾತ್ರವಲ್ಲದೆ ಎಲ್ಲಾ ವರ್ಗದ ಜನರ ಧ್ವನಿಯಾಗಿ ಮೆರೆದಿದ್ದಾರೆ. ಅವರು ಮಾಡಿದ ಕೆಲಸಗಳಿಂದ ಇಂದಿಗೂ ಸಹ ಎಲ್ಲಾ ಸಮುದಾಯದ ಹೃದಯದಲ್ಲಿ ವಿರಾಜಮಾನವಾಗಿ ಮೆರೆದಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಯಾವುದೇ ಒಂದು ಸಮುದಾಯ ಸರ್ವತೋಮುಖವಾಗಿ ಅಭಿವೃದ್ಧಿ ಸಾಧಿಸಬೇಕಾದರೆ ಸಂಘಟನೆ ಮುಖ್ಯವಾಗುತ್ತದೆ. ಈಡಿಗ ಸಮುದಾಯದಲ್ಲಿ ಜನ್ಮವೆತ್ತಿದ್ದ ನಾವು ಸಮುದಾಯಕ್ಕೆ ಏನು ಕೊಡುಗೆ ನೀಡುತ್ತಿದ್ದೇವೆ ಎಂದು ಚಿಂತನೆ ನಡೆಸಬೇಕು. ಉಳ್ಳವರು ಸಮುದಾಯದಲ್ಲಿ ನೊಂದವರ ಕಣ್ಣೀರು ಒರೆಸುವ ಕೆಲಸ ಮಾಡಬೇಕು. ಬಡತನದ ಬೇಗೆಯಲ್ಲಿ ಬಳಲುತ್ತಿರುವ ವ್ಯಕ್ತಿಗಳನ್ನು ಮೇಲೆತ್ತುವ ಕೆಲಸ ಮಾಡಬೇಕು ಎಂದು ಶ್ರೀಗಳು ಕಿವಿಮಾತು ಹೇಳಿದರು.

ಈಡಿಗರ ಸಂಘದ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ವಾಸನ್ ಮಾತನಾಡಿ, 40 ರಿಂದ 50 ಲಕ್ಷ ಜನಸಂಖ್ಯೆ ಹೊಂದಿರುವ ಈಡಿಗ ಜನಾಂಗ ಜಾತಿಗಣತಿಯಲ್ಲಿ ನಾಲ್ಕರಿಂದ ಐದನೇ ಸ್ಥಾನ ಪಡೆದಿದ್ದಾರೆ. 26 ಪಂಗಡಗಳನ್ನು ಹೊಂದಿರುವ ನಾವು ಹಿಂದುಳಿದ ಜನಾಂಗ ಎಂದು ನಮೂದಿಸಬೇಕು. ಇದರಿಂದ ಭವಿಷ್ಯದಲ್ಲಿ ನಮ್ಮ ಮಕ್ಕಳ ಉದ್ಯೋಗ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಸಹಕಾರವಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಈಡಿಗ ಜನಾಂಗದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಉದ್ಯಮಿಗಳಾದ ಚಿತ್ರ ನಿರ್ಮಾಪಕ ಎಸ್.ಎ. ಚಿನ್ನೇಗೌಡ, ತಿಮ್ಮೇಗೌಡ, ಪೋತರಾಜು, ಕಳಿಂಗ ಶ್ರೀನಿವಾಸ್, ವಾಸನ್, ರಾಮೇಹಳ್ಳಿ ಪ್ರಕಾಶ್, ಬಿಬಿಎಂಪಿ ರಮೇಶ್, ಶಾಸಕ ಕೆ.ಎಂ. ಉದಯ್ ಸೇರಿದಂತೆ ಜನಾಂಗದ ಹಲವು ಉದ್ಯಮಿಗಳನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಮದ್ದೂರು ತಾಲೂಕು ಆರ್ಯ ಈಡಿಗರ ಸಂಘದ ಅಧ್ಯಕ್ಷ ಎ.ನಾರಾಯಣಸ್ವಾಮಿ ಅಣ್ಣೇಗೌಡ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಎಂ.ಎಲ್.ತಮ್ಮಯ್ಯ, ಈಡಿಗರ ಸಂಘದ ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯರಾದ ಸೌಮ್ಯ ಶ್ರೀನಿವಾಸ್, ಪದಾಧಿಕಾರಿಗಳಾದ ರಾಧಾ ನಾರಾಯಣಸ್ವಾಮಿ, ಬ್ಯಾಂಕ್ ಶ್ರೀನಿವಾಸ್, ಮೋಹನ್, ಶ್ರೀನಿವಾಸ್, ರಾಜೇಶ್, ಪುರುಷೋತ್ತಮ್, ಸುರೇಶ್, ಗೋವಿಂದ, ಲಕ್ಷ್ಮಣ್ ಮತ್ತು ತಾಪಂ ಮಾಜಿ ಉಪಾಧ್ಯಕ್ಷ ಎಚ್.ಜಿ.ರಾಮಚಂದ್ರ ಮತ್ತಿತರರು ಪಾಲ್ಗೊಂಡಿದ್ದರು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಶಿವಪುರ ಧ್ವಜ ಸತ್ಯಾಗ್ರಹ ಸೌಧದ ಬಳಿಯಿಂದ ಕಲ್ಯಾಣ ಮಂಟಪದವರೆಗೆ ಶ್ರೀ ನಾರಾಯಣ ಗುರುಗಳ ಭಾವಚಿತ್ರದ ಮೆರವಣಿಗೆ ನಡೆಯಿತು. ಸಮುದಾಯ ಭವನಕ್ಕೆ ನಿವೇಶನ ಒದಗಿಸಲು ಕ್ರಮ: ಕೆ.ಎಂ.ಉದಯ್

ಮದ್ದೂರು: ಈಡಿಗ ಸಂಘದ ಸಮುದಾಯ ಭವನ ನಿರ್ಮಾಣಕ್ಕೆ ಅಗತ್ಯ ನಿವೇಶನ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ಶಾಸಕ ಕೆ.ಎಂ. ಉದಯ್ ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿದ ಶಾಸಕರು ಮಾತನಾಡಿ, ಮದ್ದೂರು ಪಟ್ಟಣ ವ್ಯಾಪ್ತಿಯಲ್ಲಿ ಸರ್ಕಾರಿ ನಿವೇಶನಗಳನ್ನು ಗುರುತಿಸುವ ಕೆಲಸ ಪ್ರಗತಿಯಲ್ಲಿದೆ. ಈಡಿಗ ಸಂಘದ ಪದಾಧಿಕಾರಿಗಳು ಸಮುದಾಯ ಭವನ ನಿರ್ಮಾಣಕ್ಕೆ ಅರ್ಜಿ ಸಲ್ಲಿಸಿದರೆ ನಿವೇಶನ ನೀಡುವುದಾಗಿ ವಾಗ್ದಾನ ಮಾಡಿದರು.

PREV

Recommended Stories

ಕೂಡಲೇ ಹಳದಿ ಮಾರ್ಗ ಮೆಟ್ರೋ ಉದ್ಘಾಟನೆ ಮಾಡಿ : ತೇಜಸ್ವಿ ಆಗ್ರಹ
ಐದು ಸಾವಿರ ಕೋಟಿ ರು. ವೆಚ್ಚದ 5ನೇ ಹಂತದ ಕಾವೇರಿ ಯೋಜನೆಗೆ ಕೇವಲ 70 ಸಾವಿರ ಸಂಪರ್ಕ!