ಬಸವರಾಜ ಹಿರೇಮಠ
ಶಿಗ್ಗಾಂವಿ: ತಾಲೂಕಿನ ತಡಸ ಗ್ರಾಮದಿಂದ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿಗೆ ಹೋಗುವ ರಾಜ್ಯ ಹೆದ್ದಾರಿಯಲ್ಲಿ ಗುಂಡಿಗಳು ಬಿದ್ದಿದ್ದು, ಗುಂಡಿಗಳ ಮಧ್ಯೆ ರಸ್ತೆಯೇ ಕಾಣದಾಗಿದೆ. ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಪ್ರಯಾಣ ಮಾಡುವಂತಾಗಿದೆ. ತಕ್ಷಣ ಈ ರಸ್ತೆ ರಿಪೇರಿ ಮಾಡಬೇಕು ಎಂದು ವಿವಿಧ ಸಂಘಟನೆಗಳು ಆಗ್ರಹಿಸಿವೆ.ಶಿಗ್ಗಾಂವಿ ತಾಲೂಕಿನ ತಡಸ ಗ್ರಾಮವು ಧಾರವಾಡ, ಉತ್ತರ ಕನ್ನಡ ಹಾಗೂ ಹಾವೇರಿ ಜಿಲ್ಲೆಯ ಮಲೆನಾಡಿನ ಅಂಚಿನ ಕೊನೆಯ ಗ್ರಾಮವಾಗಿದೆ. ಹಲವು ಪ್ರವಾಸಿತಾಣ ಸಂಪರ್ಕಿಸುವ ಕೊಂಡಿಯಾಗಿದೆ. ಗ್ರಾಮದ ಮೂಲಕ ಹುಬ್ಬಳ್ಳಿ- ಶಿರಸಿ ರಾಜ್ಯ ಹೆದ್ದಾರಿ ಹಾದುಹೋಗುತ್ತದೆ. ಪ್ರತಿವರ್ಷ ಮಳೆಗಾಲದಲ್ಲಿ ರಸ್ತೆ ಹಾಳಾಗಿ ರಸ್ತೆ ತುಂಬೆಲ್ಲ ಗುಂಡಿಗಳು ಬಿದ್ದು ವಾಹನ ಸವಾರರು ಪ್ರಾಣ ಕೈಯಲ್ಲಿ ಹಿಡಿದುಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.
ತಡಸ ಗ್ರಾಮದಿಂದ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿಗೆ ಹೋಗುವ ರಾಜ್ಯ ಹೆದ್ದಾರಿ ಗೋಳು ಹೇಳತೀರದಾಗಿದೆ. ಕೇವಲ ಅರ್ಧ ಗಂಟೆಯಲ್ಲಿ ತಲುಪಬೇಕಾದ ಹಾದಿಗೆ ಈಗ ಒಂದೂವರೆ ಗಂಟೆ ಬೇಕು. ಆದರೂ ಜೀವದ ಗ್ಯಾರಂಟಿ ಮಾತ್ರ ಇಲ್ಲವಾಗಿದೆ ಎಂದು ವಾಹನ ಸವಾರ ಆಷ್ಪಾಕಲಿ ಮತ್ತೇಖಾನ ಹೇಳುತ್ತಾರೆ.ಭಾರಿ ಪ್ರಮಾಣದಲ್ಲಿ ತಗ್ಗು ಬಿದ್ದಿದ್ದು, ಸುರಿಯುತ್ತಿರುವ ಮಳೆಯಲ್ಲಿ ನೀರು ತುಂಬಿಕೊಂಡು ನಿತ್ಯ ಅಪಘಾತ ಸಂಭವಿಸುತ್ತಲೇ ಇರುತ್ತವೆ. ಶಿಗ್ಗಾಂವಿ ಹಾಗೂ ಮುಂಡಗೋಡ ಈ ಎರಡೂ ತಾಲೂಕಿನ ವ್ಯಾಪ್ತಿಗೆ ಒಳಪಡುವುದರಿಂದ ಅಧಿಕಾರಿಗಳು ಕ್ಯಾರೇ ಅನ್ನುತ್ತಿಲ್ಲ ಎಂಬುದು ಸ್ಥಳೀಯ ನಿವಾಸಿಗಳ ಆಕ್ರೋಶವಾಗಿದೆ.
ಮುರ್ಡೇಶ್ವರ, ಯಾಣ, ಧರ್ಮಸ್ಥಳ, ಶಿರಸಿ, ಸಹಸ್ರಲಿಂಗ, ಉಡುಪಿ ಹೀಗೆ ಹಲವು ಪ್ರವಾಸಿ ತಾಣಗಳಿಗೆ ಹುಬ್ಬಳ್ಳಿಯಿಂದ ಹಾದುಹೋಗುವ ಪ್ರಮುಖ ಮಾರ್ಗ ಇದಾಗಿದೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಈ ರಾಜ್ಯ ಹೆದ್ದಾರಿ ದುರಸ್ತಿ ಕಾರ್ಯ ಮಾಡಿ ಪ್ರವಾಸಿಗರಿಗೆ ಅನುಕೂಲ ಮಾಡಬೇಕು ಎಂಬುದು ಪ್ರವಾಸಿಗರ ಅಳಲಾಗಿದೆ.ರಸ್ತೆಗೆ ಚಾಚಿದ ಮರಗಳು: ರಾಜ್ಯ ಹೆದ್ದಾರಿಯ ಅಕ್ಕಪಕ್ಕದಲ್ಲೆಲ್ಲ ಅಪಾರ ಪ್ರಮಾಣದಲ್ಲಿ ಗಿಡ- ಗಂಟಿಗಳು ಬೆಳೆದು ರಸ್ತೆಗೆ ಬಾಗಿದ್ದು, ಮುಂದೆ ಬರುವ ವಾಹನ ಸವಾರರಿಗೆ ಕಾಣದಂತಾಗಿದೆ. ಅಧಿಕಾರಿಗಳು ರಸ್ತೆ ಅಕ್ಕಪಕ್ಕದಲ್ಲಿನ ಗಿಡಗಂಟಿಗಳನ್ನು ತೆರವುಗೊಳಿಸಿದರೆ ಹಲವು ಅಪಘಾತ ತಪ್ಪಿಸಲು ಸಾಧ್ಯ ಎಂದು ಸ್ಥಳೀಯರು ಹೇಳುತ್ತಾರೆ.
ತಾಯವ್ವ ದೇವಿಯ ದೇವಸ್ಥಾನದಿಂದ ಹಿಡಿದು ವಡಗಟ್ಟ ನಾಕಾ ಹಾಗೂ ಮುಂಡಗೋಡ ತಾಲೂಕಿನ ವ್ಯಾಪ್ತಿಗೆ ಒಳಪಡುವ ರಸ್ತೆಯವರೆಗೆ ಅಪಾರ ಗಾತ್ರದ ಗುಂಡಿಗಳು ಮರಣಕ್ಕೆ ಆಹ್ವಾನ ನೀಡುವಂತಿವೆ. ಶೀಘ್ರದಲ್ಲಿ ಸರಿಪಡಿಸದೇ ಇದ್ದರೆ ಮುಂದಿನ ದಿನಮಾನಗಳಲ್ಲಿ ಉಗ್ರ ಹೋರಾಟ ಮಾಡುತ್ತೇವೆ ಎಂದು ಕರವೇ(ಗಜಸೇನೆ) ಜಿಲ್ಲಾಧ್ಯಕ್ಷ ಮಂಜುನಾಥ ಓಲೇಕಾರ ಹೇಳಿದರು.ತಡಸ- ಮುಂಡಗೋಡ ರಸ್ತೆಯಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ ನಾಲ್ಕು ಅಪಘಾತ ಪ್ರಕರಣಗಳು ನಡೆದಿದ್ದು, ತಡಸ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ. ಆದರೆ ಕೆಲವು ಪ್ರಕರಣಗಳು ದಾಖಲಾಗುವುದಿಲ್ಲ ಎಂದು ತಡಸ ಗ್ರಾಮಸ್ಥರು ಹೇಳುತ್ತಾರೆ.