ಕನ್ನಡಪ್ರಭ ವಾರ್ತೆ ಉಡುಪಿ
ಸಮುದ್ರಪಾಲಾಗುತ್ತಿದ್ದ ನೂರಾರು ಮಂದಿಯನ್ನು ರಕ್ಷಿಸಿದ, ಎಂಥೆಂಥ ಆಳದ ನದಿ, ಕೆರೆಗಳಿಂದ ಮೃತದೇಹಗಳನ್ನು ಮೇಲೆತ್ತಿದ ಈಶ್ವರ್ ಮಲ್ಪೆ ಅವರ ಅಭಿಮಾನಿಯಾಗಿದ್ದ ಉದ್ಯಾವರದ ನಿವಾಸಿ ಪ್ರದೀಪ್ ಅವರ ಪತ್ನಿ ಸೋನಿ ಮೃತಪಟ್ಟವರು.
ಪತಿ ಪತ್ನಿ ಇಬ್ಬರೂ ಸಮಾಜಸೇವಕರು. ಜಿಲ್ಲಾಸ್ಪತ್ರೆಯಲ್ಲಿ ಮೃತರಾಗುವ ಅಸಹಾಯಕ ಅನಾಥರ ನೂರಾರು ಶವಗಳಿಗೆ ಮುಕ್ತಿ ನೀಡಿದ್ದಾರೆ. ತಮಗೆ ಮಾಹಿತಿ ಬಂದ ಕೂಡಲೇ ಆಸ್ಪತ್ರೆಗೆ ಧಾವಿಸಿ, ಅನಾಥ ಶವಗಳಿಗೆ ಹೆಗಲು ಕೊಡುವುದು ಮಾತ್ರವಲ್ಲದೇ, ಅಂತ್ಯಸಂಸ್ಕಾರಕ್ಕೆ, ಎಲ್ಲ ಅಂತಿಮ ಕ್ರಿಯೆಗಳನ್ನು ಮಾಡುವ ಪುಣ್ಯಜೀವಿಗಳವರು. ತಮ್ಮ ಈ ಸಮಾಜಸೇವೆಯಿಂದಾಗಿಯೇ ಅಪತ್ಬಾಂಧವ ಈಶ್ವರ ಮಲ್ಪೆ ಅವರ ಪರಿಚಯವಾಗಿದ್ದು, ಮಾತ್ರವಲ್ಲದೇ ಅವರ ಅಪ್ಪಟ ಅಭಿಮಾನಿಗಳೂ ಆಗಿದ್ದರು.ಆದರೆ ಇತ್ತೀಚೆಗೆ ಸೋನಿ ಅವರು ಅಚಾನಕ್ ಆಗಿ ಅನಾರೋಗ್ಯ ಪೀಡಿತರಾದರು. ಕಳೆದ ಕೆಲವು ದಿನಗಳಿಂದ ಉಡುಪಿಯ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಆದರೆ ಅವರಿಗೆ ತಾನಿನ್ನು ಬದುಕುವುದಿಲ್ಲ ಎಂದೆನಿಸಿತ್ತೋ ಏನೋ, ನನಗೇನಾದರೂ ಹೆಚ್ಚು ಕಡಿಮೆ ಆದರೆ ನಾನು ಟೀಮ್ ಈಶ್ವರ ಮಲ್ಪೆ ಜೆರ್ಸಿ (ಟಿ ಶರ್ಟ್)ಯನ್ನು ಧರಿಸಿಯೇ ಸಾಯಬೇಕು ಎಂದು ಪತಿಯಲ್ಲಿ ಹೇಳಿದ್ದರು.