- ನ್ಯಾಮತಿಯಲ್ಲಿ ಡಾ.ರಾಜೇಂದ್ರ ಸ್ವಾಮಿಗಳ 110ನೇ ಜಯಂತ್ಯುತ್ಸವ, ಉಪನ್ಯಾಸ
- - -ಕನ್ನಡಪ್ರಭ ವಾರ್ತೆ ನ್ಯಾಮತಿ
ಶರಣರು ಶ್ರಮ, ಸಂಸ್ಕೃತಿ ಹಾಗೂ ಉನ್ನತ ಚಿಂತನೆಯಿಂದ ಸರಳ ಜೀವನ ನಡೆಸಿದವರು. ಇಂತಹ ಶರಣರ ತತ್ವ- ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬಾಳಿದರೆ ಯಶಸ್ಸಿನ ಮಾರ್ಗ ಸುಲಭವಾಗಿ ಕಾಣಬಹುದು ಎಂದು ನ್ಯಾಮತಿ ತಾಲೂಕು ತಹಸೀಲ್ದಾರ್ ಎಂ.ಪಿ.ಕವಿರಾಜ್ ಹೇಳಿದರು.ಪಟ್ಟಣದ ಸಾಹಿತ್ಯ ಪರಿಷತ್ತು ಕಚೇರಿಯಲ್ಲಿ ಇತ್ತೀಚೆಗೆ ತಾಲೂಕು ಶರಣ ಸಾಹಿತ್ಯ ಪರಿಷತ್ತು, ತಾಲೂಕು ಕದಳಿ ಮಹಿಳಾ ವೇದಿಕೆ ಸಹಯೋಗದಲ್ಲಿ ಆಯೋಜಿಸಿದ್ದ ಶರಣ ಸಾಹಿತ್ಯ ಪರಿಷತ್ತು ಸಂಸ್ಥಾಪಕರಾದ ಸುತ್ತೂರು ಮಹಾಸಂಸ್ಥಾನ ಮಠದ ಜಗದ್ಗುರು ಡಾ.ರಾಜೇಂದ್ರ ಸ್ವಾಮಿಗಳ 110ನೇ ಜಯಂತ್ಯುತ್ಸವ ಅಂಗವಾಗಿ ನಡೆದ ಸಂಸ್ಥಾಪಕರ ದಿನದ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶರಣರು ಶಿವಭಕ್ತಿ, ನಿಷ್ಠೆ, ವೈರಾಗ್ಯ ಹೊಂದಿದವರು. ಜೊತೆಯಲ್ಲಿ ಕಾಯಕ ದಾಸೋಹ ತತ್ವದಲ್ಲಿ ನಂಬುಗೆ ಹೊಂದಿದವರು. ಇಂತಹ ನಡವಳಿಕೆ ಇಂದಿನ ಪೀಳಿಗೆಗೆ ಅಗತ್ಯವಾಗಿದೆ. ಶಿವಶರಣರ ಚಿಂತನೆಯನ್ನು ಮಕ್ಕಳಿಗೆ ಪರಿಚಯಿಸಿ ವಚನಗಳ ಮಹತ್ವ ತಿಳಿಸುವಂತೆ ಪೋಷಕರಿಗೆ ಸಲಹೆ ನೀಡಿದರು.ಸರ್ಕಾರಿ ವೃತ್ತಿಯಲ್ಲಿರುವ ನಮಗೆ ಆಯಾ ಪ್ರದೇಶಗಳ ವಿಶೇಷತೆಗಳನ್ನು ಅರಿಯಲು ಹಲವಾರು ಅವಕಾಶಗಳಿವೆ. ಶಿಕಾರಿಪುರದ ತಾಲೂಕಿನಲ್ಲಿಯೇ ಸುಮಾರು 30 ಶಿವಶರಣರ ಕ್ಷೇತ್ರಗಳನ್ನು ನೋಡಬಹುದಾಗಿದೆ. ಪೋಷಕರು ತಮ್ಮ ಮಕ್ಕಳಿಗೆ ಆ ಕ್ಷೇತ್ರಗಳ ಬಗ್ಗೆ ಶಿವಶರಣ ಚಿಂತನೆ ಬಗ್ಗೆ ಪರಿಚಯಿಸಿ, ಬಾಲ್ಯದಲ್ಲಿಯೇ ವಚನಗಳನ್ನು ಕಂಠಪಾಠ ಮಾಡುವ ಮೂಲಕ ವಚನಗಳ ಬಗ್ಗೆ ಅರಿವು ಮೂಡಿಸಬೇಕು ಎಂದರು.
ಶರಣ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಎಂ.ಬಿ.ಶಿವಯೋಗಿ ಮಾತನಾಡಿ, ನ್ಯಾಮತಿ ಹಾಗೂ ಸುತ್ತಮುತ್ತಲಿನ ಭಾಗಗಳಲ್ಲಿ ಶರಣ ಪರಂಪರೆಯ ಕುರುಹುಗಳು ಇವೆ. ಅವುಗಳನ್ನು ಸಮಾಜಕ್ಕೆ ಪರಿಚಯಿಸುವ ಕೆಲಸ ಶ.ಸಾ.ಪ. ಮಾಡುತ್ತಿದೆ ಎಂದರು.ಶರಣೆ ಲತಾ ಮಾತನಾಡಿ, ಶರಣ ಚಳವಳಿಯಿಂದ ಜನರ ಆಡುಭಾಷೆಯಲ್ಲಿ ವಚನ ಸಾಹಿತ್ಯ ಮೂಡಿದೆ. ಶರಣ ಸಾಹಿತ್ಯ ಪರಿಷತ್ತು ಉದಯಿಸುವಲ್ಲಿ ಸುತ್ತೂರು ಶ್ರೀಗಳ ಕೊಡುಗೆ ಅಪಾರವಾಗಿದೆ ಎಂದರು.
ಎಚ್.ಮಹೇಶ್ವರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಳಿಗಾರ್ ಕವಿತಾ ವೀರೇಶ್ ಸ್ವಾಗತಿಸಿದರು. ಅಂಬಿಕಾ ಸುಭಾಷ್ ಶರಣ ಸಮರ್ಪಣೆ ಮಾಡಿದರು. ಪಿ.ಜಿ.ನಾಗರಾಜ್ ನಿರೂಪಿಸಿ, ಸುರಹೊನ್ನೆ ಬಸವೇಶ್ವರ ಭಜನಾ ಸಂಘ ಸದಸ್ಯರು ಪ್ರಾರ್ಥನೆ, ವಚನ ಗಾಯನ ನಡೆಸಿಕೊಟ್ಟರು.- - - -ಚಿತ್ರ:
ನ್ಯಾಮತಿ ತಾಲೂಕು ಶರಣ ಸಾಹಿತ್ಯ ಪರಿಷತ್ತು, ತಾಲೂಕು ಕದಳಿ ಮಹಿಳಾ ವೇದಿಕೆ ಸಹಯೋಗದಲ್ಲಿ ನಡೆದ ಶರಣ ಸಾಹಿತ್ಯ ಪರಿಷತ್ತು ಸಂಸ್ಥಾಪಕರಾದ ಸುತ್ತೂರು ಮಹಾಸಂಸ್ಥಾನ ಮಠದ ಜಗದ್ಗುರು ಡಾ.ರಾಜೇಂದ್ರ ಸ್ವಾಮಿಗಳ 110ನೇ ಜಯಂತ್ಯುತ್ಸವ ಅಂಗವಾಗಿ ಸಂಸ್ಥಾಪಕರ ದಿನದ ಉಪನ್ಯಾಸ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಎಂ.ಪಿ.ಕವಿರಾಜ್ ಮಾತನಾಡಿದರು.