ಮೂರು ಮಕ್ಕಳು ಮೃತಪಟ್ಟ ಬಳಿಕ ಎಚ್ಚೆತ್ತ ಪಾಲಿಕೆ

KannadaprabhaNewsNetwork | Published : Jun 10, 2024 12:51 AM

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ನಗರದ ಗಚ್ಚಿನಕಟ್ಟಿ ಕಾಲೋನಿಯ ಮೂರು ಮಕ್ಕಳು ಮೃತಪಟ್ಟ ಬಳಿಕ ವಿಜಯಪುರ ಮಹಾನಗರ ಪಾಲಿಕೆ ಎಚ್ಚೆತ್ತುಕೊಂಡಿದೆ. ಇಂಡಿ ರಸ್ತೆಯಲ್ಲಿರುವ ತ್ಯಾಜ್ಯ ನೀರು ಶುದ್ಧೀಕರಣ ಘಟಕದ ಸುತ್ತಲೂ ತಂತಿ ಬೇಲಿ ಹಾಕಿಸಿದ್ದು, ಗೇಟ್ ಕೂಡ ಅಳವಡಿಸಿದ್ದಾರೆ. ಸುರಕ್ಷತೆಯ ದೃಷ್ಟಿಯಿಂದ ಘಟಕದ ಆವರಣದಲ್ಲಿ ಸಿಸಿಟಿವಿ ಹಾಗೂ ಭದ್ರತಾ ಸಿಬ್ಬಂದಿ ನೇಮಿಸಲಾಗಿದೆ. ಇದರಿಂದಾಗಿ ಆ ರಸ್ತೆಯಲ್ಲಿ ಶಾಲೆಗೆ ಹೋಗುವ ಮಕ್ಕಳ ಪಾಲಕರು ಇದೀಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ವಿಜಯಪುರ

ನಗರದ ಗಚ್ಚಿನಕಟ್ಟಿ ಕಾಲೋನಿಯ ಮೂರು ಮಕ್ಕಳು ಮೃತಪಟ್ಟ ಬಳಿಕ ವಿಜಯಪುರ ಮಹಾನಗರ ಪಾಲಿಕೆ ಎಚ್ಚೆತ್ತುಕೊಂಡಿದೆ. ಇಂಡಿ ರಸ್ತೆಯಲ್ಲಿರುವ ತ್ಯಾಜ್ಯ ನೀರು ಶುದ್ಧೀಕರಣ ಘಟಕದ ಸುತ್ತಲೂ ತಂತಿ ಬೇಲಿ ಹಾಕಿಸಿದ್ದು, ಗೇಟ್ ಕೂಡ ಅಳವಡಿಸಿದ್ದಾರೆ. ಸುರಕ್ಷತೆಯ ದೃಷ್ಟಿಯಿಂದ ಘಟಕದ ಆವರಣದಲ್ಲಿ ಸಿಸಿಟಿವಿ ಹಾಗೂ ಭದ್ರತಾ ಸಿಬ್ಬಂದಿ ನೇಮಿಸಲಾಗಿದೆ. ಇದರಿಂದಾಗಿ ಆ ರಸ್ತೆಯಲ್ಲಿ ಶಾಲೆಗೆ ಹೋಗುವ ಮಕ್ಕಳ ಪಾಲಕರು ಇದೀಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ವಿಜಯಪುರದ ಗಚ್ಚಿನಕಟ್ಟಿ ಕಾಲೋನಿಯ ಮನೆಯಿಂದ ನಾಪತ್ತೆಯಾಗಿದ್ದ ಮೂವರು ಮಕ್ಕಳು ಕಳೆದ ಮೇ13 ರಂದು ಇಂಡಿ ರಸ್ತೆಯಲ್ಲಿರುವ ನೀರು ಶುದ್ಧಿಕರಣ ಘಟಕದ ಕಾಲುವೆಯಲ್ಲಿ ಶವವಾಗಿ ಪತ್ತೆಯಾಗಿದ್ದರು.ಶಾಲೆಗಳಿಗೆ ರಜೆ ಹಿನ್ನೆಲೆ ಗಚ್ಚಿನಕಟ್ಟಿ ಕಾಲೋನಿ ನಿವಾಸಿ ಶ್ರೀಕಾಂತ ಜನಗೌಳಿ ಅವರ ಮಗ ಮಿಹೀರ್ ಹಾಗೂ ಗದಗನಿಂದ ಬಂದಿದ್ದ ಅವರ ಸಂಬಂಧಿಕರ ಎರಡು ಮಕ್ಕಳು ಆಟವಾಡುತ್ತ ಇಂಡಿ ರಸ್ತೆಯ ಬಳಿ ಇರುವ ಮಹಾನಗರ ಪಾಲಿಕೆಯ ತ್ಯಾಜ್ಯ ನೀರು ಶುದ್ಧಿಕರಣ ಘಟಕದಲ್ಲಿ ಬಿದ್ದು ಪ್ರಾಣ ಕಳೆದುಕೊಂಡಿದ್ದವು. ಘಟನೆ ಬಳಿಕ ಘಟಕದ ಸುತ್ತಮುತ್ತ ಭದ್ರತೆ ಹಾಗೂ ಸುರಕ್ಷತೆ ಕ್ರಮಗಳು ಇಲ್ಲದಿರುವುದೇ ಘಟನೆಗೆ ಕಾರಣ ಎಂದು ಆರೋಪಿಸಿ ಸಾಕಷ್ಟು ಆಕ್ರೋಶ ಕೇಳಿ ಬಂದಿತ್ತು. ಅದರಿಂದ ಎಚ್ಚೆತ್ತ ಪಾಲಿಕೆ ಇದೀಗ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದೆ.

ಘಟನೆ ಬಗ್ಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಹಾಗೂ ಶೇಖರಗೌಡ ರಾಮತನಾಳ ಸೇರಿದಂತೆ ಅಧಿಕಾರಿಗಳು ಘಟನಾ ಸ್ಥಳ ವಿಕ್ಷಣೆ ಮಾಡಿ ಮೃತ ಮಕ್ಕಳ ಕುಟುಂಬಸ್ಥರನ್ನು ಗದಗ ಹಾಗೂ ವಿಜಯಪುರದಲ್ಲಿ ಭೇಟಿ ಮಾಡಿ ಸಾಂತ್ವನ ಹೇಳಿದ್ದರು. ನಂತರ ಸಾವಿಗಿಡಾಗಿದ್ದ ಮಕ್ಕಳ ಕುಟುಂಬಕ್ಕೆ ಪಾಲಿಕೆಯಿಂದ ಸೂಕ್ತ ಪರಿಹಾರ ನೀಡಬೇಕು. ಅಲ್ಲದೇ ಘಟಕದ ಸುತ್ತಲೂ ತಡೆಗೋಡೆ ಅಥವಾ ತಂತಿ ಬೇಲಿ ನಿರ್ಮಿಸಿ, ಸಿಸಿ ಟಿವಿ, ಹಾಗೂ ಗೇಟ್ ಅಳವಡಿಸಬೇಕು ಎಂದು ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿದ್ದರು.

ಸದ್ಯ ಪಾಲಿಕೆ ಅಧಿಕಾರಿಗಳು ನೀರು ಶುದ್ಧಿಕರಣ ಘಟಕದ ಸೂತ್ತಲೂ ಬೇಲಿ ಹಾಕಿಸಿದ್ದು, ಗೇಟ್ ಅಳವಡಿಸಿದ್ದಾರೆ. ಸುರಕ್ಷತೆಯ ದೃಷ್ಠಿಯಿಂದ ಸಿಸಿಟಿವಿ ಅಳವಡಿಸಿ,ಗಾರ್ಡ್‌ನ್ನು ನೇಮಕ ಮಾಡಲಾಗಿದೆ.

-----------------------------

ಕೋಟ್:ಪಾಲಿಕೆ ಆಯುಕ್ತರು ಶುದ್ಧಿಕರಣ ಘಟಕದ ಸೂತ್ತಲೂ ಸುರಕ್ಷತೆ ದೃಷ್ಟಿಯಿಂದ ಬೇಲಿ ಹಾಗೂ ಗೇಟ್ ಹಾಕಿಸಿದ್ದಾರೆ. ಮೃತ ಮಕ್ಕಳ ಕುಟುಂಬಸ್ಥರಿಗೆ ಗರಿಷ್ಠ ಪರಿಹಾರ ನೀಡುವಂತೆ ನಿರ್ದೇಶನ ನೀಡಲಾಗಿದೆ. ಆದಷ್ಟು ಬೇಗ ಮೃತ ಮಕ್ಕಳ ಕುಟುಂಬಕ್ಕೆ ಪರಿಹಾರ ನೀಡಬೇಕು.ಶಶಿಧರ ಕೋಸಂಬೆ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರು.

Share this article