ಮನೆ ನಿರ್ಮಿಸುವ ಕನಸಿರುವ ಮಧ್ಯಮ ವರ್ಗದವರಿಗೆ ಪ್ರದರ್ಶನ ಅನುಕೂಲ-ಸಚಿವ ಎಚ್‌.ಕೆ. ಪಾಟೀಲ

KannadaprabhaNewsNetwork | Published : Jan 21, 2024 1:32 AM

ಸಾರಾಂಶ

ಮನೆ ನಿರ್ಮಿಸಿಕೊಳ್ಳಬೇಕು ಎನ್ನುವುದು ಪ್ರತಿಯೊಬ್ಬರ ಕನಸಾಗಿರುತ್ತದೆ. ಅದರಲ್ಲಿಯೂ ಮಧ್ಯಮ ವರ್ಗದವರ ಮನೆ ನಿರ್ಮಾಣಕ್ಕೆ ಈ ಪ್ರದರ್ಶನ ಹೆಚ್ಚು ಉಪಯುಕ್ತಕಾರಿಯಾಗಲಿದೆ ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಗದಗ: ಮನೆ ನಿರ್ಮಿಸಿಕೊಳ್ಳಬೇಕು ಎನ್ನುವುದು ಪ್ರತಿಯೊಬ್ಬರ ಕನಸಾಗಿರುತ್ತದೆ. ಅದರಲ್ಲಿಯೂ ಮಧ್ಯಮ ವರ್ಗದವರ ಮನೆ ನಿರ್ಮಾಣಕ್ಕೆ ಈ ಪ್ರದರ್ಶನ ಹೆಚ್ಚು ಉಪಯುಕ್ತಕಾರಿಯಾಗಲಿದೆ ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು. ಗದಗ ನಗರದ ತೋಂಟದ ಸಿದ್ಧಲಿಂಗೇಶ್ವರ ಕಲ್ಯಾಣ ಕೇಂದ್ರದಲ್ಲಿ ಶನಿವಾರ ಜಿಲ್ಲಾ ಎಂಜಿನಿಯರ್ಸ್ ಸಂಘದಿಂದ ಆಯೋಜಿಸಲಾಗಿರುವ ಬಿಲ್ಡ್ ಮ್ಯಾಟ್ -2024 ನ್ನು ಉದ್ಘಾಟಿಸಿ ಮಾತನಾಡಿದರು. ಪ್ರತಿ ವರ್ಷವೂ ನಡೆಯುವ ಪ್ರದರ್ಶನದಿಂದಾಗಿ ಗದಗ ನಗರದ ಜನತೆಗೆ ಮನೆಗಳ ನಿರ್ಮಾಣ ಕ್ಷೇತ್ರದಲ್ಲಿ ಆಗಿರುವ ಆವಿಷ್ಕಾರಗಳು, ಅದರಿಂದ ಸಾರ್ವಜನಿಕರಿಗೆ ಆಗುವ ಅನುಕೂಲಗಳು ಮತ್ತು ಅತ್ಯಾಧುನಿಕ ತಂತ್ರಜ್ಞಾನಗಳ ಬಗ್ಗೆ ಸೂಕ್ತವಾದ ಮಾಹಿತಿ ಮತ್ತು ಅವುಗಳು ಲಭ್ಯವಾಗುವ ಬಗ್ಗೆಯೂ ಒಂದೇ ಸೂರಿನಲ್ಲಿ ಮಾಹಿತಿ ದೊರೆಯುತ್ತದೆ. ಇಂತಹ ಪ್ರದರ್ಶನಗಳಿಂದ ಮನೆ ಕಟ್ಟುವ ಮಾಲೀಕರಿಗೆ ಸೂಕ್ತ ಮಾಹಿತಿಯೂ ದೊರೆಯಲಿದೆ. ಗದಗ ಜಿಲ್ಲಾ ಎಂಜಿನಿಯರಿಂಗ್ ಸಂಘವು ಅತೀ ಉತ್ಸಾಹದಿಂದ ಕಾರ್ಯ ನಿರ್ವಹಿಸುತ್ತಿದ್ದು ಇತರರಿಗೂ ಮಾದರಿಯಾಗಿದೆ ಎಂದರು.

ಅತಿಥಿಗಳಾಗಿ ಪಾಲ್ಗೊಂಡಿದ್ದ ವಿಪ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಕಾರ್ಯಕ್ರಮ ಆಯೋಜನೆ ಮತ್ತು ಅಚ್ಚುಕಟ್ಟು ಜನರನ್ನು ಆಕರ್ಷಿಸುವಂತೆ ಮಾಡಿದ್ದು ಇದರಿಂದಾಗಿ ನಿರ್ಮಾಣ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ಸಾರ್ವಜನಿಕರಿಗೆ ಸೂಕ್ತವಾದ ಮಾಹಿತಿ ಸ್ಥಳೀಯವಾಗಿ ಲಭ್ಯವಾಗುವಂತಾಗಲಿದೆ ಎಂದರು. ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಡಾ. ತೋಂಟದ ಸಿದ್ಧರಾಮ ಶ್ರೀಗಳು ಮಾತನಾಡಿ, ಮಹಾ ಮಾನವತಾವಾದಿ ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕನನ್ನಾಗಿ ಸರ್ಕಾರ ಮಾಡಿದೆ. ಅನುಭವ ಮಂಟಪ ಮೂಲಕ ಪ್ರಜಾಸತ್ತಾತ್ಮಕವನ್ನು ಜಗತ್ತಿಗೆ ಪರಿಚಯಿಸಿದ್ದು ಬಸವಣ್ಣವರು, ದಾಸೋಹ, ಕಾಯಕ ಮೌಲ್ಯವನ್ನು ನೀಡಿರುವ ಬಸವಣ್ಣನವರನ್ನು ಆಯ್ಕೆ ಮಾಡಿದ್ದಕ್ಕೆ ಕಾನೂನು ಸಚಿವರಾದ ಎಚ್.ಕೆ. ಪಾಟೀಲ ಹಾಗೂ ಮುಖ್ಯಮಂತ್ರಿಗಳನ್ನು ಅಭಿನಂಧಿಸುತ್ತೇನೆ ಎಂದರು. ಜಿಲ್ಲಾ ಎಂಜಿನಿಯರ್ಸ್‌ ಸಂಘದ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.

Share this article