ಕೆ.ಎಂ. ಮಂಜುನಾಥ್
ಮಳೆಯ ಅಭಾವದಿಂದಾಗಿ ಈ ಬಾರಿಯ ಮುಂಗಾರಿನ ಹಂಗಾಮಿನಲ್ಲಿ ಸಿರಿಧಾನ್ಯಗಳ ಕೃಷಿಯಿಂದ ರೈತರು ವಿಮುಖವಾಗಿದ್ದು, ಕೃಷಿ ಇಲಾಖೆಯ ವಾರ್ಷಿಕ ನಿಗದಿತ ಗುರಿಯ ಅರ್ಧದಷ್ಟು ಸಹ ತಲುಪಲು ಸಾಧ್ಯವಾಗಿಲ್ಲ. ಹೀಗಾಗಿ ನಿತ್ಯ ಆಹಾರಕ್ಕೆ ಸಿರಿಧಾನ್ಯಗಳನ್ನೇ ಆಶ್ರಯಿಸಿದವರು ತೀವ್ರ ಬೆಲೆ ಏರಿಕೆಯ ಬರೆಯನ್ನು ಅನುಭವಿಸುವಂತಾಗಿದೆ. ಪ್ರಸಕ್ತ ವರ್ಷದ ಮುಂಗಾರಿನಲ್ಲಿ ಹೆಚ್ಚಿನ ಪ್ರಮಾಣದ ಬಿತ್ತನೆಯಾಗಿದ್ದ ಜೋಳದ ಬೆಳೆ ಮಳೆಯಿಲ್ಲದೆ ಬಹುತೇಕ ನಷ್ಟವಾಗಿರುವುದು ರೈತರಿಗೆ ನುಂಗದ ತುತ್ತಾಗಿ ಪರಿಣಮಿಸಿದೆ.
ಹೊರಜಿಲ್ಲೆಯಿಂದ ಆಮದು: ತೃಣಧಾನ್ಯಗಳು ಎಂದೂ ಕರೆಯುವ ನವಣೆ, ಸಜ್ಜೆ, ಸಾಮೆ, ಹಾರಕ(ಅರ್ಕ), ಕೊರಲೆ, ಬರಗು, ರಾಗಿ ಹಾಗೂ ಜೋಳ ಬೆಳೆಗಳನ್ನು ಜಿಲ್ಲೆಯಲ್ಲಿ ಬೆಳೆಯಲಾಗುತ್ತದೆ. ಸಿರಿಧಾನ್ಯಗಳ ಪೈಕಿ ನವಣೆ, ಸಜ್ಜೆ, ರಾಗಿ ಹಾಗೂ ಜೋಳವನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆದು ಮನೆ ಬಳಕೆ ಹಾಗೂ ಮಾರಾಟ ಮಾಡಲಾಗುತ್ತದೆ. ಸಿರಿಧಾನ್ಯಗಳನ್ನು ಸಾವಯವ ಪದ್ಧತಿಯಲ್ಲಿ ಬೆಳೆಯುವುದೇ ಹೆಚ್ಚು. ಆದರೆ, ಈ ಬಾರಿ ಮಳೆಯ ಅಭಾವದಿಂದಾಗಿ ಬರ ಎದುರಾಗಿದ್ದರಿಂದ ಮುಂಗಾರು ಹಂಗಾಮಿನಲ್ಲಿ ಸಿರಿಧಾನ್ಯಗಳತ್ತ ಮನಸ್ಸು ಹಾಯಿಸಲಿಲ್ಲ. ಹೀಗಾಗಿ ಉತ್ಪನ್ನದ ಪ್ರಮಾಣ ತೀವ್ರ ಕುಸಿತವಾಗಿದ್ದು, ನಿತ್ಯ ಆಹಾರಕ್ಕೆ ಬಳಕೆಗೆ ಹೊರ ರಾಜ್ಯ, ಜಿಲ್ಲೆಗಳಿಂದ ಆಮದು ಮಾಡಿಕೊಳ್ಳಬೇಕಾದ ಪರಿಸ್ಥಿತಿ ಇದೆ. ರಾಜ್ಯದ ಎಲ್ಲ ಕಡೆಗಳಲ್ಲೂ ಇದೇ ರೀತಿಯ ವಾತಾವರಣ ಇರುವುದರಿಂದ ಬೆಳೆದ ಬೆಳೆಗೆ ಭಾರೀ ಪ್ರಮಾಣದ ಬೇಡಿಕೆ ಬಂದಿದ್ದು, ದರ ಏರಿಕೆಯ ಬಿಸಿ ತಟ್ಟಿದೆ.ಸಿರಿಧಾನ್ಯಗಳಿಗೆ ಹೆಚ್ಚಿದ ಬೇಡಿಕೆ: ಸಿರಿಧಾನ್ಯಗಳನ್ನು ಕಡಿಮೆ ನೀರು ಹಾಗೂ ಕಡಿಮೆ ವೆಚ್ಚದಲ್ಲಿ ಬೆಳೆಯಬಹುದಾಗಿದೆ. ಆದರೆ, ರೈತರು ವಾಣಿಜ್ಯ ಬೆಳೆಗಳತ್ತ ಹೆಚ್ಚು ಆಸ್ಥೆ ವಹಿಸುತ್ತಿರುವ ಜತೆಗೆ ಮಳೆಯ ತೀವ್ರ ಅಭಾವದಿಂದ ಸಿರಿಧಾನ್ಯ ಬೆಳೆಗೆ ಹಿನ್ನಡೆ ಕಂಡಿದೆ. ಬೆಳೆಯ ಪ್ರಮಾಣ ಕುಸಿತದಿಂದ ಸಹಜವಾಗಿ ಸಿರಿಧಾನ್ಯಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆಯೂ ಹೆಚ್ಚಿದೆ.
ಜಿಲ್ಲೆಯಲ್ಲಿ 2022- 2023ರಲ್ಲಿ ಜೋಳ, ರಾಗಿ, ಸಜ್ಜೆ ಸೇರಿದಂತೆ ಒಟ್ಟು ವಿವಿಧ ಸಿರಿಧಾನ್ಯಗಳು 9314 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ಉತ್ತಮ ಇಳುವರಿಯಿಂದ ರೈತರು ನೆಮ್ಮದಿ ಕಂಡುಕೊಂಡಿದ್ದರು. 2023- 2024ರಲ್ಲಿ ಜೋಳ 15,927 ಹೆಕ್ಟೇರ್, ರಾಗಿ 90 ಹೆಕ್ಟೇರ್, ಸಜ್ಜೆ 91 ಹೆಕ್ಟೇರ್ ಸೇರಿದಂತೆ ಇತರೆ ಸಿರಿಧಾನ್ಯಗಳು 175 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದ್ದರೂ ಭಾಗಶಃ ಇಳುವರಿ ಕುಸಿತ ಕಂಡಿದೆ. ರೈತರೇ ಹೇಳುವ ಪ್ರಕಾರ ಮುಂಗಾರು ಹಂಗಾಮಿನ ಸಿರಿಧಾನ್ಯಗಳು ಶೇ. 20ರಷ್ಟು ಸಹ ಬೆಳೆ ಬಂದಿಲ್ಲ.