ರೈತರ ಮರೆತು ಅಧಿಕಾರ ಮಜಾದಲ್ಲಿ ಶಾಮನೂರು ಕುಟುಂಬ

KannadaprabhaNewsNetwork |  
Published : Aug 20, 2025, 01:30 AM IST
19ಕೆಡಿವಿಜಿ1-ದಾವಣಗೆರೆಯಲ್ಲಿ ಮಂಗಳವಾರ ಬಿಜೆಪಿ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾಗಿ ಬೆಳೆಗಳು ನಾಶವಾಗಿ ರೈತರು ಕಂಗೆಟ್ಟಿದ್ದಾರೆ. ಆದರೆ, ಶಾಮನೂರು ಅವರ ಕುಟುಂಬದಲ್ಲಿ ಮೂವರಿಗೂ ಅಧಿಕಾರವಿದ್ದರೂ, ಬೆಳೆ ಹಾನಿ ಸಮೀಕ್ಷೆಗೆ ಸೂಚಿಸಿಲ್ಲ, ರೈತರ ಬೆನ್ನಿಗೆ ನಿಂತಿಲ್ಲ. ಅಧಿಕಾರವನ್ನು ಕೇವಲ ಮಜಾ ಮಾಡುವುದಕ್ಕೆ ಮಾತ್ರ ಬಳಸುತ್ತಿದ್ದಾರೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- ಬಿಜೆಪಿ ಮುಖಂಡ ಲೋಕಿಕೆರೆ ನಾಗರಾಜ ಆರೋಪ । ಬೆಳೆಗಳು ನಾಶವಾದ್ರೂ ಪರಿಹಾರ ಕ್ರಮವಿಲ್ಲ: ಟೀಕೆ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾಗಿ ಬೆಳೆಗಳು ನಾಶವಾಗಿ ರೈತರು ಕಂಗೆಟ್ಟಿದ್ದಾರೆ. ಆದರೆ, ಶಾಮನೂರು ಅವರ ಕುಟುಂಬದಲ್ಲಿ ಮೂವರಿಗೂ ಅಧಿಕಾರವಿದ್ದರೂ, ಬೆಳೆ ಹಾನಿ ಸಮೀಕ್ಷೆಗೆ ಸೂಚಿಸಿಲ್ಲ, ರೈತರ ಬೆನ್ನಿಗೆ ನಿಂತಿಲ್ಲ. ಅಧಿಕಾರವನ್ನು ಕೇವಲ ಮಜಾ ಮಾಡುವುದಕ್ಕೆ ಮಾತ್ರ ಬಳಸುತ್ತಿದ್ದಾರೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಮನೂರು ಕುಟುಂಬದಲ್ಲಿ ಸಚಿವರು, ಸಂಸದರು, ಶಾಸಕರೆಲ್ಲ ಒಂದೇ ಕುಟುಂಬದವರು. ಈ ಮೂವರನ್ನೂ ನಗರ, ಜಿಲ್ಲೆಯ ಜನತೆ ಫೇಸ್‌ಬುಕ್‌, ವಾಟ್ಸಪ್‌ ಗ್ರೂಪ್‌ಗಳಲ್ಲಿ ಮಾತ್ರ ನೋಡುವಂತಾಗಿದೆ. ಸತತ ಮಳೆಯಿಂದಾಗಿ ಅಡಕೆ ಬೆಳೆಗೆ ಕೊಳೆರೋಗ ಅಂಟಿ ಬೆಳೆಗಾರರು ಸಂಕಷ್ಟಕ್ಕೆ ತುತ್ತಾಗುತ್ತಿದ್ದಾರೆ. ಈವರೆಗೂ ಜಿಲ್ಲಾಡಳಿತವಾಗಲಿ, ಕೃಷಿ ಇಲಾಖೆಯಾಗಲಿ ಸಮೀಕ್ಷೆ ಮಾಡಿಲ್ಲ, ಸೂಕ್ತ ಪರಿಹಾರ ನೀಡಲು ಮುಂದಾಗುತ್ತಿಲ್ಲ. ಅಧಿಕಾರಿಗಳಿಗೆ ಸಮೀಕ್ಷೆಗೆ ಸೂಚನೆ ನೀಡಬೇಕಾದ ಸಚಿವರು, ಸಂಸದರು, ಶಾಸಕರಿಗೆ ರೈತರ ಬಗ್ಗೆ ಕಾಳಜಿಯೇ ಇಲ್ಲವಾಗಿದೆ ಎಂದು ದೂರಿದರು.

ರೈತರ ಒಕ್ಕೂಟದ ಜಿಲ್ಲಾಧ್ಯಕ್ಷ ಬಿ.ಎಂ. ಸತೀಶ ಕೊಳೇನಹಳ್ಳಿ ಮಾತನಾಡಿ, ಭದ್ರಾ ಬಲದಂಡೆ ನಾಲೆ ಸೀಳಿ ಕಾಮಗಾರಿ ಕೈಗೊಂಡಾಗ ರೊಚ್ಚಿಗೆದ್ದ ರೈತರನ್ನು ಸಮಾಧಾನಪಡಿಸಲು ಕಾಮಗಾರಿ ನಿಲ್ಲಿಸಿದ್ದಾಗ ಸುಳ್ಳು ಹೇಳಿದ್ದ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಈಗ ಕಾಮಗಾರಿ ಪೂರ್ಣಗೊಂಡಿದೆ ಎನ್ನುತ್ತಿದ್ದಾರೆ. ಇದು ರೈತ ವಿರೋಧಿ ಧೋರಣೆ. ಡ್ಯಾಂಗಳಿಗೆ ಸುರಕ್ಷತೆ ದೃಷ್ಟಿಯಿಂದ ಸಣ್ಣ ಲೋಪವಾದರೂ ಅದಕ್ಕೆ ಭಾರಿ ಬೆಲೆ ತೆರಬೇಕಾಗುತ್ತದೆಂಬ ಅರಿವಿಲ್ಲವೇ ಎಂದು ಪ್ರಶ್ನಿಸಿದರು.

ತುಂಗಭದ್ರಾ ಡ್ಯಾಂನ 8 ಕ್ರೆಸ್ಟ್ ಗೇಟ್‌ಗಳಲ್ಲೂ ಲೋಪದೋಷ ಕಂಡುಬಂದಿದೆ. ಇದು ಅತ್ಯಂತ ಅಪಾಯಕಾರಿ. ಕಳೆದ ಸಲ 19ನೇ ಕ್ರೆಸ್ಟ್ ಗೇಟ್ ನೀರಿನ ರಭಸದಿಂದ ಕೊಚ್ಚಿಹೋಗಿತ್ತು. ಆಗ ಎಲ್ಲ ಕ್ರೆಸ್ಟ್‌ ಗೇಟ್ ಬದಲಿಸಬೇಕೆಂದು ಡ್ಯಾಂ ತಜ್ಞರು, ಅಧಿಕಾರಿಗಳು ಸರ್ಕಾರಕ್ಕೆ ಶಿಫಾರಸು ಮಾಡಿದ್ದರು. ಆದರೆ, ಕಾಂಗ್ರೆಸ್ ಸರ್ಕಾರ ತಜ್ಞರ ಶಿಫಾರಸು ನಿರ್ಲಕ್ಷಿಸಿದ್ದರಿಂದ ಡ್ಯಾಂಗೆ ಈಗ ಅಪಾಯ ಬಂದೊದಗಿದೆ. ಅದೇ ಪರಿಸ್ಥಿತಿ ಭದ್ರಾ ಡ್ಯಾಂಗೆ ಬಂದರೂ ಅಚ್ಚರಿ ಇಲ್ಲ ಎಂದು ಕಾಂಗ್ರೆಸ್ ಸರ್ಕಾರದ ಧೋರಣೆಗೆ ಕಿಡಿಕಾರಿದರು.

ಬಿಜೆಪಿ ಮುಖಂಡರಾದ ದಾಮ್ಕೋಸ್ ಅಧ್ಯಕ್ಷ ಬಾತಿ ಬಿ.ಕೆ.ಶಿವಕುಮಾರ, ಬಾತಿ ರೇವಣಸಿದ್ದಪ್ಪ, ರಾಂಪುರ ನರೇಂದ್ರ ಇತರರು ಇದ್ದರು.

- - -

(ಕೋಟ್‌) ಕೇಂದ್ರ ವಿಪತ್ತು ಪರಿಹಾರ ನಿಧಿಯಡಿ ರೈತರಿಗೆ ಅತಿವೃಷ್ಟಿ ವೇಳೆ ನೀಡುವ ಪರಿಹಾರದ ಹಣವನ್ನೂ ಕೊಡದೇ, ಕಾಂಗ್ರೆಸ್ ಸರ್ಕಾರ ತನ್ನ ಐದು ಪುಕ್ಕಟೆ ಗ್ಯಾರಂಟಿ ಯೋಜನೆಗಳಿಗೆ ಬಳಸಿದೆಯೆಂಬ ಅನುಮಾನವಿದೆ. ತಕ್ಷಣವೇ ರೈತರಿಗೆ ಎನ್‌ಡಿಆರ್‌ಎಫ್‌ನಡಿ ಸೂಕ್ತ ಪರಿಹಾರ ನೀಡಬೇಕು. ಯಾವುದೇ ಕಾರಣಕ್ಕೂ ರೈತರನ್ನು ಕಡೆಗಣಿಸಿದರೆ ಪರಿಣಾಮ ನೆಟ್ಟಗಿರದು. ರೈತರ ಕಣ್ಣೀರೊರೆಸದ ಕಾಂಗ್ರೆಸ್ ಸರ್ಕಾರ ಹೆಚ್ಚು ದಿನ ಅಧಿಕಾರದಲ್ಲೂ ಇರುವುದಿಲ್ಲ.

- ಲೋಕಿಕೆರೆ ನಾಗರಾಜ, ಬಿಜೆಪಿ ಮುಖಂಡ

- - -

-19ಕೆಡಿವಿಜಿ1.ಜೆಪಿಜಿ:

ದಾವಣಗೆರೆಯಲ್ಲಿ ಮಂಗಳವಾರ ಬಿಜೆಪಿ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV

Recommended Stories

ರಾಜ್ಯದಲ್ಲಿ 5 - 6 ದಿನ ಮಳೆ ಇಳಿಮುಖ : 26ರಿಂದ ಮತ್ತೆ ಮಳೆ
ಎಮ್ಮೆ ಕೊಡಿಸುವುದಾಗಿ ಪ್ರೇಮ್‌ಗೆ ವಂಚನೆ : ₹4.75 ಲಕ್ಷ ಮೋಸ