ಮಂಡ್ಯ ಮಂಜುನಾಥ
ಕನ್ನಡಪ್ರಭ ವಾರ್ತೆ ಮಂಡ್ಯಕಳೆದ ವರ್ಷ ಬರಗಾಲ ಮತ್ತು ನೀರಿನ ಕೊರತೆಯಿಂದ ಪ್ರಸಕ್ತ ಸಾಲಿನಲ್ಲಿ ಕಾರ್ಖಾನೆಗಳಿಗೆ ಕಬ್ಬಿಗೆ ತೀವ್ರ ಕೊರತೆ ಕಾಡಲಿದೆ. ಪ್ರತಿ ಕಾರ್ಖಾನೆಗಳಿಗೂ ತಲಾ ಎರಡರಿಂದ ಮೂರು ಲಕ್ಷ ಟನ್ ಸಿಗುವುದೇ ಹೆಚ್ಚು ಎನ್ನಲಾಗುತ್ತಿದ್ದು, ಬೆಲ್ಲಕ್ಕೆ ಉತ್ತಮ ಬೆಲೆ ಇರುವುದರಿಂದ ಆಲೆಮನೆಗಳೂ ಕೂಡ ಕಾರ್ಖಾನೆಗಳೊಂದಿಗೆ ಕಬ್ಬು ನುರಿಸುವುದಕ್ಕೆ ಪೈಪೋಟಿಗಿಳಿದಿವೆ.ಮಳೆ ಕೊರತೆಯಿಂದ ಕೃಷ್ಣರಾಜಸಾಗರ ಜಲಾಶಯ ಕಳೆದ ವರ್ಷ ಭರ್ತಿಯಾಗಲಿಲ್ಲ. ಬೇಸಿಗೆ ಸಮಯದಲ್ಲಿ ನಾಲೆ ಆಧುನೀಕರಣದ ನೆಪವೊಡ್ಡಿ ನೀರು ಹರಿಸಲಿಲ್ಲ. ರಣಬಿಸಿಲ ತಾಪಕ್ಕೆ ಕಬ್ಬಿನ ಬೆಳೆ ಉರುವಲಾಯಿತು. ಕಬ್ಬು ಒಣಗುತ್ತಿರುವುದನ್ನು ನೋಡಲಾಗದೆ ಹಲವರು 8 ತಿಂಗಳ ಕಬ್ಬನ್ನು ಹೊರ ಜಿಲ್ಲೆಯ ಕಾರ್ಖಾನೆಗೆ ಸಾಗಿಸಿದರು. ಹೀಗಾಗಿ ಕಬ್ಬಿಗೆ ತೀವ್ರ ಕೊರತೆ ಎದುರಾಗಿದೆ.ಸಾಗಣೆ ವೆಚ್ಚ ಕೈಬಿಟ್ಟ ಖಾಸಗಿ ಕಾರ್ಖಾನೆಗಳು: ಪ್ರತಿ ವರ್ಷ ಕನಿಷ್ಠ 4 ಲಕ್ಷ ಟನ್‌ನಿಂದ 5 ಲಕ್ಷ ಟನ್ ಕಬ್ಬು ಅರೆಯುತ್ತಿದ್ದ ಕಾರ್ಖಾನೆಗಳು ಈ ವರ್ಷ ಎರಡೂವರೆಯಿಂದ ಮೂರು ಲಕ್ಷ ಟನ್ ಕಬ್ಬು ಅರೆದರೆ ಅದೇ ಹೆಚ್ಚು ಎನ್ನುವಂತಾಗಿದೆ. ಅಲ್ಲದೆ, ನಿತ್ಯ ೪ ರಿಂದ ೫ ಸಾವಿರ ಟನ್ ಕಬ್ಬು ಅರೆಯುತ್ತಿದ್ದ ಕಾರ್ಖಾನೆಗಳಿಗೆ ಈ ಬಾರಿ ಆ ಪ್ರಮಾಣದ ಕಬ್ಬು ಸಿಗದೇಹೋಗಬಹುದು. ಕಬ್ಬಿಗೆ ತೀವ್ರ ಕೊರತೆ ಇರುವುದರಿಂದ ಕೆಲವೊಂದು ಖಾಸಗಿ ಕಾರ್ಖಾನೆಗಳು ರೈತರಿಂದ ಸಾಗಣೆ ವೆಚ್ಚ ಪಡೆಯುವುದನ್ನೇ ನಿಲ್ಲಿಸಿವೆ. ಪ್ರತಿ ೫ ರಿಂದ ೧೦ ಕಿ.ಮೀ.ಗೆ ಒಂದೊಂದು ರೀತಿಯ ದರ ನಿಗದಿಪಡಿಸಿಕೊಂಡು ರೈತರಿಗೆ ಕೊಡ ಬೇಕಾದ ಹಣದಲ್ಲಿ ಕಟಾವು ಮಾಡಿಕೊಳ್ಳುತ್ತಿದ್ದ ಕಾರ್ಖಾನೆಗಳು, ಈಗ ಕಬ್ಬು ಸಿಗುವುದೇ ಕಷ್ಟವಾಗಿರುವುದರಿಂದ ಸಾಗಣೆ ವೆಚ್ಚವನ್ನು ಕೇಳದೆ ತಮ್ಮದೇ ಖರ್ಚಿನಲ್ಲೇ ಕಾರ್ಖಾನೆಗೆ ಕೊಂಡೊಯ್ಯುವುದಕ್ಕೆ ನಿರ್ಧರಿಸಿವೆ. ಈಗಾಗಲೇ ಮೈಷುಗರ್ ವ್ಯಾಪ್ತಿಯ ಹಲವು ರೈತರನ್ನೂ ಸಂಪರ್ಕಿಸಿ ಮುಂಗಡ ಹಣ ಕೊಟ್ಟು ಕಬ್ಬು ಒಪ್ಪಿಗೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.ಕಬ್ಬು ಆಲೆಮನೆಗಳಿಗೆ ಪಾಲಾಗುವ ಸಾಧ್ಯತೆ:ಮೈಷುಗರ್ ಸಕ್ಕರೆ ಕಾರ್ಖಾನೆ ಸುಮಾರು ೨ ಲಕ್ಷ ಟನ್ ಕಬ್ಬು ಒಪ್ಪಿಗೆ ಮಾಡಿಕೊಂಡಿರುವುದಾಗಿ ಹೇಳುತ್ತಿದೆ. ಆದರೆ, ಕಬ್ಬು ಸಾಗಣೆ ವೆಚ್ಚ ಕೈಬಿಡುವ ಬಗ್ಗೆ ಆಡಳಿತ ಮಂಡಳಿ ಇದುವರೆಗೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಕಬ್ಬು ಸಾಗಣೆ ವೆಚ್ಚ ಕೈಬಿಡದಿದ್ದರೆ ಕಾರ್ಖಾನೆಗೆ ಬರಬೇಕಾದ ಕಬ್ಬು ಬೇರೆ ಕಾರ್ಖಾನೆಗಳಿಗೆ ಅಥವಾ ಆಲೆಮನೆಗಳ ಪಾಲಾಗುವ ಸಾಧ್ಯತೆಗಳೂ ಇವೆ.ಬೆಲ್ಲಕ್ಕೆ ಉತ್ತಮ ಬೆಲೆ: ಪ್ರಸ್ತುತ ದಿನಗಳಲ್ಲಿ ಬೆಲ್ಲಕ್ಕೂ ಉತ್ತಮ ಬೆಲೆ ಇದೆ. ಪ್ರತಿ ಟನ್ ಬೆಲ್ಲಕ್ಕೆ ೪೦೦೦ ರು. ನಿಂದ ೪೫೦೦ ರು. ವರೆಗೆ ಬೆಲೆ ಇರುವುದರಿಂದ ಆಲೆಮನೆಗಳ ಮಾಲೀಕರು ರೈತರಿಂದ ಕಬ್ಬನ್ನು ಪಡೆದು ನುರಿಸುತ್ತಿದ್ದಾರೆ. ಜಿಲ್ಲೆಯಲ್ಲಿರುವ ಆಲೆಮನೆಗಳು ನಿತ್ಯ ಗರಿಷ್ಠ ೨ ಸಾವಿರ ಟನ್ ಕಬ್ಬು ಅರೆಯುತ್ತಿವೆ. ಆಲೆಮನೆ ಮಾಲೀಕರು ರೈತರಿಗೆ ಸ್ಥಳದಲ್ಲೇ ೨೫೦೦ ರು.ನಿಂದ ೨೮೦೦ ರು. ಹಣ ಕೊಟ್ಟು ಕಬ್ಬನ್ನು ಕಡಿದುಕೊಂಡು ಆಲೆಮನೆಗಳಿಗೆ ತರುತ್ತಿದ್ದಾರೆ. ಇದರಿಂದ ರೈತರಿಗೆ ಸಾಕಷ್ಟು ಅನುಕೂಲವಾಗುತ್ತಿದೆ. ಕಾರ್ಖಾನೆಗಳಿಗೆ ಕಬ್ಬನ್ನು ಸಾಗಿಸಿದರೂ ತೂಕದಲ್ಲಿ ವ್ಯತ್ಯಾಸ, ಹಣ ಬರುವವರೆಗೂ ಕಾಯಬೇಕು. ಸಾಗಣೆ ವೆಚ್ಚ ಕೈಬಿಟ್ಟರೂ ಕಟಾವು, ಗದ್ದೆಯಿಂದ ರಸ್ತೆವರೆಗೆ ಸಾಗಿಸುವುದಕ್ಕೆ ಹಣ ನೀಡಬೇಕಿರುವುದರಿಂದ ಕನಿಷ್ಠ ೬೦೦ ರು.ನಿಂದ ೮೦೦ ರು..ವರೆಗೆ ನಷ್ಟವಾಗಲಿದೆ. ಆ ಕಾರಣಕ್ಕೆ ಆಲೆಮನೆಯವರಿಗೆ ನೀಡುವುದೇ ಉತ್ತಮ ಎಂಬ ಅಭಿಪ್ರಾಯವೂ ರೈತರಲ್ಲಿದೆ.
ಕಾರ್ಖಾನೆಗಳು ಶುರುವಾಗುವುದಕ್ಕೆ ಮುನ್ನವೇ ಸಿಕ್ಕಷ್ಟು ಕಬ್ಬನ್ನು ಅರೆಯುವ ಕಾರ್ಯದಲ್ಲಿ ಆಲೆಮನೆಗಳು ತೊಡಗಿವೆ. ಕಂಪನಿಗಳು ಕಬ್ಬು ಅರೆಯುವಿಕೆ ಆರಂಭಿಸಿದರೆ ಕಬ್ಬು ಸಿಗುವುದಿಲ್ಲ ಎಂಬ ಕಾರಣಕ್ಕೆ ಬಿರುಸಿನಿಂದ ಅರೆಯಲಾರಂಭಿಸಿವೆ.ಕೋಟ್...ಬರ ಮತ್ತು ನೀರಿನ ಕೊರತೆಯಿಂದ ಜಿಲ್ಲೆಯಲ್ಲಿ ಕಬ್ಬಿನ ಪ್ರಮಾಣ ಕಡಿಮೆಯಿದೆ. ಕಾರ್ಖಾನೆಗಳು ನಿರೀಕ್ಷಿಸಿದಷ್ಟು ಕಬ್ಬು ಈ ಬಾರಿ ಸಿಗುವುದಿಲ್ಲ. ಬೆಲ್ಲಕ್ಕೆ ಉತ್ತಮ ಬೆಲೆ ಇರುವುದರಿಂದ ಆಲೆಮನೆಗಳೂ ಕಬ್ಬನ್ನು ಅರೆಯುತ್ತಿವೆ. ಸ್ಥಳದಲ್ಲೇ ರೈತರಿಗೆ ೨೮೦೦ ರು.ವರೆಗೆ ಹಣ ಕೊಟ್ಟು ಕಬ್ಬನ್ನು ತರಲಾಗುತ್ತಿದೆ. ಹಾಗಾಗಿ ಆಲೆಮನೆಗಳ ಕಡೆಗೆ ಕಬ್ಬು ಸಾಗಿಸಲು ರೈತರು ಒಲವನ್ನು ಹೊಂದಿದ್ದಾರೆ.ಹಾಡ್ಯ ರಮೇಶ್‌ರಾಜು, ಪ್ರಾಂತ ಪ್ರಧಾನ ಕಾರ್ಯದರ್ಶಿ, ಭಾರತೀಯ ಕಿಸಾನ್ ಸಂಘಕೋಟ್..ಕಾರ್ಖಾನೆಗಳು ಆರಂಭವಾಗದಿರುವುದರಿಂದ ಆಲೆಮನೆಗಳಿಗೆ ಕಬ್ಬು ರವಾನೆಯಾಗುತ್ತಿದೆ. ಕಾರ್ಖಾನೆಗಳು ಶುರುವಾದರೆ ರೈತರು ಕಬ್ಬನ್ನು ಇಲ್ಲಿಗೇ ತರುತ್ತಾರೆ. ಎಲ್ಲಾ ಕಬ್ಬನ್ನು ಆಲೆಮನೆಯವರಿಂದಲೇ ಅರೆಯಲು ಸಾಧ್ಯವಿಲ್ಲ. ಪ್ರತಿ ವರ್ಷ ಅರೆಯುವಷ್ಟು ಕಬ್ಬು ಕಾರ್ಖಾನೆಗಳಿಗೆ ಸಿಗುವುದಿಲ್ಲ. ರೈತರಿಂದ ಹೆಚ್ಚು ಕಬ್ಬನ್ನು ಪಡೆಯುವುದಕ್ಕಾಗಿ ಖಾಸಗಿ ಕಾರ್ಖಾನೆಗಳು ಸಾಗಣೆ ವೆಚ್ಚ ಕೈಬಿಟ್ಟಿವೆ.ಸಾತನೂರು ವೇಣುಗಾಪಾಲ್, ಅಧ್ಯಕ್ಷರು, ಕಬ್ಬು ಬೆಳೆಗಾರರ ಒಕ್ಕೂಟಮೈಷುಗರ್ ಕಾರ್ಖಾನೆಯಲ್ಲಿ ಕಬ್ಬು ಸಾಗಣೆ ವೆಚ್ಚ ಕೈಬಿಡುವುದಕ್ಕೆ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನವಾಗಬೇಕು. ಜಿಲ್ಲೆಯಲ್ಲಿ ಕಬ್ಬಿನ ಬೆಳೆ ಕಡಿಮೆ ಪ್ರಮಾಣದಲ್ಲಿದೆ. ಖಾಸಗಿ ಕಾರ್ಖಾನೆಗಳು ಸಾಗಣೆ ವೆಚ್ಚ ಕೈಬಿಟ್ಟಿರುವುದರಿಂದ ಮೈಷುಗರ್‌ನಲ್ಲೂ ಅದನ್ನು ಕೈಬಿಡಬೇಕಾಗುತ್ತದೆ. ಕಾರ್ಖಾನೆ ಒಪ್ಪಿಗೆ ಮಾಡಿಕೊಂಡಿರುವ 2 ಲಕ್ಷ ಟನ್ ಕಬ್ಬು ನುರಿಸಲು ಆಡಳಿತ ಮಂಡಳಿ ತ್ವರಿತವಾಗಿ ಕಾರ್ಯೋನ್ಮುಖವಾಗಬೇಕು.
ಎಸ್.ಕೃಷ್ಣ, ಅಧ್ಯಕ್ಷರು, ಮೈಷುಗರ್ ಕಬ್ಬು ಒಪ್ಪಿಗೆದಾರರ ಸಂಘ