ಗ್ಯಾಸ್‌ ಸೋರಿಕೆಯಿಂದ ಉಂಟಾದ ಅಗ್ನಿ ಅವಘಡ : ಪುತ್ರನಿಗೆ ತಿಳಿದಿಲ್ಲ ಅಪ್ಪನ ಸಾವು !

KannadaprabhaNewsNetwork |  
Published : Jan 03, 2025, 12:34 AM ISTUpdated : Jan 03, 2025, 11:35 AM IST
112 | Kannada Prabha

ಸಾರಾಂಶ

ಕಳೆದ ಆರು ವರ್ಷದಿಂದ ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ವ್ರತ ಮಾಡುತ್ತಿದ್ದ ಪ್ರಕಾಶ, ಈ ಸಲ 11 ವರ್ಷದ ಪುತ್ರ ವಿನಾಯಕ ಕೂಡ ಮಾಲೆ ಧರಿಸಿದ್ದ.

ಶಿವಾನಂದ ಗೊಂಬಿ

ಹುಬ್ಬಳ್ಳಿ:  "ನಮ್‌ ಯಜಮಾನರು ಅಯ್ಯಪ್ಪನ ಪಾದ ಸೇರಿದರು.., ಅಪ್ಪ ಸತ್ತಿದ್ದನ್ನು ಇನ್ನು ದವಾಖಾನ್ಯಾಗ ಇರೋ ಮಗನಿಗೆ ತಿಳಿಸಿಲ್ಲ. ಹ್ಯಾಂಗ್‌ ತಿಳಿಸೋದು. ಅವರಿಲ್ಲದೇ ಮನಿ ಹ್ಯಾಂಗ್‌ ನಡೆಸಬೇಕೋ ಗೊತ್ತಾಗವಲ್ತು..!

ಇದು ಗ್ಯಾಸ್‌ ಸೋರಿಕೆಯಿಂದ ಉಂಟಾದ ಅಗ್ನಿ ಅವಘಡದಲ್ಲಿ ಗಾಯಗೊಂಡು ಮೃತಪಟ್ಟಿರುವ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳ ಪ್ರಕಾಶ ಬಾರಕೇರ ಅವರ ಪತ್ನಿ ರೇಖಾ ಮಾತುಗಳಿವು.

ಈ ಘಟನೆಯಲ್ಲಿ ಗಾಯಗೊಂಡಿದ್ದ 9 ಜನರಲ್ಲಿ 8 ಜನ ಮೃತಪಟ್ಟಿದ್ದಾರೆ. ಇವರಲ್ಲಿ ಪ್ರಕಾಶ ಬಾರಕೇರ (36) ಹಾಗೂ ಆತನ ಪುತ್ರ ವಿನಾಯಕ ಬಾರಕೇರ (11) ಕೂಡ ಗಾಯಗೊಂಡಿದ್ದರು. ಅದರಲ್ಲೀಗ ಪ್ರಕಾಶ ಕೂಡ ಮೃತಪಟ್ಟಿದ್ದಾನೆ. ಪುತ್ರ ವಿನಾಯಕ ಚೇತರಿಸಿಕೊಳ್ಳುತ್ತಿದ್ದಾನೆ. ಆದರೆ, ಆತನಿಗೆ ತನ್ನ ತಂದೆ ತೀರಿಹೋಗಿದ್ದು ಗೊತ್ತಿಲ್ಲ.

ಮನೆಯಲ್ಲಿ ಹೇಳೋಕೆ ಹೋಗಿಲ್ಲ.

ಕುಟುಂಬದ ಪರಿಸ್ಥಿತಿ ನೋಡಿದರೆ ಹೇಳಿಕೊಳ್ಳುವಂತಹ ಸಿರಿವಂತ ಕುಟುಂಬವಲ್ಲ. ಪ್ರಕಾಶ ಬಾರಕೇರ ಇಲ್ಲಿನ ಇಸ್ಕಾನ್‌ನಲ್ಲಿ ಅಕ್ಷಯ ಪಾತ್ರೆ ಬಿಸಿಯೂಟ ತಯಾರಿಸುವ ಕೆಲಸ ಮಾಡುತ್ತಿದ್ದ. ಕಳೆದ 17 ವರ್ಷದಿಂದ ಈತ ಇಲ್ಲೇ ದುಡಿಯುತ್ತಿದ್ದನಂತೆ. ಕಳೆದ 12 ವರ್ಷದ ಹಿಂದೆ ಉಣಕಲ್‌ನಲ್ಲಿ ಸಾಮೂಹಿಕ ವಿವಾಹದಲ್ಲಿ ಸುಳ್ಳ ಗ್ರಾಮದ ರೇಖಾ ಎಂಬುವವರೊಂದಿಗೆ ಮದುವೆ ಮಾಡಿಕೊಂಡಿದ್ದ.

ಕಳೆದ ಆರು ವರ್ಷದಿಂದ ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ವ್ರತ ಮಾಡುತ್ತಿದ್ದ ಪ್ರಕಾಶ, ಈ ಸಲ 11 ವರ್ಷದ ಪುತ್ರ ವಿನಾಯಕ ಕೂಡ ಮಾಲೆ ಧರಿಸಿದ್ದ. ಇದೀಗ ಮನೆಯಲ್ಲಿ ಇನ್ನಿಬ್ಬರು ಸಣ್ಣ ಸಣ್ಣ ಮಕ್ಕಳಿದ್ದಾರೆ. ಅವರಲ್ಲಿ ಒಬ್ಬಾತ 2 ತರಗತಿ ಓದುತ್ತಿದ್ದರೆ, ಕೊನೆಯ ಪುತ್ರಿ ಈಗಿನ್ನು ಎಲ್‌ಕೆಜಿ ಓದುತ್ತಿದ್ದಾಳೆ.

ಮನೆಯಲ್ಲಿರುವ ಮಕ್ಕಳಿಬ್ಬರು ಅಪ್ಪ-ಅಪ್ಪ ಅಂತ ಕನವರಿಸುತ್ತಿದ್ದಾರೆ. ಅವರನ್ನು ಹೇಗೆ ಸಮಾಧಾನ ಮಾಡುವುದು ತಿಳಿವಲ್ತು ಎಂದು ಗೋಳಿಡುತ್ತಾಳೆ ತಾಯಿ ರೇಖಾ.

ಕುಟುಂಬ ನಿರ್ವಹಣೆ ಸವಾಲು:

ಪ್ರಕಾಶ ತನ್ನ ತಾಯಿ, ಪತ್ನಿ ರೇಖಾ ಹಾಗೂ ಮೂವರು ಮಕ್ಕಳೊಂದಿಗೆ ವಾಸವಾಗಿದ್ದ. ಕುಟುಂಬಕ್ಕೆ ಈತನೇ ಆಧಾರ ಸ್ತಂಭವಾಗಿದ್ದ. ಪ್ರಕಾಶ, ಇಸ್ಕಾನ್‌ನ ಅಕ್ಷಯ ಪಾತ್ರೆಯಲ್ಲಿ ಬಿಸಿಯೂಟ ತಯಾರಿಕೆಯ ಕೆಲಸಕ್ಕಿದ್ದರೆ, ಪತ್ನಿ ರೇಖಾ ಮನೆಯೊಂದರಲ್ಲಿ ಅಡುಗೆ ಕೆಲಸ ಮಾಡಿ ಪತಿಗೆ ಕುಟುಂಬ ನೌಕೆ ಎಳೆಯಲು ಸಹಕಾರಿಯಾಗುತ್ತಿದ್ದರು. ಹೀಗಾಗಿ ದುಡಿಮೆ ಹೊಟ್ಟೆ ಬಟ್ಟಿಗಷ್ಟೇ ಸಾಕಾಗುತ್ತಿತ್ತು. ಆದರೆ ಇದೀಗ ಗಂಡನನ್ನು ಕಳೆದುಕೊಂಡಿದ್ದೇನೆ. ವಯಸ್ಸಾದ ಅತ್ತೆ, ಮೂವರು ಸಣ್ಣ ಸಣ್ಣ ಮಕ್ಕಳು ಜೀವನ ಹೇಗೆ ಸಾಗಿಸೋದು ಗೊತ್ತಾಗುತ್ತಿಲ್ಲ ಎಂದು ರೇಖಾ ಕಣ್ಣೀರಾಗುತ್ತಿದ್ದಾಳೆ.

ಸರ್ಕಾರವೇನೋ ₹ 5 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿದೆ. ಆದರೆ ಈ ವರೆಗೂ ನೀಡಿಲ್ಲ. ಈ ಕುಟುಂಬದ ಪರಿಸ್ಥಿತಿ ನೋಡಿದರೆ ಪರಿಹಾರದ ಹಣ ಇನ್ನು ಹೆಚ್ಚಿಗೆ ಮಾಡಬೇಕು ಎಂದು ಸ್ಥಳೀಯ ನಿವಾಸಿ ರಾಜಣ್ಣ ಆಗ್ರಹಿಸುತ್ತಾರೆ.

ಮಗನಿಗೆ ಇನ್ನು ತಿಳಿಸಿಲ್ಲ:

ನಮ್‌ ಯಜಮಾನರು ತೀರಿಕೊಂಡಿದ್ದನ್ನು ಈವರೆಗೂ ದವಾಖಾನ್ಯಾಗ ಇರುವ ಮಗನಿಗೆ ತಿಳಿಸಿಲ್ಲ. ಅವನು ತನ್ನ ತಂದೆ ಜೀವಂತ ಅದಾರ್‌ ಅಂತ ತಿಳ್ಕೊಂಡ್ಯಾನ. ಅಪ್ಪ ಇಲ್ಲ ಅಂತ ಹ್ಯಾಂಗ್‌ ಹೇಳಬೇಕೋ? ಇನ್ನು ಮನ್ಯಾಗ ಇಬ್ಬರು ಸಣ್ಣ ಮಕ್ಕಳು ಅದಾವ್‌ ಅವರಿಗೆ ಹ್ಯಾಂಗ್‌ ಸಮಾಧಾನ ಮಾಡಬೇಕೋ ಅದು ಗೊತ್ತಾಗವಲ್ತು ಎಂದು ಮೃತ ಪ್ರಕಾಶ ಬಾರಕೇರ ಪತ್ನಿ ರೇಖಾ ಕಣ್ಣೀರು ಸುರಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನುವಾದಕರು ಸಾಂಸ್ಕೃತಿಕ ರಾಯಭಾರಿಗಳಿದ್ದಂತೆ:ಎಸ್.ಜಿ.ಎಸ್‌
9.5 ಲಕ್ಷ ಲಂಚ ಪಡೆದ ಕೇಂದ್ರ ವಿದ್ಯುತ್‌ಸಂಸ್ಥೆ ಜಂಟಿ ನಿರ್ದೇಶಕ ಸಿಬಿಐ ಬಲೆಗೆ