- ಶಿಕ್ಷಣ ವ್ಯವಸ್ಥೆ ಹದಗೆಡಿಸಿದ ಸಚಿವ ಮಧು ಬಂಗಾರಪ್ಪ: ವಿಪ ಸದಸ್ಯ ಸಿದ್ಧಲಿಂಗಪ್ಪ ಆರೋಪ - - - ಕನ್ನಡಪ್ರಭ ವಾರ್ತೆ, ದಾವಣಗೆರೆ
ಶಾಲಾ ಪಠ್ಯಕ್ರಮ ಬದಲಾವಣೆ ಸೇರಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಶಿಕ್ಷಣ ಇಲಾಖೆಯಲ್ಲಿ ಹಲವಾರು ತಪ್ಪು ನಿರ್ಣಯ ಕೈಗೊಂಡು, ಶಿಕ್ಷಣ ವ್ಯವಸ್ಥೆ ಸಂಪೂರ್ಣ ಹಾಳು ಮಾಡಿದೆ ಎಂದು ವಿಧಾನ ಪರಿಷತ್ತು ಸದಸ್ಯ ಸಿದ್ಧಲಿಂಗಪ್ಪ ವಿ. ಸಂಕನೂರ ಆರೋಪಿಸಿದರು.ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಣ ಕ್ಷೇತ್ರವು ಸಂಪೂರ್ಣ ಹಾಳಾಗುವಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸಹ ಕಾರ್ಣೀಕರ್ತರಾಗಿದ್ದಾರೆ. ಶಿಕ್ಷಣ ಇಲಾಖೆಯಲ್ಲಿ ಕಾಂಗ್ರೆಸ್ ಸರ್ಕಾರದವರು ಕೈಗೊಂಡ ಕೆಲವೊಂದು ತಪ್ಪು ನಿರ್ಣಯಗಳಿಂದಾಗಿ ಶಿಕ್ಷಣದ ಗುಣಮಟ್ಟವೇ ಕುಸಿಯುತ್ತಿದೆ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಜೂನ್ 2023ರಿಂದಲೇ ಶಿಕ್ಷಣ ಕ್ಷೇತ್ರವನ್ನು ಹಾಳು ಮಾಡಲಾರಂಭಿಸಿತು. ಅಧಿಕಾರ ವಹಿಸಿಕೊಂಡ ತಕ್ಷಣವೇ ಹಿಂದೆ ಇದ್ದ ಶಾಲಾ ಪಠ್ಯಕ್ರಮ ಬದಲಾವಣೆ ಮೂಲಕ ಕಾಂಗ್ರೆಸ್ ಸರ್ಕಾರವು ಬಿಜೆಪಿ ವಿರುದ್ಧ ದ್ವೇಷದ ನಿರ್ಣಯ ಕೈಗೊಂಡಿತು. ಎನ್ಇಪಿ ರದ್ದುಪಡಿಸಿ, ಎಸ್‌ಇಪಿ ಜಾರಿಗೊಳಿಸಿತು. ಇದು ರಾಜಕೀಯಪ್ರೇರಿತ ನಿರ್ಣಯ ಎಂದು ದೂರಿದರು.ಎಸ್ಸೆಸ್ಸೆಲ್ಸಿ, ಪಿಯುಸಿಗೆ ಮೂರು ಪರೀಕ್ಷೆಗಳನ್ನು ನಡೆಸುವ ತಪ್ಪು ನಿರ್ಧಾರವನ್ನು ಕೈಗೊಂಡಿದ್ದು, ಮಾರ್ಚ್-ಏಪ್ರಿಲ್ 2024ರ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನಡೆದ ಅವಾಂತರಗಳು ಫಲಿತಾಂಶದ ಹಿನ್ನಡೆಗೂ ಕಾರಣವಾಗಿವೆ. 5, 8, 9 ಹಾಗೂ 11ನೇ ತರಗತಿಗಳಿಗೆ ಇಲಾಖೆಯಿಂದಲೇ ಪರೀಕ್ಷೆ ನಡೆಸಬೇಕೆಂಬ ನಿರ್ಧಾರವನ್ನು ಜಾರಿಗೊಳಿಸುವಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ವಿಫಲವಾಯಿತು ಎಂದು ಸಿದ್ಧಲಿಂಗಪ್ಪ ಸಂಕನೂರ ಟೀಕಿಸಿದರು.
ವಿಧಾನ ಪರಿಷತ್ತು ಈಶಾನ್ಯ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರುಣ ಶಹಾಪುರ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ನಿಕಟ ಪೂರ್ವ ಅಧ್ಯಕ್ಷ ಯಶವಂತ ರಾವ್ ಜಾಧವ್, ಎಚ್.ಎನ್. ಶಿವಕುಮಾರ, ಧನಂಜಯ ಕಡ್ಲೇಬಾಳು, ಸಂತೋಷ, ಸಂಜು, ಎಚ್.ಪಿ.ವಿಶ್ವಾಸ್, ಮಂಜುನಾಥ ಇತರರು ಇದ್ದರು.- - -
ಬಾಕ್ಸ್ ಸಮಿತಿ ರಚಿಸಿ ಲೋಪದೋಷಗಳ ತನಿಖೆ ನಡೆಸಿ ಶಿಕ್ಷಣ ಇಲಾಖೆಯ ಇಷ್ಟೆಲ್ಲಾ ಲೋಪದೋಷಗಳು ಉಂಟಾಗಲು ಶಿಕ್ಷಣ ಸಚಿವ ಮಧು ಬಂಗಾರಪ್ಪ ಇಲಾಖೆಯ ಆಗುಹೋಗುಗಳ ಬಗ್ಗೆ ಕನಿಷ್ಠ ಕಾಳಜಿಯನ್ನೇ ತೋರದೇ, ನಿರ್ಲಕ್ಷ್ಯ ಭಾವನೆ ತೋರಿದ್ದು ಸ್ಪಷ್ಟವಾಗಿದೆ. ಒಟ್ಟಾರೆ, ಆಡಳಿತ ನಡೆಸುವಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಏಪ್ರಿಲ್ 2024ರ ಎಸ್ಸೆಸ್ಸೆಲ್ಸಿಪರೀಕ್ಷೆ-1ರಲ್ಲಿ ಆಗಿರುವ ಲೋಪದೋಷಗಳ ಬಗ್ಗೆ, ತಪ್ಪಿತಸ್ಥರ ವಿರುದ್ಧ ಮೊದಲು ಕ್ರಮ ಕೈಗೊಳ್ಳಬೇಕು. 5, 8, 9 ಹಾಗೂ 11ನೇ ತರಗತಿಗಳ ಪರೀಕ್ಷೆ ನಿರ್ವಹಿಸುವಲ್ಲಿ ಆಗಿರುವ ಲೋಪದೋಷಗಳ ಕುರಿತು ತನಿಖೆ ನಡೆಸಲು, ಉನ್ನತಮಟ್ಟದ ಅಧಿಕಾರಿಗಳ ಸಮಿತಿ ರಚಿಸಬೇಕು ಎಂದು ವಿಪ ಸದಸ್ಯ ಸಿದ್ಧಲಿಂಗಪ್ಪ ಸಂಕನೂರ ಒತ್ತಾಯಿಸಿದರು.- - - -24ಕೆಡಿವಿಜಿ8:
ದಾವಣಗೆರೆಯಲ್ಲಿ ಶುಕ್ರವಾರ ವಿಧಾನ ಪರಿಷತ್ತು ಸದಸ್ಯ ಸಿದ್ಧಲಿಂಗಪ್ಪ ವಿ. ಸಂಕನೂರು ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಈಶಾನ್ಯ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರುಣ ಶಹಾಪುರ ಇತರರು ಇದ್ದರು.