ಸಿಂದಗಿ ಪಟ್ಟಾಧ್ಯಕ್ಷರು ಭಕ್ತರ ಕಲ್ಪವೃಕ್ಷವಾಗಿದ್ದರು-ಬಸಯ್ಯ ಹಿರೇಮಠ

KannadaprabhaNewsNetwork | Published : Mar 19, 2025 12:30 AM

ಸಾರಾಂಶ

ಭಕ್ತರ ಜಿಂದಗಿಯನ್ನು ಭಕ್ತಿಯ ಬಿಂದಿಗೆಯನ್ನಾಗಿ ಪರಿವರ್ತಿಸಿದ ಸಿಂದಗಿ ಪಟ್ಟಾಧ್ಯಕ್ಷರು ಭಕ್ತರ ಕಲ್ಪವೃಕ್ಷವಾಗಿದ್ದರು ಎಂದು ಉಣಕಲ್ ಸಿದ್ದಪ್ಪಜ್ಜನ ಮಠದ ಬಸಯ್ಯ ಹಿರೇಮಠ ಹೇಳಿದರು.

ನರಗುಂದ: ಭಕ್ತರ ಜಿಂದಗಿಯನ್ನು ಭಕ್ತಿಯ ಬಿಂದಿಗೆಯನ್ನಾಗಿ ಪರಿವರ್ತಿಸಿದ ಸಿಂದಗಿ ಪಟ್ಟಾಧ್ಯಕ್ಷರು ಭಕ್ತರ ಕಲ್ಪವೃಕ್ಷವಾಗಿದ್ದರು ಎಂದು ಉಣಕಲ್ ಸಿದ್ದಪ್ಪಜ್ಜನ ಮಠದ ಬಸಯ್ಯ ಹಿರೇಮಠ ಹೇಳಿದರು.

ಅವರು ತಾಲೂಕಿನ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದಲ್ಲಿ ಗುರು ಬ್ರಹ್ಮಾನಂದ ಶಿವಾನುಭವ ಧರ್ಮಸಂಸ್ಥೆ, ದೊರೆಸ್ವಾಮಿ ವಿವಿಧೋದ್ದೇಶ ಟ್ರಸ್ಟ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 368ನೇ ಮಾಸಿಕ ಶಿವಾನುಭವ ಹಾಗೂ ಸಿಂದಗಿ ಶಾಂತವೀರ ಪಟ್ಟಾಧ್ಯಕ್ಷರ 45ನೇ ಪುಣ್ಯ ಸ್ಮರಣೋತ್ಸವ ಮತ್ತು ಹೋಳಿ ಪದಗಳ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಾನಗಲ್ ಕುಮಾರ ಶಿವಯೋಗಿಗಳ ತತ್ವಸಿದ್ಧಾಂತಗಳನ್ನು ಅಕ್ಷರಶಃ ಪಾಲಿಸಿದ ಶಾಂತವೀರ ಪಟ್ಟಾಧ್ಯಕ್ಷರು ಈ ಶತಮಾನದ ಪುಣ್ಯ ಪುರುಷರು. ಈ ದೇಶ ಕಂಡ ಶ್ರೇಷ್ಠ ಸ್ವಾಮಿಗಳಾದ ಡಾ. ತೋಂಟದ ಸಿದ್ಧಲಿಂಗ ಶ್ರೀಗಳನ್ನು ಗದುಗಿನ ತೋಂಟದಾರ್ಯ ಮಠಕ್ಕೆ ನೀಡಿದ ಕೀರ್ತಿ ಪಟ್ಟಾಧ್ಯಕ್ಷರಿಗೆ ಸಲ್ಲುತ್ತದೆ ಎಂದರು.

ಕೋಪವನರಿಯದ ಶಾಂತಿ-ಸಮಾಧಾನದ ಸ್ವರೂಪದ ಸರೋವರವಾಗಿದ್ದ ಅವರು ಹಳ್ಳಿಗೆ ಏಕರಾತ್ರಿ ಪಟ್ಟಣಕ್ಕೆ ಪಂಚರಾತ್ರಿ ಎಂಬಂತೆ ತಮ್ಮ ಜೀವನದುದ್ದಕ್ಕೂ ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಿದ ಆದರ್ಶಯತಿಗಳು. ಭವರೋಗ ವೈದ್ಯರಾಗಿದ್ದ ಪೂಜ್ಯರು ಭಕ್ತರ ಮುಖದರ್ಪಣದಲ್ಲಿ ಲಿಂಗವನ್ನು ಕಂಡ ಕಾರುಣ್ಯ ಮೂರ್ತಿಗಳು ಎಂದು ಹೇಳಿದರು.ಸಾನಿಧ್ಯವಹಿಸಿದ್ದ ಶಾಂತಲಿಂಗ ಶ್ರೀಗಳು ಮಾತನಾಡಿ, ಹಾನಗಲ್ ಕುಮಾರ ಶಿವಯೋಗಿಗಳು ಕಂಡ ಕನಸನ್ನು ಸಾಕಾರಗೊಳಿಸಿದ ಪಟ್ಟಾಧ್ಯಕ್ಷರು ಕನ್ನಡದ ಕುಲಗುರುಗಳನ್ನು ಕರುನಾಡಿಗೆ ಸಮರ್ಪಿಸಿ ಆಮೂಲಕ ಕೋಮು ಸೌಹಾರ್ದತೆಯನ್ನು ಗಟ್ಟಿಗೊಳಿಸಿದರು. ಮನುಕುಲದ ಒಳಿತಿಗಾಗಿ ಶ್ರಮಿಸಿದ ಅವರು ಯಾವುದೇ ಜಾತಿ-ಮತ-ಪಂಥಕ್ಕೆ ಸೀಮಿತವಾಗಿರದೆ ಸರ್ವರನ್ನೂ ಸಮಭಾವದಿಂದ ಕಂಡು ಈ ನಾಡಿನಲ್ಲಿ ಸಂಸ್ಕೃತಿ-ಸಂಸ್ಕಾರ ಬಿತ್ತಿದ ಮಹಿಮಾತೀತರು. ಅವರ ಜೀವನವೇ ನಮಗೆಲ್ಲ ಆದರ್ಶಪ್ರಾಯ ಎಂದರು. ಈ ಸಂದರ್ಭದಲ್ಲಿ ಗ್ರಾಮದ ತಿಪ್ಪಣ್ಣ ನರಸಾಪೂರ, ಈರಪ್ಪ ಬದ್ನೂರ, ಶಿವನಪ್ಪ ಹಾದಿಮನಿ, ಹನಮಪ್ಪ ದಂಡಿನ ಇವರು ಹೋಳಿ ಹುಣ್ಣಿಮೆ ಪದಗಳನ್ನು ಹಾಡಿ ಸಭಿಕರನ್ನು ರಂಜಿಸಿದರು.

ವೇದಿಕೆ ಮೇಲೆ ವಿಶ್ರಾಂತ ಉಪತಹಸೀಲ್ದಾರ್‌ ವಿ.ಜಿ. ಐನಾಪೂರ, ಹೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರ ವಿಶ್ವನಾಥ ಶಿರಹಟ್ಟಿಮಠ, ನಾಗಯ್ಯ ಶಿರಹಟ್ಟಿಮಠ, ಕಸಾಪ ಅಧ್ಯಕ್ಷ ಬಿ .ಸಿ. ಹನಮಂತಗೌಡ್ರ, ದಸಾಪ ಅಧ್ಯಕ್ಷೆ ಶೋಭಾ ಆಡಿನಿ, ವೀರಯ್ಯ ವಸ್ತ್ರದ, ಶಾಂತಪ್ಪ ಆಡಿನ, ಪ್ರೊ.ಆರ್.ಬಿ. ಚಿನಿವಾಲರ, ಇದ್ದರು.

ಶಿಕ್ಷಕ ಮಹಾಂತೇಶ ಹಿರೇಮಠ ಸ್ವಾಗತಿಸಿದರು. ಪ್ರೊ. ರಮೇಶ ಐನಾಪೂರ ಕಾರ್ಯಕ್ರಮ ನಿರೂಪಿಸಿದರು.

Share this article