ಶಾಂತಿ ಸುವ್ಯವಸ್ಥೆ ಸ್ಥಾಪನೆಯಲ್ಲಿ ರೆಡ್ ಕ್ರಾಸ್ ಸೇವೆ ಅಪಾರ

KannadaprabhaNewsNetwork | Published : Aug 13, 2024 12:46 AM

ಸಾರಾಂಶ

ವೈದಕೀಯ ಕ್ಷೇತ್ರದಲ್ಲಿ ಬದಲಾವಣೆ ಮೂಡಿಸಲು ಹಾಗೂ ವಿಶ್ವದಲ್ಲಿ ಶಾಂತಿ ಸುವ್ಯವಸ್ಥೆ ಸ್ಥಾಪನೆಯಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಸೇವೆ ಅಪಾರವಾಗಿದ್ದು, ಅಂದಿನ ಜಿನೇವಾ ಒಪ್ಪಂದದಲ್ಲಿ ವಿಶ್ವಶಾಂತಿಗೆ ಹೆಚ್ಚು ಮಹತ್ವ ನೀಡಲಾಗಿದೆ ಎಂದು ನಿವೃತ್ತ ಮುಖ್ಯೋಪಾಧ್ಯಾಯ ಹಾಗೂ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಸಮಿತಿ ಸದಸ್ಯ ಹನಮಂತಗೌಡ ಗೊಲ್ಲರ ಹೇಳಿದರು.

ಹಾವೇರಿ:ವೈದಕೀಯ ಕ್ಷೇತ್ರದಲ್ಲಿ ಬದಲಾವಣೆ ಮೂಡಿಸಲು ಹಾಗೂ ವಿಶ್ವದಲ್ಲಿ ಶಾಂತಿ ಸುವ್ಯವಸ್ಥೆ ಸ್ಥಾಪನೆಯಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಸೇವೆ ಅಪಾರವಾಗಿದ್ದು, ಅಂದಿನ ಜಿನೇವಾ ಒಪ್ಪಂದದಲ್ಲಿ ವಿಶ್ವಶಾಂತಿಗೆ ಹೆಚ್ಚು ಮಹತ್ವ ನೀಡಲಾಗಿದೆ ಎಂದು ನಿವೃತ್ತ ಮುಖ್ಯೋಪಾಧ್ಯಾಯ ಹಾಗೂ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಸಮಿತಿ ಸದಸ್ಯ ಹನಮಂತಗೌಡ ಗೊಲ್ಲರ ಹೇಳಿದರು.ನಗರದ ಸಿಂದಗಿ ಶಾಂತವೀರೇಶ್ವರ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಜಿಲ್ಲಾ ಆಡಳಿತ ಹಾಗೂ ಜಿಲ್ಲಾ ಪಂಚಾಯಿತಿ, ಹಾವೇರಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಘಟಕ ಹಾಗೂ ಸಿಂದಗಿ ಶಾಂತವೀರೇಶ್ವರ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ (ಯುವ ರೆಡ್ ಕ್ರಾಸ್ ಘಟಕ) ಹಾವೇರಿ ಆಶ್ರಯದಲ್ಲಿ ಆಯೋಜಿಸಿದ ಜಿನೇವಾ ಕನ್ವೇಶನ್ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ರೆಡ್ ಕ್ರಾಸ್ ಸಂಸ್ಥೆಯ ಸ್ಥಾಪಕರಾದ ಹೆನ್ರಿ ಡ್ಯೂನಾಂಟ್ ಅವರು ಯುದ್ಧದಲ್ಲಿನ ಗಾಯಾಳುಗಳಿಗೆ ಚಿಕಿತ್ಸೆ ನೀಡಿ ಅವರನ್ನು ಆರೈಕೆ ಮಾಡಿ ಅವರ ಆರೋಗ್ಯ ಕಾಳಜಿ ಮಾಡಬೇಕು ಎಂಬ ಉದ್ದೇಶದಿಂದ ವಿಶ್ವದಲ್ಲಿ ಶಾಂತಿ ನೆಲಸಬೇಕು ಎಂಬ ಗುರಿ ಹೊಂದಿದ್ದರು. ಸಾಮಾಜಿಕ ಕಳಕಳಿಯಿಂದ ಜಿನೇವಾ ಒಪ್ಪಂದಗಳು ಏರ್ಪಟ್ಟು ವಿಶ್ವಶಾಂತಿ ಮಾಡುವ ಕೆಲಸ ಮುಂದೆ ನಡೆಯಿತು. ವಿಶ್ವದ ಶಾಂತಿಗೆ ಒಪ್ಪಂದಗಳು ಪ್ರೇರಕವಾಗಿವೆ. ಯುವ ಸಮೂಹ ದೇಶದ ಆಸ್ತಿಯಾಗಿದ್ದು, ದೇಶದ ಅಭಿವೃದ್ಧಿಗೆ ಶ್ರಮಿಸಬೇಕಿದೆ. ತಾವೆಲ್ಲರೂ ವೈದಕೀಯ ಕ್ಷೇತ್ರದಲ್ಲಿ ಮುಂದುವರಿಯಲಿದ್ದು, ಸಮಾಜ ಸೇವೆಯ ಮನೋಭಾವನೆ ಹೊಂದಿರಬೇಕು. ಅಂತಾರಾಷ್ಟ್ರೀಯ ರೆಡ್ ಕ್ರಾಸ್ ಸಂಸ್ಥೆಯ ಸ್ಥಾಪನೆಗೆ ಹಾಗೂ ವಿಶ್ವಶಾಂತಿ ಸ್ಥಾಪನೆಗೆ ಜಿನೇವಾ ಒಪ್ಪಂದಗಳು ಹೇಗೆ ಮಹತ್ವ ಪಡೆದಿವೆ ಎಂಬುದರ ಬಗ್ಗೆ ತಮ್ಮ ಉಪನ್ಯಾಸದಲ್ಲಿ ತಿಳಿಸಿದರು.ರೆಡ್ ಕ್ರಾಸ್ ಸಂಸ್ಥೆಯ ರಾಜ್ಯ ಸಮಿತಿ ಸದಸ್ಯ ರವಿ ಮೆಣಸಿನಕಾಯಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜ ಸೇವೆಯ ಮನೋಭಾವನೆಯನ್ನು ಇಟ್ಟುಕೊಂಡು ಸಂಸ್ಥೆಯು ಸಮಾಜ ಉಪಯುಕ್ತ ಕೆಲಸ ಮಾಡುತ್ತಿದೆ. ತಾವು ರೆಡ್ ಕ್ರಾಸ್ ಸಂಸ್ಥೆಯ ಸದಸ್ಯತ್ವ ಪಡೆಯಬೇಕು ಎಂದರು.ಮಹಾವಿದ್ಯಾಲಯದ ಆಡಳಿತಾಧಿಕಾರಿ ವಿ.ಎಚ್.ಕೆ. ಹಿರೇಮಠ ಮಾತನಾಡಿ, ವೈದಕೀಯ ಕ್ಷೇತ್ರಕ್ಕೆ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯಗಳು ಅಪಾರವಾಗಿವೆ ಹಾಗೂ ಪೂರಕವಾಗಿವೆ. ಸಮಾಜ ಸೇವೆ ಮಾಡಲು ಸಂಸ್ಥೆಯನ್ನು ಸೇರಲು ಮುಂದಾಗಬೇಕು ಎಂದರು.ಡಿಡಿಆರ್‌ಸಿ ಸಂಯೋಜಕರಾದ ಡಾ.ಅಂಕಿತ ಆನಂದ ಅವರು ಯುವ ರೆಡ್ ಕ್ರಾಸ್ ಘಟಕದ ಕ್ರಿಯಾಶೀಲತೆಯ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ನಶಾಮುಕ್ತ ಭಾರತ ಅಭಿಯಾನದ ಪ್ರತಿಜ್ಞಾವಿಧಿ ಬೋಧಿಸಿ ಅದರ ಬಗ್ಗೆ ಜಾಗೃತಿ ಮೂಡಿಸಲಾಯಿತು.ಸಿಂದಗಿ ಶಾಂತವೀರೇಶ್ವರ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯಯ ಪ್ರಾಂಶುಪಾಲರಾದ ಸಿ.ಎನ್. ಗೌಡರ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮುಖ್ಯ ಅತಿಥಿಗಳಾಗಿ ಗೌರವ ಸಹಕಾರ್ಯದರ್ಶಿ ನಿಂಗಪ್ಪ ಆರೇರ, ಖಜಾಂಚಿ ಪ್ರಭು ಹಿಟ್ನಳ್ಳಿ, ಜಿಲ್ಲಾ ಪದಾಧಿಕಾರಿಗಳಾದ ರವಿ ಹಿಂಚಿಗೇರಿ, ಉಡಚಪ್ಪ ಮಾಳಗಿ, ಮುರಿಗೆಪ್ಪ ಮಾಸೂರ, ಡಿಡಿಆರ್‌ಸಿ ಸಿಬ್ಬಂದಿ ಫಕ್ಕಿರೇಶ ಬಾರ್ಕಿ, ಮಹಾವಿದ್ಯಾಲಯದ ಉಪನ್ಯಾಸಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಉಪನ್ಯಾಸಕರಾದ ದಯಾನಂದ ಸುತ್ತಕೋಟಿ ನಿರ್ವಹಿಸಿ, ವಂದಿಸಿದರು.

Share this article