ಮೆಡಿಕಲ್‌ ಕಾಲೇಜು, ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗೆ ಆಗ್ರಹಿಸಿ ಧರಣಿ ಆರಂಭ

KannadaprabhaNewsNetwork | Published : Nov 28, 2023 12:30 AM

ಸಾರಾಂಶ

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಿ ಹೊರ ಜಿಲ್ಲೆಗಳಿಗೆ ಚಿಕಿತ್ಸೆಗೆ ಅಲೆದಾಡುವುದನ್ನು ತಪ್ಪಿಸಬೇಕಾಗಿದೆ. ಇನ್ನು ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ತಲುಪಿಸುವ ಹೊತ್ತಿಗೆ ಜೀವ ಕಳೆದುಕೊಳ್ಳುವ ಸಂದರ್ಭಗಳು ಇವೆ.

ಶಿರಸಿ:

ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಬ್ಯಾಗದ್ದೆ ನೇತೃತ್ವದಲ್ಲಿ ನಗರದ ಮಿನಿ ವಿಧಾನಸೌಧದ ಎದುರು ಸೋಮವಾರ ಧರಣಿ ಆರಂಭವಾಗಿದೆ.

ನಗರದ ಮಾರಿಕಾಂಬಾ ದೇವಾಲಯದಲ್ಲಿ ಬೆಳಗ್ಗೆ ಪೂಜೆ ಸಲ್ಲಿಸಿ ಆನಂತರ ಮೆರವಣಿಗೆಯಲ್ಲಿ ಶಹರದ ವಿವಿಧ ಪ್ರದೇಶಗಳ ಮೂಲಕ ಆಗಮಿಸಿ ಧರಣಿ ಆರಂಭಿಸಲಾಗಿದ್ದು, ಏಳು ದಿನಗಳ ಕಾಲ ನಡೆಯಲಿದೆ ಎಂದು ಅನಂತಮೂರ್ತಿ ಹೆಗಡೆ ತಿಳಿಸಿದ್ದಾರೆ. ಆಸ್ಪತ್ರೆ ನಿರ್ಮಿಸಿ ಜನರ ಜೀವ ಉಳಿಸಿ, ಆಸ್ಪತ್ರೆಗೆ ದೂರದೂರುಗಳಿಗೆ ಅಲೆಯುವುದನ್ನು ತಪ್ಪಿಸಿ ಮುಂತಾದ ಘೋಷಣೆ ಕೂಗುತ್ತಾ ಭಿತ್ತಿಪತ್ರ ಹಿಡಿದು ಸಾಗಲಾಯಿತು.

ಡಿ. ೩ರ ವರೆಗೆ ಧರಣಿ ನಡೆಸಲಾಗುತ್ತಿದ್ದು, ಡಿ. ೪ರಂದು ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಹೊರಭಾಗದಲ್ಲಿ ಧರಣಿ ನಡೆಸಲಾಗುತ್ತಿದೆ. ಅಲ್ಲದೇ ಜಿಲ್ಲೆಯ ಈ ಬೇಡಿಕೆಯ ಮನವಿಯನ್ನು ಮುಖ್ಯಮಂತ್ರಿಗೆ ಸಲ್ಲಿಸಲಾಗುತ್ತಿದೆ ಎಂದು ಹೋರಾಟಗಾರರು ತಿಳಿಸಿದರು.

ಧರಣಿ ಸಂದರ್ಭದಲ್ಲಿ ಮಾತನಾಡಿದ ಅನಮತಮೂರ್ತಿ ಹೆಗಡೆ, ಜನಪರ ಕಾಳಜಿ ಇದ್ದಾಗ ಮಾತ್ರ ಮೂಲಭೂತ ಸೌಲಭ್ಯ, ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗುತ್ತದೆ. ಮೂಲಭೂತ ವ್ಯವಸ್ಥೆಗಳು ಆದಾಗ ಕಂಪನಿಗಳು ಬರುತ್ತವೆ. ಉದ್ಯೋಗಗಳು ಸೃಷ್ಟಿಯಾಗುತ್ತವೆ. ಯುವಕರು ಉದ್ಯೋಗ ಅರಸಿ ಹೋರ ಹೋಗುವುದು ತಪ್ಪುತ್ತದೆ. ತಮ್ಮೂರಲ್ಲೇ ಇದ್ದು ಕೆಲಸ ಕಾರ್ಯ ಮಾಡಬಹುದಾಗಿದೆ. ಆದರೆ ಜಿಲ್ಲೆಯಲ್ಲಿ ಜ್ವಲಂತ ಸಮಸ್ಯೆಯಿದೆ. ಇದಕ್ಕಾಗಿ ಹೋರಾಟ ಮಾಡಬೇಕಾದ ಅನಿವಾರ್ಯತೆ ಬಂದಿದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಿ ಹೊರ ಜಿಲ್ಲೆಗಳಿಗೆ ಚಿಕಿತ್ಸೆಗೆ ಅಲೆದಾಡುವುದನ್ನು ತಪ್ಪಿಸಬೇಕಾಗಿದೆ. ಇನ್ನು ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ತಲುಪಿಸುವ ಹೊತ್ತಿಗೆ ಜೀವ ಕಳೆದುಕೊಳ್ಳುವ ಸಂದರ್ಭಗಳು ಇವೆ. ಕುಟುಂಬದಲ್ಲಿ ಒಬ್ಬರ ಜೀವ ಹೋಯಿತು ಅಂದರೆ ಅದು ಬೀದಿ ಪಾಲಾಗುವ ಸ್ಥಿತಿ ಬರುತ್ತದೆ. ಇಂತಹ ಸಂಕಷ್ಟದ ಸ್ಥಿತಿ ದೂರವಾಗಬೇಕಾದರೆ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾಗಲೇ ಬೇಕು ಎಂದರು.

ರೈತ ಹೋರಾಟಗಾರ ಚಿದಾನಂದ ಹರಿಜನ ಮುಂಡಗೋಡ ಮಾತನಾಡಿ, ನಾವು ಧರಣಿ ಕುಳಿತ ಸ್ಥಳಕ್ಕೆ ಜನಪ್ರತಿನಿಧಿಗಳು ಬಂದು ಸಮಸ್ಯೆ ಆಲಿಸಬೇಕು. ಈ ಹೋರಾಟದಿಂದ ನಾವು ಯಾವುದೇ ಕಾರಣಕ್ಕೂ ಹಿಂಜರಿಯುವ ಪ್ರಶ್ನೆಯೇ ಇಲ್ಲ ಎಂದರು.

ಪ್ರಮುಖರಾದ ಪರಮಾನಂದ ಹೆಗಡೆ, ಕೇಮು ವಂದಿಗೆ ಮುಂತಾದವರು ಪಾಲ್ಗೊಂಡರು.

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಜಿಲ್ಲೆಯಲ್ಲಿ ಕಲ್ಪಿಸುವುದಕ್ಕೆ ನಡೆಯುತ್ತಿರುವ ಹೋರಾಟಕ್ಕೆ ಎಲ್ಲರೂ ಕೈಜೋಡಿಸಬೇಕು. ಇದು ಯಾವುದೇ ಸಮುದಾಯದ, ಪಕ್ಷದ ಹೋರಾಟವಲ್ಲ. ಈ ವ್ಯವಸ್ಥೆ ಆಗುವವರೆಗೂ ಹೋರಾಟ ನಡೆಸುತ್ತೇವೆ ಎಂದು ಅನಂತಮೂರ್ತಿ ಹೆಗಡೆ ಬ್ಯಾಗದ್ದೆ ಹೇಳಿದರು.

Share this article