ಬರವಣಿಗೆ ಮೇಲೆ ಸಾಮಾಜಿಕ ಜಾಲತಾಣಗಳ ಕರಿನೆರಳು

KannadaprabhaNewsNetwork |  
Published : Jan 08, 2026, 02:00 AM IST
5ಎಚ್ಎಸ್ಎನ್10 : ಕಾರ್ಯಕ್ರಮದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿದರು. | Kannada Prabha

ಸಾರಾಂಶ

ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಕವಿತೆ, ಕಾದಂಬರಿಗಳ ವಿಮರ್ಶೆಯಾಗದೆ ಬರಹಗಾರರ ಬೆಳವಣಿಗೆಗೆ ಪ್ರೋತ್ಸಾಹ ಇಲ್ಲದಂತಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮನೆ-ಮನೆ ಕವಿಗೋಷ್ಠಿ ಎರಡು ದಶಕಗಳಿಂದ ಸಾಹಿತ್ಯ ಕೃಷಿ ಮಾಡಿಕೊಂಡು ಬಂದಿರುವುದು ಶ್ಲಾಘನೀಯವೆಂದು ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಹೇಳಿದರು. . ಅನಕೃ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ರಾಜಾರಾಮನ್, ಎಸ್‌.ಎಲ್. ಭೈರಪ್ಪ ಸೇರಿ ಅನೇಕರು ಕವಿ ಭಾವನೆಯಿಂದಲೇ ಸಾಹಿತ್ಯ ಕ್ಷೇತ್ರದಲ್ಲಿ ಅಪರಿಮಿತ ಸಾಧನೆ ಮಾಡಿದ್ದಾರೆಂದರು.

ಕನ್ನಡಪ್ರಭ ವಾರ್ತೆ ಹಾಸನ

ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಕವಿತೆ, ಕಾದಂಬರಿಗಳ ವಿಮರ್ಶೆಯಾಗದೆ ಬರಹಗಾರರ ಬೆಳವಣಿಗೆಗೆ ಪ್ರೋತ್ಸಾಹ ಇಲ್ಲದಂತಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮನೆ-ಮನೆ ಕವಿಗೋಷ್ಠಿ ಎರಡು ದಶಕಗಳಿಂದ ಸಾಹಿತ್ಯ ಕೃಷಿ ಮಾಡಿಕೊಂಡು ಬಂದಿರುವುದು ಶ್ಲಾಘನೀಯವೆಂದು ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಹೇಳಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಕರ್ತರ ಭವನದಲ್ಲಿ ಹಮಿಕೊಂಡಿದ್ದ ಮನೆ-ಮನೆ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲರನ್ನೂ ಕವಿ, ಪತ್ರಕರ್ತ, ಸಾಹಿತಿ ಎನ್ನಲು ಸಾಧ್ಯವಿಲ್ಲ. ನಿರಂತರ ಬರವಣಿಗೆಯಿಂದ ಕಾವ್ಯ ಸೃಷ್ಟಿಯಾಗುತ್ತದೆ. ಪತ್ರಕರ್ತರಲ್ಲಿ ಕವಿ ಹೃದಯ ಇರುತ್ತದೆ. ಅನಕೃ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ರಾಜಾರಾಮನ್, ಎಸ್‌.ಎಲ್. ಭೈರಪ್ಪ ಸೇರಿ ಅನೇಕರು ಕವಿ ಭಾವನೆಯಿಂದಲೇ ಸಾಹಿತ್ಯ ಕ್ಷೇತ್ರದಲ್ಲಿ ಅಪರಿಮಿತ ಸಾಧನೆ ಮಾಡಿದ್ದಾರೆಂದರು.ಕವಿಗಳು ತಮ್ಮ ಬರವಣಿಗೆ ಮೂಲಕ ಇವತ್ತಿನ ತಾಕಲಾಟಗಳಿಗೆ ಮುಖಾಮುಖಿಯಾಗಬೇಕು. ಎಷ್ಟು ದೊಡ್ಡದಾಗಿ ಬರೆಯುತ್ತೇವೆಂಬುದರ ಬದಲು ಎಷ್ಟು ಪರಿಣಾಮಕಾರಿಯಾಗಿ ಬರೆಯುತ್ತೇವೆ ಎನ್ನುವುದು ಮುಖ್ಯವಾಗುತ್ತದೆ. ಇತ್ತೀಚೆಗೆ ವಾಟ್ಸಾಪ್ ವಿಶ್ವವಿದ್ಯಾಲಯ ಪ್ರವೃತ್ತಿ ಹೆಚ್ಚಿದೆ. ಯಾವುದೇ ಒಂದು ಕವನವನ್ನು ವಿಮರ್ಶಿಸಿ ಮಾರ್ಗದರ್ಶನ ಮಾಡುವ ಕಾರ್ಯಾಗಾರಗಳು ಆಗಬೇಕು. ಫೇಸ್‌ಬುಕ್‌ನಲ್ಲಿ ಲೈಕ್‌ಗಳಿಸುವುದಕ್ಕಷ್ಟೇ ಕವಿತೆಗಳು ಸೀಮಿತವಾಗಬಾರದು. ಪ್ರತಿಭಾನ್ವಿತರಿಗೆ ವೇದಿಕೆ ಮಾಡಿಕೊಡುವ ಕೆಲಸ ಕವಿಗೋಷ್ಠಿಯಿಂದ ಆಗಬೇಕೆಂದು ಸಲಹೆ ನೀಡಿದರು. ನಾವು ಸಾಮಾಜಿಕ ಬದ್ಧತೆ ಹಿನ್ನೆಲೆಯಲ್ಲಿ ಬರೆಯಬೇಕು. ದೇಶ ಕಟ್ಟುವಲ್ಲಿ ಕವಿಗಳು, ಪತ್ರಕರ್ತರು ಸಾಕಷ್ಟು ಕೊಡುಗೆ ನೀಡಿದ್ದಾರೆ. ಆ ಕಾಲಘಟ್ಟದಿಂದ ನಡೆದುಕೊಂಡು ಬಂದಿರುವ ಪರಂಪರೆಯನ್ನು ಉಳಿಸಿಕೊಳ್ಳುವ ಸವಾಲು ನಮ್ಮೆಲ್ಲರ ಮುಂದಿದೆ ಎಂದರು.

ಹಾಸನದಲ್ಲಿ ಮನೆ ಮನೆ ಕವಿಗೋಷ್ಟಿ ಆರಂಭವಾಗುವುದಕ್ಕೆ ಸುದೀರ್ಘ ಇತಿಹಾಸವಿದೆ. ಆಕಾಶವಾಣಿಯಲ್ಲಿ ನಿರ್ದೇಶಕರಾಗಿದ್ದ ವಸಂತ ಕುಮಾರ್, ಸಂಯುಕ್ತ ಕರ್ನಾಟಕ ವರದಿಗಾರ ದಿ. ಜೈಕುಮಾರ್ ಅವರ ಚಿಂತನೆಯಿಂದ ಶುರುವಾದ ಕವಿಗೋಷ್ಟಿ ೨೦ ವರ್ಷ ಪೂರೈಸಿರುವುದು ಹೆಮ್ಮೆಯ ವಿಚಾರ. ಚಿಕ್ಕದಾಗಿ ಶುರುವಾದ ಕವಿಗೋಷ್ಠಿ ಇಂದು ದೊಡ್ಡ ಮಟ್ಟದಲ್ಲಿ ಬೆಳೆದಿದೆ. ಹಲವಾರು ಜನರಿಗೆ ವೇದಿಕೆ ಕಲ್ಪಿಸಿಕೊಟ್ಟ ಮನೆ ಮನೆ ಕವಿಗೋಷ್ಠಿ ಬೆಳೆದುಬಂದ ದಾರಿಯನ್ನು ಪುಸ್ತಕ ರೂಪದಲ್ಲಿ ದಾಖಲಿಸಬೇಕೆಂದು ಆಯೋಜಕರಿಗೆ ಸಲಹೆ ನೀಡಿದರು.

ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಎಚ್.ಬಿ.ಮದನಗೌಡ ಅವರು ಮಾತನಾಡಿ, ಹಳೆ ಬೇರು-ಹೊಸ ಚಿಗುರುಗಳನ್ನು ಒಟ್ಟಿಗೆ ಕರೆದೊಯ್ಯುವ ಕೇಂದ್ರ ಮನೆ ಮನೆ ಕವಿಗೋಷ್ಠಿಯಾಗಿದೆ. ಹೊಸ ಲೇಖಕರಿಗೆ ಪ್ರೇರಕವಾಗಿ ತಮ ಪ್ರತಿಭೆಯನ್ನು ಪ್ರಚುರಪಡಿಸಲು ಎಲ್ಲರೂ ಸಹಕರಿಸಬೇಕು. ಆ ಕೆಲಸವನ್ನು ಆಯೋಜಕರು ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆಂದು ಮೆಚ್ಚುಗೆ ಸೂಚಿಸಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜೆ.ಆರ್‌. ಕೆಂಚೇಗೌಡ ಅಧ್ಯಕ್ಷತೆ ವಹಿಸಿದ್ದರು. ಮನೆ ಮನೆ ಕವಿಗೋಷ್ಟಿ ಸಂಚಾಲಕಿ ಸುಕನ್ಯ ಮುಕುಂದ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಮಲಮ್ಮ ಅವರ "ಕಾಲವೆಂಬ ಕನ್ನಡಿಯಲ್ಲಿ " ಕೃತಿಯನ್ನು ಲೇಖಕ ಉಮೇಶ್ ಹೊಸಳ್ಳಿ ಪರಿಚಯ ಮಾಡಿಕೊಟ್ಟರು. ವೇದಿಕೆ ಕಾಯಕ್ರಮದ ಬಳಿಕ ಕವಿತೆ ವಾಚನ ಮಾಡಲಾಯಿತು. ಪತ್ರಕರ್ತರ ಸಂಘದ ಮಾಜಿ ಜಿಲ್ಲಾಧ್ಯಕ್ಷ ರವಿ ನಾಕಲಗೂಡು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಉದಯರವಿ, ಸಂಘದ ಮಾಜಿ ಅಧ್ಯಕ್ಷೆ ಲೀಲಾವತಿ, ಸಂಪಾದಕರಾದ ಚಲಂ ಪ್ರಸನ್ನ,ಸಂಘದ ಕಾರ್ಯದರ್ಶಿ ಬಿ.ಆರ್. ಬೊಮೇಗೌಡ ಹಾಗು ಮನೆ ಮನೆ ಕವಿಗೋಷ್ಠಿ ಸದಸ್ಯರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ