ಗೀತೆ ಕರ್ತವ್ಯಪ್ರಜ್ಞೆ ಮೂಡಿಸಿ, ಆಪತ್ತು ಕಳೆಯುತ್ತದೆ: ಪೇಜಾವರ ಶ್ರೀ

KannadaprabhaNewsNetwork |  
Published : Nov 09, 2025, 03:15 AM IST
08ಗೀತೆಪೇಜಾವರ ಶ್ರೀಗಳು ಗೀತೋತ್ಸವವನ್ನು ಉದ್ಘಾಟಿಸಿದರು | Kannada Prabha

ಸಾರಾಂಶ

ಕೃಷ್ಣಮಠದ ರಾಜಾಂಗಣದಲ್ಲಿ ಪರ‍್ಯಾಯ ಪುತ್ತಿಗೆ ಶ್ರೀಕೃಷ್ಣಮಠ ಆಶ್ರಯದಲ್ಲಿ ತಿಂಗಳ ಕಾಲ ನಡೆಯುವ ಬೃಹತ್ ಗೀತೋತ್ಸವವನ್ನು ಪೇಜಾವರ ಸ್ವಾಮೀಜಿ ಉದ್ಘಾಟಿಸಿದರು.

ಕೃಷ್ಣಮಠದ ರಾಜಾಂಗಣದಲ್ಲಿ ಬೃಹತ್ ಗೀತೋತ್ಸವವನ್ನು ಉದ್ಘಾಟನೆ

ಕನ್ನಡಪ್ರಭ ವಾರ್ತೆ ಉಡುಪಿ

ಕೃಷ್ಣನಲ್ಲಿ ಕರ್ತವ್ಯ ಪ್ರಜ್ಞೆ ಮೂಡಿಸಿದ, ಕೃಷ್ಣ ಬೋಧಿಸಿದ ಭಗವದ್ಗೀತೆ, ಅದನ್ನನುಸರಿಸಿದರೇ ನಮ್ಮಲ್ಲೂ ಕರ್ತವ್ಯ ಪ್ರಜ್ಞೆ ಮೂಡಿ, ಮತಿ ಹೆಚ್ಚಿ, ಆಪತ್ತು ದೂರವಾಗಿ, ಶ್ರೇಯಸ್ಸನ್ನುಂಟಾಗುತ್ತದೆ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹೇಳಿದರು.ಅವರು ಶನಿವಾರ ಕೃಷ್ಣಮಠದ ರಾಜಾಂಗಣದಲ್ಲಿ ಪರ‍್ಯಾಯ ಪುತ್ತಿಗೆ ಶ್ರೀಕೃಷ್ಣಮಠ ಆಶ್ರಯದಲ್ಲಿ ತಿಂಗಳ ಕಾಲ ನಡೆಯುವ ಬೃಹತ್ ಗೀತೋತ್ಸವವನ್ನು ಉದ್ಘಾಟಿಸಿ ಸಂದೇಶ ನೀಡಿದರು. ಅವರು ರಥದಲ್ಲಿ ಭಗವದ್ಗೀತೆಯ ಬೃಹತ್ ಪುಸ್ತಕವನ್ನು ಇರಿಸುವ ಮೂಲಕ ಗೀತೋತ್ಸವಕ್ಕೆ ಚಾಲನೆ ನೀಡಿದರು.ಸಾನ್ನಿಧ್ಯ ವಹಿಸಿದ್ದ ಪರ‍್ಯಾಯ ಪುತ್ತಿಗೆ ಮಠಾಧೀಶ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು, ದೇಶಕ್ಕೊಂದು ಸಂವಿಧಾನ ಇದ್ದಂತೆ, ಭಗವದ್ಗೀತೆ ಸಮಸ್ತ ಆಧ್ಯಾತ್ಮ ಜಗತ್ತಿಗೆ ಸಂವಿಧಾನವಾಗಿದೆ. ಈ ನಿಟ್ಟಿನಲ್ಲಿ ಅದು ಹಿಂದೂಗಳಿಗೆ ಮಾತ್ರವಲ್ಲ, ಸರ್ವರಿಗೂ ಮಾನ್ಯವಾದುದು ಎಂದಭಿಪ್ರಾಯಪಟ್ಟರು.

ಪುತ್ತಿಗೆ ಮಠದ ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಿದರು. ಅಭ್ಯಾಗತರಾಗಿ ಮಣಿಪಾಲ ಮಿಡಿಯಾ ನೆಟ್‌ವರ್ಕ್‌ ಅಧ್ಯಕ್ಷ ಟಿ.ಸತೀಶ ಪೈ ಮತ್ತು ತರಂಗ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಸಂಧ್ಯಾ ಪೈ, ಉದ್ಯಮಿ ಡಾ.ಕನ್ಯಾನ ಸದಾಶಿವ ಶೆಟ್ಟಿ, ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎಚ್.ಪಿ. ರಾಘವೇಂದ್ರ, ಅಮೆರಿಕಾದ ಹಾರ್ವರ್ಡ್ ವಿವಿಯ ಪ್ರೊ.ಫ್ರಾನ್ಸಿಸ್ ಕ್ಲೂನಿ, ಅಮೆರಿಕಾದ ಸೀಟನ್ ಹಾಲ್ ವಿವಿಯ ಪ್ರೊ. ಆ್ಯಲನ್ ಬ್ರಿಲ್ ಮತ್ತು ಅಮೆರಿಕಾದ ವಿದ್ವಾಂಸ ಕೇಶವ ರಾವ್ ತಾಡಪತ್ರಿ ಅಭ್ಯಾಗತರಾಗಿದ್ದರು. ಮಠದ ದಿವಾನ ನಾಗರಾಜ ಆಚಾರ್ಯ, ಕಾರ್ಯದರ್ಶಿ ಪ್ರಸನ್ನಾಚಾರ್ಯ ಇದ್ದರು. ಗೀತೋತ್ಸವ ಸಮಿತಿ ಸಂಚಾಲಕ ಬೈಕಾಡಿ ಸುಪ್ರಸಾದ ಶೆಟ್ಟಿ ಸ್ವಾಗತಿಸಿ, ವಿಕ್ರಮ್ ಕುಂಟಾರು ವಂದಿಸಿದರು. ವಿದ್ವಾನ್ ಮಹಿತೋಷ ಆಚರ‍್ಯ ನಿರೂಪಿಸಿದರು. ಈ ಸಂದರ್ಭದಲ್ಲಿ ಯೋಗೀಂದ್ರ ಭಟ್ ವಿರಚಿತ ‘ಕರ್ಸ್‌ ಆಫ್ ಲೈಟ್ಸ್’ ಮತ್ತು ಮಹೇಶ್ ಕಡವು ವಿರಚಿತ ‘ದಿ ಅರ್ಜುನ ವೇ’ ಎಂಬೆರಡು ಗೀತೆ ಕುರಿತ ಆಂಗ್ಲ ಕೃತಿಗಳ ಅನಾವರಣ ನಡೆಯಿತು. ಸುಗುಣಶ್ರೀ ಭಜನಾ ಮಂಡಳಿಯ ಶಿವಾನಿ ಅವರನ್ನು ಗೌರವಿಸಲಾಯಿತು.ಪೇಜಾವರಶ್ರೀ ‘ರಾಮಸೇವಾ ಧುರಂಧರ’

ಅಯೋಧ್ಯೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವಿಶ್ವಸ್ಥರಾಗಿರುವ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರಿಗೆ ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ‘ಶ್ರೀರಾಮಸೇವಾ ಧುರಂಧರ’ ಉಪಾದಿಯೊಂದಿಗೆ ಮುತ್ತಿನ ಕಿರೀಟ ತೊಡಿಸಿ, ರಜತಫಲಕದ ಸನ್ಮಾನಪತ್ರ ಸಹಿತ ವಿಶೇಷವಾಗಿ ಗೌರವಿಸಿದರು. ಪೇಜಾವರ ಶ್ರೀಗಳು ಕೃಷ್ಣಸೇವೆಯೊಂದಿಗೆ ರಾಮಸೇವೆಯಲ್ಲಿಯೂ ನಿರತರಾಗಿದ್ದಾರೆ. ಆದ್ದರಿಂದಲೇ ಅಯೋಧ್ಯೆ ರಾಮ ಮಂದಿರ ನಿರ್ಮಾಣದಲ್ಲಿ ಪೇಜಾವರ ಶ್ರೀಗಳ ಪಾತ್ರ ಗಮನೀಯವಾಗಿತ್ತು ಎಂದು ಪುತ್ತಿಗೆ ಶ್ರೀಗಳು ಹೇಳಿದರು.ಸನ್ಮಾನ ಸ್ವೀಕರಿಸಿದ ಪೇಜಾವರ ಶ್ರೀಪಾದರು, ಶಿಷ್ಯನಾಗಿ ಗುರುಗಳು ನೀಡಿದ ಗೌರವವನ್ನು ಸ್ವೀಕರಿಸುವುದಾಗಿ ತಿಳಿಸಿ, ಪುತ್ತಿಗೆ ಶ್ರೀಗಳ ಶಿಷ್ಯವಾತ್ಸಲ್ಯವನ್ನು ಕೊಂಡಾಡಿದರು.ಗೀತಾ ಹೋಮ - ಗೀತಾ ಮೆರವಣಿಗೆ

ಈ ಬೃಹತ್ ಗೀತೋತ್ಸವ ಅಂಗವಾಗಿ ಗೀತಾ ಮಂದಿರದಲ್ಲಿ ಭಗವದ್ಗೀತೆಯ 700 ಶ್ಲೋಕಗಳಿಂದ ಗೀತಾ ಹೋಮ, ರಾಜಾಂಗಣದಲ್ಲಿ 500 ಭಕ್ತರಿಂದ ಸಹಸ್ರಕಂಠ ಮಧ್ವವಿಜಯ ಪಾರಾಯಣ, ಗೀತಾ ಮಂದಿರದಲ್ಲಿ ಮಹಿಳೆಯರಿಂದ ಸಹಸ್ರಕಂಠ ಲಕ್ಷ್ಮೀಶೋಭಾನೆ, ರಥಬೀದಿಯಲ್ಲಿ ಭಗವದ್ಗೀತಾ ಮೆರವಣಿಗೆ ನಡೆಯಿತು.

PREV

Recommended Stories

ವಂದೇ ಮಾತರಂ ಭಾರತ ಮಾತೆಯ ಪ್ರೇರಣಾ ಶಕ್ತಿ: ಸಂಸದ ಗದ್ದಿಗೌಡರ
10, 11, ರಂದು ರಾಜ್ಯ ಟ್ರ್ಯಾಕ್‌ ಸೈಕ್ಲಿಂಗ್‌ ತಂಡಗಳ ಆಯ್ಕೆ